ಜಿಲ್ಲೆ

ರಾಜ್ಯದಲ್ಲಿ ಆಡಳಿತಯಂತ್ರ ಕುಸಿತ:ಎಸ್.ವಿ.ಉಗ್ರಪ್ಪ ಹೇಳಿಕೆ

Bellari - Heera Nayak

ಬಳ್ಳಾರಿ : ರಾಜ್ಯದಲ್ಲಿ ಚುನಾವಣಾ ಕಾರ್ಮೋಡಗಳು ಕಾಣುತ್ತಿವೆ. ಆಡಳಿತ ಯಂತ್ರ ಕುಸಿದಿದೆ. ವಿಧಾನಸೌಧ ಖಾಲಿ ಖಾಲಿ ಆಗಿದೆ ಎಂದು ಕಾಂಗ್ರೆಸ್ ನಾಯಕ ಎಸ್.ವಿ.ಉಗ್ರಪ್ಪ ಹೇಳಿದರು.

ರಾಜ್ಯ ಸರ್ಕಾರವೂ ಸಂವಿಧಾನದ ರೀತಿಯಲ್ಲಿ, ಜನಪರವಾದಂತಹ ಕೆಲಸ ಮಾಡುತ್ತೇವೆ, ರಾಜ್ಯದ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುತ್ತಿದೆ. ಮತ್ತೊಂದೆಡೆ ಭ್ರಷ್ಟಾಚಾರದ ಗಂಗೋತ್ರಿ ಹರಿಯುತ್ತಿದೆ. ಯಾವುದೇ ಇಲಾಖೆ ಭ್ರಷ್ಟಾಚಾರದಿಂದ ಹೊರತಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ‘ನಾನು ತಿನ್ನುವುದಿಲ್ಲ ತಿನ್ನುವುದಕ್ಕೂ ಬಿಡಲ್ಲ’ ಎನ್ನುತ್ತಾರೆ. ಆದರೆ ಜನಪ್ರತಿನಿಧಿಗಳ ಮೇಲೆ ಭ್ರಷ್ಟಾಚಾರದ ಆರೋಪಗಳು ಸಾಕಷ್ಟಿದ್ದರೂ ಮೋದಿ ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶ್ರೀರಾಮುಲು ಅವರ ಮೇಲೆ ಚಾರ್ಜ್‌ಶೀಟ್ ಹಾಗಲಾಗಿದೆ. ಕಾಫಿ ಹೊಡೆಯುವುದರಲ್ಲಿ ಪಿಎಚ್‌ಡಿ ಮಾಡಿದ್ದೇನೆ ಎಂದು ಶ್ರೀರಾಮುಲು ಹೇಳಿದ್ದಾರೆ. ಕಾಲೇಜು ದಿನಗಳಿಂದಲೇ ರೌಡಿಸಂ ಮಾಡುತ್ತಿದ್ದೇ ಎಂದಿದ್ದಾರೆ. ಯಡಿಯೂರಪ್ಪ ಅವರ ಮೇಲೂ ಕೇಸ್‌ಗಳಿಗೆ. ಆನಂದ ಸಿಂಗ್, ಪ್ರಭು ಚವ್ಹಾಣ ಸೇರಿದಂತೆ ಬಹುತೇಕ ನಾಯಕರ ಮೇಲೆ ಅನೇಕ ಪ್ರಕರಣಗಳಿವೆ ಎಂದರು.

