ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸುವ ರಾಜ್ಯ ಸರ್ಕಾರದ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮದಡಿ ತಾಲೂಕಿನ ಕುರಡಿಕೇರಿ ಸರ್ಕಾರಿ ಪ್ರೌಢಶಾಲೆಯ ಅಭಿವೃದ್ಧಿಗೆ ಒಂದೇ ದಿನದಲ್ಲಿ 1.35 ಲಕ್ಷ ರೂ. ದೇಣಿಗೆ ಸಂಗ್ರಹಿಸಲಾಯಿತು.
ಗ್ರಾಮೀಣ ಬಿಇಒ ಉಮೇಶ ಬೊಮ್ಮಕ್ಕನವರ ಉಪಸ್ಥಿತಿಯಲ್ಲಿ ಶಾಲೆಯಲ್ಲಿ ಇತ್ತೀಚೆಗೆ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮ ಅನುಷ್ಠಾನಗೊಳಿಸಲಾಯಿತು. ಅಂದೇ ಶಾಲೆಯ ಹಳೇ ವಿದ್ಯಾರ್ಥಿಗಳು, ಗ್ರಾಮಸ್ಥರು ಆರ್ಥಿಕ ನೆರವು ನೀಡಿದರು. ಶಾಲಾ ಸ್ವಂತ ಕಟ್ಟಡ ಹಾಗೂ ಕೊಠಡಿ ನಿರ್ವಣ, ಶೌಚಾಲಯ, ಸುಸಜ್ಜಿತವಾದ ಪ್ರಯೋಗಾಲಯ, ಇನ್ನಿತರ ಮೂಲ ಸೌಕರ್ಯ ಸೃಷ್ಟಿಸುವ ಬಗ್ಗೆ ರ್ಚಚಿಸಲಾಯಿತು. ಕುರಡಿಕೇರಿ, ಕರಡಿಕೊಪ್ಪ, ಇನಾಂ ವೀರಾಪುರ, ವೀರಾಪುರ, ಕಂಪ್ಲಿಕೊಪ್ಪ ಗ್ರಾಮಸ್ಥರು ಪಾಲ್ಗೊಂಡು ಸಲಹೆ, ಸೂಚನೆ ನೀಡಿದರು.
ಗ್ರಾಪಂ ಅಧ್ಯಕ್ಷ ಗುರುಸಿದ್ದಪ್ಪ ತಳವಾರ, ಉಪಾಧ್ಯಕ್ಷೆ ಜಯಲಕ್ಷ್ಮೀ ಪೂಜಾರ, ಎಸ್ಡಿಎಂಸಿ ಅಧ್ಯಕ್ಷ ಬಸವರಾಜ ವಡ್ಡರ, ಮುಖ್ಯೋಧ್ಯಾಪಕಿ ಎಸ್. ಎಂ. ದೊಡಗಟ್ಟಿ , ಇತರರು ಇದ್ದರು. ಶಿಕ್ಷಕಿ ರಾಜಶ್ರೀ ಬೀಡಿ ನಿರೂಪಿಸಿದರು.
ವಾಟ್ಸ್ ಆಪ್ ಗ್ರುಪ್ ರಚನೆ
ಶಾಲೆಯ ಪ್ರಗತಿಗಾಗಿ ಹಳೆಯ ವಿದ್ಯಾರ್ಥಿಗಳ ವಾಟ್ಸ್ಆಪ್ ಗ್ರುಪ್ ರಚಿಸಲಾಗಿದೆ. ಮುಂದಿನ ಶಾಲಾ ಅಭಿವೃದ್ಧಿಗೆ ಬೇಕಾದ ಕಾರ್ಯ ಚಟುವಟಿಕೆಗಳ ಕುರಿತು ಈ ಗ್ರುಪ್ನಲ್ಲಿ ರ್ಚಚಿಸಿ ಸೂಕ್ತ ನಿರ್ಧಾರ ಕೈಗೊಳ್ಳ ಲಾಗುವುದು. ಈ ಗ್ರೂಪ್ನಲ್ಲಿ ಇದೇ ಶಾಲೆಯಲ್ಲಿ ಕಲಿತ 430 ಹಳೆಯ ವಿದ್ಯಾರ್ಥಿಗಳನ್ನು ಸೇರ್ಪಡೆ ಗೊಳಿಸಲಾಗಿದೆ ಎಂದು ಶಿಕ್ಷಕಿ ರಾಜಶ್ರೀ ಬೀಡಿ ತಿಳಿಸಿದ್ದಾರೆ.