ವಿಜಯವಾಣಿ ಸುದ್ದಿಜಾಲ ಧಾರವಾಡ
ಪರಿಶಿಷ್ಟ ಜಾತಿಗಳಿಗೆ ಒಳಮೀಸಲು ಕಲ್ಪಿಸಲು ರಾಜ್ಯ ಸರ್ಕಾರ ನೇಮಿಸಿರುವ ನ್ಯಾ. ನಾಗಮೋಹನದಾಸ್ ಆಯೋಗಕ್ಕೆ ರಾಜ್ಯದ ಎಲ್ಲ ತಾಲೂಕುಗಳಿಂದ ಮಾದಿಗರ ದತ್ತಾಂಶ ಸಂಗ್ರಹಿಸಿ ಸಲ್ಲಿಸುವಂತೆ ಕೇಂದ್ರ ಮಾಜಿ ಸಚಿವ ಆನೇಕಲ್ ನಾರಾಯಣಸ್ವಾಮಿ ಅವರು ಮಾದಿಗ ಸಂಘಟನೆಗಳಿಗೆ ಕರೆ ನೀಡಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಮಾದಿಗ ವಿದ್ಯಾರ್ಥಿ ಒಕ್ಕೂಟ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಪ್ರಾಯೋಗಿಕ ದತ್ತಾಂಶ ಸಂಗ್ರಹ ಕುರಿತ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಲಭಿಸಿ 75 ವರ್ಷ ಕಳೆದರೂ ಪರಿಶಿಷ್ಟರಲ್ಲಿ ಕೆಲ ಜಾತಿಗಳು ಅಭಿವೃದ್ಧಿಯಲ್ಲಿ ಹಿಂದುಳಿದಿವೆ. ಇದಕ್ಕೆ ಕಾರಣ ಹುಡುಕಲು ಈಗಾಗಲೇ ಹಲವು ಆಯೋಗ, ಸಮಿತಿಗಳು ರಚನೆಯಾಗಿ ವರದಿ ಸಲ್ಲಿಕೆಯಾಗಿವೆ. ಅವುಗಳಲ್ಲಿನ ದತ್ತಾಂಶ ಮತ್ತು ಆಯಾ ತಾಲೂಕು ಮಟ್ಟದಲ್ಲಿ ಲಭ್ಯವಿರುವ ಅಂಕಿ ಅಂಶ ಸಂಗ್ರಹಿಸಿ ಆಯೋಗಕ್ಕೆ ಪ್ರತಿ ತಾಲೂಕಿನಿಂದ ಪ್ರತ್ಯೇಕ ಮನವಿ ಸಲ್ಲಿಸುವುದು ಅತ್ಯಗತ್ಯ ಎಂದರು.
ಮಾಜಿ ಸಚಿವ ಹನುಮಂತಪ್ಪ ಅಲ್ಕೋಡ ಮಾತನಾಡಿ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಎಲ್ಲ ಸಮುದಾಯಗಳ ದತ್ತಾಂಶ ಇರುತ್ತದೆ. ಅದನ್ನೇ ಆಧರಿಸಿ ಒಳಮೀಸಲು ನೀಡಬೇಕಿತ್ತು. ಆದಾಗ್ಯೂ ಹೊಸ ಆಯೋಗ ರಚಿಸಿದೆ. ನಮ್ಮ ಬೇಡಿಕೆ ಈಡೇರಿಸುವಾಗ ಮಾತ್ರ ಇಂತಹ ನೆಪಗಳನ್ನು ಹುಡುಕಲಾಗುತ್ತಿದೆ ಎಂದರು.
ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, 30 ವರ್ಷಗಳ ಹೋರಾಟದ ಫಲವಾಗಿ ಒಳಮೀಸಲಾತಿ ಪಡೆಯುವ ಹಂತಕ್ಕೆ ಬಂದಿದ್ದೇವೆ. ಭಾವನಾತ್ಮಕತೆ ಬಿಟ್ಟು ವಾಸ್ತವ ನೆಲೆಗಟ್ಟಿನಲ್ಲಿ ದತ್ತಾಂಶ ಇದ್ದ ಮನವಿಯನ್ನು ಆಯೋಗಕ್ಕೆ ಸಲ್ಲಿಸೋಣ ಎಂದರು.
ಕವಿವಿ ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿಹಾಳ, ಸಾನ್ನಿಧ್ಯ ವಹಿಸಿದ್ದ ಚಿತ್ರದುರ್ಗ ಕೋಡಿಹಳ್ಳಿ ಆದಿಜಾಂಬವ ಮಹಾಸಂಸ್ಥಾನದ ಶ್ರೀ ಷಡಕ್ಷರಿಮುನಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿದರು.
ಡಾ. ಜಿ.ಬಿ.ನಂದನ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಐಆರ್ಎಸ್ ಅಧಿಕಾರಿ ಎಚ್.ಆರ್. ಭೀಮಾಶಂಕರ, ಪ್ರೊ. ಶಿವಶರಣ ಸಿ.ಟಿ, ಪ್ರೊ. ಮಹಾದೇವಪ್ಪ ದಳಪತಿ, ಪರಸಪ್ಪ ಮಾಂಗ, ಮಂಜುನಾಥ ಹಾಸಟ್ಟಿ, ತರುಣ ದೊಡಮನಿ, ಅಜಿತ ಮ್ಯಾಗಡಿ, ನಾಗರಾಜ ಮಾದರ, ವಿರೂಪಾಕ್ಷ ಮಾಚನೂರ, ಇತರರು ಇದ್ದರು.