ಕುಸಿದಿರುವ ಸ್ಲ್ಯಾಬ್. 
ಜಿಲ್ಲೆ

ಕುಸಿದ ಚರಂಡಿ ಸ್ಲ್ಯಾಬ್ : ತಿಂಗಳಾದರೂ ದುರಸ್ತಿಯಾಗದ್ದಕ್ಕೆ ನಾಗರಿಕರಿಂದ ತೀವ್ರ ಆಕ್ರೋಶ

ಸೌಮ್ಯ ಆರ್

ಮಂಜೇಶ್ವರ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ 12ನೇ ವಾರ್ಡಿನ ಮಂಜೇಶ್ವರ ರಿಜಿಸ್ಟ್ರಾರ್ ಕಚೇರಿ ಮುಂಭಾಗದಲ್ಲಿ ತ್ಯಾಜ್ಯ ನೀರು ಹರಿದು ಹೋಗುವ ಸ್ಲಾೃಬ್ ಕುಸಿದು ಬಿದ್ದು ತಿಂಗಳುಗಳೇ ಕಳೆದರೂ ದುರಸ್ತಿಪಡಿಸಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ.

ಈ ಸ್ಲಾೃಬ್ ಕುಸಿದ ಚರಂಡಿಯ ಮುಂಭಾಗದಲ್ಲೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಯನಿರ್ವಹಿಸಿದ್ದು, ತೆರೆದಿಟ್ಟಿರುವ ಚರಂಡಿಯ ದುರ್ಗಂಧದಿಂದ ಮೂಗುಮುಚ್ಚಿ ಶಾಲೆಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ರಿಜಿಸಟ್ರೆಾರ್ ಕಚೇರಿಗೂ ಇದೇ ಚರಂಡಿಯ ಮುಂಭಾಗದಿಂದ ತೆರಳಬೇಕಾಗಿದೆ.

ಚರಂಡಿಯ ತ್ಯಾಜ್ಯ ನೀರಿನೊಂದಿಗೆ ಮಳೆ ನೀರು ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಹರಿಯುತ್ತಿದೆ. ದಸ್ತಾವೇಜು ಬರಹಗಾರರು ಹಾಗೂ ಇತರ ಹಲವಾರು ಕಚೇರಿಗಳು ಇದರ ಸಮೀಪದಲ್ಲೇ ಇದ್ದರೂ, ಈ ಪರಿಸರ ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಜನರು ಅಳಲು ತೋಡಿಕೊಂಡಿದ್ದಾರೆ.

ಸ್ಥಳೀಯರು ಈ ಬಗ್ಗೆ ಆರೋಗ್ಯ ಇಲಾಖೆಗೆ ದೂರು ನೀಡಿದಾಗ ತಕ್ಷಣ ವೀಕ್ಷಣೆ ನಡೆಸಿ ತೆರಳಿ ತಿಂಗಳುಗಳು ಕಳೆದರೂ ಯಾರೂ ತಿರುಗಿಯೂ ನೋಡಿಲ್ಲವೆಂದು ದೂರಲಾಗಿದೆ. ಸಂಬಂಧಪಟ್ಟವರು ಇತ್ತ ಗಮನ ಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.