ವೈಚಾರಿಕವಾಗಿ ಬಿಜೆಪಿ ದಿವಾಳಿ
ವೈಚಾರಿಕವಾಗಿ ಬಿಜೆಪಿ ನಾಯಕರು ದಿವಾಳಿ ಆಗಿದ್ದಾರೆ.ನಾಲಿಗೆ ಮೇಲೆ ಹಿಡಿತ ಇಲ್ಲದ ಮಿಸ್ಟರ್ ಕೆ.ಎಸ್.ಈಶ್ವರಪ್ಪ ನಾಲಿಗೆ ಹರಿ ಬಿಟ್ಟಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರಿಗೆ ತಾಯಿ ಯಾರು ಅಂತ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದೊಂದು ಅಪಚಾರದ ಹೇಳಿಕೆ. ಪಕ್ಷ ಎಲ್ಲರಿಗೂ ತಾಯಿ ಸಮಾನ. ಡಿಕೆಶಿ ಸೇರಿದಂತೆ ಪಕ್ಷದ ಆದೇಶ ಮೀರಿ ಯಾರು ನಿಲ್ಲಲ್ಲ. ಪಕ್ಷಕ್ಕೆ ಎಲ್ಲರೂ ಗೌರವಿಸುತ್ತಾರೆ. ಆದರೆ ಆಚಾರ ಇಲ್ಲದ ನಾಲಿಗೆ ಹರಿದು ಬಿಟ್ಟಿದ್ದಾರೆ. ಅಧಿಕಾರ ಇಲ್ಲದೆ ಮೂಲೆಗುಂಪು ಆಗಿರುವುದರಿಂದ ಈ ರೀತಿ ಹೇಳಿಕೆ ನೀಡಿರುವುದು ಖಂಡನೀಯ. ಇದೊಂದು ತಾಯಿಗೆ ಮಾಡಿದ ಅಪಚಾರ. ನಾವೇನೂ ಬಳೆ ತೊಟ್ಟಿಲ್ಲ ಎಂದು ಹೇಳಿಕೆ ನೀಡಿರುವ ಶ್ರೀರಾಮುಲು ಅವರ ವೀರಾವೇಷದ ಮಾತುಗಳ ಮೇಲೆ ಹಿಡಿತ ಇರಬೇಕು. ಎಲ್ಲ ತಾಯಂದಿರಿಗೆ ಮಾಡಿದ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೋಲಿನ ಭೀತಿಗಾಗಿ ಚುನಾವಣೆಗೆ ಹಿಂದೇಟು
ಜನವಿರೋಧಿ ಬಿಜೆಪಿ ಸರ್ಕಾರಕ್ಕೆ ಸೋಲಿನ ಭೀತಿ ಎದುರಾಗಿದೆ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ವಿಳಂಬ ಮಾಡುತ್ತಿರುವ ಸರ್ಕಾರದ ನೀತಿ ಖಂಡನೀಯ. ಹೈಕೋರ್ಟ್ ಕೂಡ 5 ಲಕ್ಷ ರೂ. ದಂಡ ವಿಧಿಸಿದೆ.
ಜಿಪಂ, ತಾಪಂ, ಬಿಬಿಎಂಪಿ ಚುನಾವಣೆಗಳು ನಡೆದಿಲ್ಲ. ಯಾವ ಮುಖ ಹೊತ್ತುಕೊಂಡು ಸರ್ಕಾರ ಅಧಿಕಾರ ನಡೆಸುತ್ತಿದೆ. ಇದರಿಂದ ಪ್ರಜಾಪ್ರಭುತ್ವ ಹಕ್ಕು ಮೊಟಕಾಗಿದೆ. ಚುನಾವಣೆ ನಡೆಸದಿದ್ದರೆ ಸ್ಥಳೀಯ ಸಂಸ್ಥೆಗಳನ್ನು ರದ್ದುಗೊಳಿಸಲಿ.ಇನ್ನೂ ಚಿಲುಮೆ ಸಂಸ್ಥೆಯನ್ನು ಬಳಸಿಕೊಂಡು ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಎಂದರು.

