ಜಿಲ್ಲೆ

ವಿವಿಗಳ ನಡುವಿನ ಸಹಭಾಗಿತ್ವ ಕಲಿಕೆಗೆ ವೇದಿಕೆ: ಪ್ರೊ.ಕೆ.ಎಸ್.ರಂಗಪ್ಪ

reportermys

ಮೈಸೂರು: ವಿಶ್ವವಿದ್ಯಾಲಯಗಳ ನಡುವಿನ ಅಂತಾರಾಷ್ಟ್ರೀಯ ಸಹಭಾಗಿತ್ವದ ಶೈಕ್ಷಣಿಕ ಚಟುವಟಿಕೆ ಕಲಿಕೆಗೆ ವಿಶೇಷವಾದ ವೇದಿಕೆ ಕಲ್ಪಿಸುತ್ತವೆ ಎಂದು ಮೈಸೂರು ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ತಿಳಿಸಿದರು.


ಮೈಸೂರು ವಿಶ್ವವಿದ್ಯಾಲಯವು ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಬುಧವಾರ ಆಯೋಜಿಸಿದ್ದ ಫ್ರಾನ್ಸ್ ದೇಶದಲ್ಲಿನ ಉನ್ನತ ಶಿಕ್ಷಣದ ಅವಕಾಶಗಳು ಹಾಗೂ ವೈಜ್ಞಾನಿಕ ಸಹಕಾರ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.


ಒಂದು ದೇಶದ ವಿವಿಯಲ್ಲಿ ಸಾಕಷ್ಟು ಪ್ರಾಧ್ಯಾಪಕರು ಕರ್ತವ್ಯ ನಿರ್ವಹಿಸುತ್ತಾರೆ. ಅಂತಾರಾಷ್ಟ್ರೀಯ ಸಹಭಾಗಿತ್ವದಿಂದ ಇವರೆಲ್ಲರ ಬುದ್ಧಿವಂತಿಕೆ ಪರಿಚಯವಾಗುತ್ತದೆ. ಹೊಸ ವಿಚಾರಗಳ ವಿನಿಮಯವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಸಂಶೋಧನೆಗೆ ಇದು ಹೊಸದೊಂದು ವೇದಿಕೆ ಕಲ್ಪಿಸಿಕೊಡುತ್ತದೆ. ಇದರಿಂದ ವಿವಿಗಳಿಗೂ ಗೌರವ ಸಿಗುತ್ತದೆ. ಇದರಿಂದ ಕೌಶಲ ವೃದ್ಧಿಯೂ ಆಗುತ್ತದೆ ಎಂದು ತಿಳಿಸಿದರು.


ಅಂತಾರಾಷ್ಟ್ರೀಯ ಸಹಭಾಗಿತ್ವದಿಂದ ಪ್ರಾಧ್ಯಾಪಕರಿಗೆ ಹಾಗೂ ಸಂಶೋಧಕರಿಗೆ ಹೊಸ ಬಗೆಯ ವೃತ್ತಿ ಅನುಭವ ಸಿಗುತ್ತದೆ. ಹೊಸ ಪ್ರಯೋಗಗಳ ಮೂಲಕ ಸಮಾಜಕ್ಕೆ ತಮ್ಮ ಕೊಡುಗೆ ನೀಡಬಹುದು. ಅದಕ್ಕಿಂತ ಹೆಚ್ಚಾಗಿ ಜ್ಞಾನಾರ್ಜನೆಗೆ ಯಾವುದೇ ಗಡಿಗಳ ಮಿತಿ ಇಲ್ಲ ಎಂಬುದನ್ನು ಇದು ನಿರೂಪಿಸುತ್ತದೆ. ಹಾಗಾಗಿ ವಿವಿಗಳಲ್ಲಿ ಹೆಚ್ಚು ಅಂತಾರಾಷ್ಟ್ರೀಯ ಒಪ್ಪಂದ, ಒಡಂಬಡಿಕೆ, ಸಹಭಾಗಿತ್ವ ರಚನೆಯಾದಷ್ಟು ಹೆಚ್ಚೆಚ್ಚು ಸಂಶೋಧನೆಗಳು ನಡೆಯುತ್ತವೆ ಎಂದರು.


ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ಮಾತನಾಡಿದರು. ಫ್ರಾನ್ಸ್ ವಿದೇಶಾಂಗ ಸಚಿವಾಲಯದ ಕೌನ್ಸಿಲರ್ ಥೈರಿ ಬರ್ತೋಲೆಟ್, ಸಿಎನ್‌ಆರ್‌ಎಸ್ ನಿರ್ದೇಶಕ ಡಾ.ಶ್ರೀನಿ ಕಾವೇರಿ, ಕುಲಸಚಿವ ಪ್ರೊ.ಆರ್.ಶಿವಪ್ಪ ಇತರರಿದ್ದರು.