ಮೀಸಲಾತಿ ಹೆಚ್ಚಳ ಮೂಗಿಗೆ ತುಪ್ಪ ಸವರುವ ತಂತ್ರ
ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ದಿಗ್ವಿಜಯ ಸಾಧಿಸಿದ್ದೇವೆ ಎಂದು ಬಿಜೆಪಿ ನಾಯಕರು ಎಸ್.ಸಿ ಹಾಗೂ ಎಸ್.ಟಿ ಜನರ ಮೂಗಿಗೆ ತುಪ್ಪ ಸವರಿದ್ದಾರೆ. ಶೇ.50ಕ್ಕಿಂತ ಹೆಚ್ಚಿನ ಮೀಸಲಾತಿ ನೀಡಲು ಸಂವಿಧಾನಾತ್ಮಕವಾಗಿ ಸಾಧ್ಯವಿಲ್ಲ. ಆದರೆ ಮೀಸಲಾತಿ ಹೆಚ್ಚಳ ಮಾಡಿರುವುದರಿಂದ ಶೇ.56ಕ್ಕೇರಲಿದೆ. ಅಲ್ಲದೆ ಆರ್ಥಿಕವಾಗಿ ಹಿಂದುಳಿದವರಿಗೆ ಕೇಂದ್ರದಿಂದ ಶೇ.10 ರಷ್ಟು ಮೀಸಲಾತಿ ನೀಡಲಾಗಿದೆ. ಇದೊಂದು ಸಂವಿಧಾನ ವಿರೋಧಿ ಕೆಲಸ. ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದರು. ಮೀಸಲಾತಿ ಹೆಚ್ಚಳ ಕೇವಲ ವೋಟ್ ಬ್ಯಾಂಕ್‌ಗಾಗಿ ಮಾಡಲಾಗಿದೆ. ಡಬಲ್ ಇಂಜಿನ್ ಸರ್ಕಾರಕ್ಕೆ ಜನಪರ ಕಾಳಜಿ ಇಲ್ಲ. ಕೇವಲ ಅಧಿಕಾರಕ್ಕಾಗಿ ಹೇಳಿಕೆಗಳು ಸೀಮಿತವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ 30 ಕೋಟಿಗೂ ಅಧಿಕ ಹಾಗೂ ರಾಜ್ಯದಲ್ಲಿ 1.75 ಕೋಟಿ ಎಸ್.ಸಿ, ಎಸ್.ಟಿ ಜನರಿದ್ದಾರೆ. ಸಂವಿಧಾನದತ್ತವಾಗಿ ಕೆಲವು ಸೌಲಭ್ಯಗಳನ್ನು ಕೊಟ್ಟು ಮೂಗಿಗೆ ತುಪ್ಪ ಸವಿಯುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಜ.8ರಂದು ಚಿತ್ರದುರ್ಗದಲ್ಲಿ ಐಕ್ಯತಾ ಸಮಾವೇಶ
ಮೀಸಲಾತಿ ಭೀಕ್ಷೆ ಅಲ್ಲ ಎನ್ನುವ ಸಂದೇಶದೊಂದಿಗೆ ಚಿತ್ರದುರ್ಗದಲ್ಲಿ ಐಕ್ಯತಾ ಸಮಾವೇಶ ಜ.8ರಂದು ಹಮ್ಮಿಕೊಳ್ಳಲಾಗಿದೆ. ಪರಿಶಿಷ್ಟ ಜಾತಿಯಲ್ಲಿ 102 ಉಪ ಜಾತಿ ಹಾಗೂ ಪರಿಶಿಷ್ಟ ಪಂಗಡದಲ್ಲಿ 51 ಉಪ ಜಾತಿಗಳು ಬರಲಿದೆ. ಈ ಸಮಾವೇಶಕ್ಕೆ 5 ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಶ್ರೀರಾಮುಲು ಪಲಾಯನ ಸಲ್ಲ
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ನಾನೂ ಕೂಡ ಸ್ಪರ್ಧಿಸಲು ಅರ್ಜಿ ಹಾಕಿದ್ದೇನೆ. ಶ್ರೀರಾಮುಲು ಪಲಾಯನವಾದ ಮಾಡದೆ ಸ್ಪರ್ಧಿಸಲಿ. ಜನ ತೀರ್ಮಾನ ಮಾಡುತ್ತಾರೆ. ಪಕ್ಷ ಬಯಸಿದರೆ ಸ್ಪರ್ಧೆ ಮಾಡುತ್ತೇನೆ. ಡಿಕೆಶಿ -ಸಿದ್ದರಾಮಯ್ಯ ಸಾಮರಸ್ಯ, ಹೊಂದಾಣಿಕೆಯಿಂದ ಇದ್ದಾರೆ. ಆದರೆ ಬಿಜೆಪಿ ನಾಯಕರು ದ್ವಂದ್ವ ನಿಲುವುಗಳಿಂದ ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ನಮ್ಮ ಸೋಲಿಗೆ ಬಿಜೆಪಿ ವಾಮಾಮಾರ್ಗ ಕಾರಣ
ಕಳೆದ 27ವರ್ಷಗಳಿಂದ ಗುಜರಾತ್‌ನಲ್ಲಿ ಮತದಾರರು ಬಿಜೆಪಿಗೆ ಯಾವ ಕಾರಣಕ್ಕೆ ಮತ ನೀಡುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ.
ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ, ಕಪ್ಪು ಹಣವನ್ನು ವಾಪಸ್ ತಂದು ಪ್ರತಿಯೊಬ್ಬರಿಗೆ 15 ಲಕ್ಷ ರೂ. ಹಂಚುತ್ತೇವೆ ಎಂದ ಪ್ರಧಾನಿ ಮೋದಿ ಅವರಿಗೆ ಯಾವ ಪುರುಷಾರ್ಥಕ್ಕೆ ಮತ ನೀಡಿದ್ದಾರೆ. ಗೋವಾ, ಮಹಾರಾಷ್ಟ್ರ, ಕರ್ನಾಟಕದಲ್ಲಿ ವಾಮಾಮಾರ್ಗದಲ್ಲಿ ಅಧಿಕಾರ ಹಿಡಿಯಲಾಗುತ್ತಿದೆ.ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನಕ್ಕೆ ಗಂಡಾಂತರ ಇದೆ ಎಂದು ನುಡಿದರು.