ಜಿಲ್ಲೆ

ಪರಂ-ಕೆಎನ್ನಾರ್​ ಮುಸುಕಿನ ಗುದ್ದಾಟ !

ಜಗನ್ನಾಥ್ ಕಾಳೇನಹಳ್ಳಿ

ವಿಶೇಷ ವರದಿ

ತುಮಕೂರು: ಮಹಾನಗರ ಪಾಲಿಕೆ ಆಯುಕ್ತರ ವರ್ಗಾವಣೆ ವಿಚಾರವು ಸಚಿವದ್ವಯರ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರನ್ನು ಓವರ್​ಟೇಕ್​ ಮಾಡಿ ಸಹಕಾರ ಸಚಿವ ಕೆ.ಎನ್​.ರಾಜಣ್ಣ ತಮ್ಮ ಕಡೆಯವರನ್ನು ಪಾಲಿಕೆ ಆಯುಕ್ತ ಹುದ್ದೆಗೆ ವರ್ಗಾವಣೆ ಮಾಡಿಸಿದ್ದು ಈಗ ವಿವಾದದ ಕೇಂದ್ರಬಿಂದುವಾಗಿದೆ.

ವರ್ಷ ತುಂಬುವದರೊಳಗೆ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜರನ್ನು ಕಳೆದ ಮಂಗಳವಾರ (ಜು.2) ಸಂಜೆ ರಾಜ್ಯ ಸರ್ಕಾರ ದಿಢೀರ್​ ವರ್ಗಾವಣೆ ಮಾಡಿ ಆದೇಶಿಸಿತ್ತು. ಆದರೆ, ಐಎಎಸ್​ ಅಧಿಕಾರಿಗೆ ಯಾವುದೇ ಜಾಗ ತೋರಿಸಿರಲಿಲ್ಲ. ಆ ಸ್ಥಾನಕ್ಕೆ ಸಚಿವ ಕೆ.ಎನ್​.ರಾಜಣ್ಣ ಶಿಾರಸಿನ ಮೇರೆಗೆ ಕೆಎಎಸ್​ ಅಧಿಕಾರಿ ಡಾ.ಜಗದೀಶ್​ ನಾಯಕ್​ರನ್ನು ವರ್ಗಾಯಿಸಲಾಗಿತ್ತು.

ಚಾರ್ಜ್​ ಕೊಡದ ಅಶ್ವಿಜ!: ವರ್ಗಾವಣೆ ವಿಚಾರವನ್ನು ಉಸ್ತುವಾರಿ ಸಚಿವ ಪರಮೇಶ್ವರ ಗಮನಕ್ಕೆ ತಂದ ಅಶ್ವಿಜ ರಜೆ ಮೇಲೆ ತೆರಳಿಬಿಟ್ಟರು. ಅಂದು ಅಧಿಕಾರ ಸ್ವೀಕರಿಸಲು ಪಾಲಿಕೆಗೆ ಆಗಮಿಸಿದ ಜಗದೀಶ್​ ನಾಯಕ್​ ಬಂದ ದಾರಿಗೆ ಸುಂಕವಿಲ್ಲದೆ ಹಿಂದಿರುಗಿದ್ದರು. ಪರಮೇಶ್ವರ್​ ಗಮನಕ್ಕು ಬಾರದೆ ಅಶ್ವಿಜರನ್ನು ವರ್ಗಾವಣೆ ಮಾಡಿದ್ದು ಜಿಲ್ಲಾಡಳಿತದಲ್ಲಿ ಸಚಿವರಿಗೆ ಬಿಗಿಯಾದ ಹಿಡಿತವಿಲ್ಲವೆಂಬುದು ಬಹಿರಂಗವಾಗಿಸಿತ್ತು. ಸಹಜವಾಗಿ ಇದು ಪರಂ ಆಕ್ರೋಶಕ್ಕು ಕಾರಣವಾಗಿತ್ತು.

ಅಶ್ವಿಜ ಪತಿ ಕೆ.ವಿ.ಅಶೋಕ್​ ಪೊಲೀಸ್​ ವರಿಷ್ಠಾಧಿಕಾರಿಯಾಗಿ ತುಮಕೂರು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪತಿ, ಪತ್ನಿ ಒಂದೇ ಜಿಲ್ಲೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಪಡೆದಿದ್ದರು. ಆದರೆ, ಸರ್ಕಾರದ ದಿಢೀರ್​ ವರ್ಗಾವಣೆ ಆದೇಶದಿಂದ ಪತ್ನಿ ಬೇರೆಡೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಾಗಾಗಿ, ರಜೆ ಮೇಲೆ ತೆರಳಿದ್ದ ಅಶ್ವಿಜ ಮೂರೇ ದಿನದಲ್ಲಿ ಶನಿವಾರ ಮತ್ತೆ ಪಾಲಿಕೆ ಕಚೇರಿಯಲ್ಲಿ ಪ್ರತ್ಯಕ್ಷರಾದಾಗಲೇ ಅಲ್ಲಿನ ಸಿಬ್ಬಂದಿಗೆ "ಮೇಡಂ' ವರ್ಗಾವಣೆ ರದ್ದಾಗಿರುವ ವಿಚಾರ ಗೊತ್ತಾಗಿದೆ. ಉಸ್ತುವಾರಿ ಸಚಿವರ ಪ್ರಭಾವದಿಂದಾಗಿ ಅಶ್ವಿಜ ಮತ್ತೆ ಅದೇ ಸ್ಥಾನದಲ್ಲಿ ಉಳಿದುಕೊಳ್ಳುವಂತಾಗಿದೆ.

ಅಧಿಕಾರಿಗಳ ವರ್ಗಾವಣೆಯಲ್ಲಿ ಜಿಲ್ಲೆಯವರೇ ಆದ ಸಚಿವ ರಾಜಣ್ಣ ಮೂಗು ತೂರಿಸಿದ್ದರಿಂದ ಪರಮೇಶ್ವರ ಮುನಿಸಿಗೆ ಕಾರಣವಾಗಿದೆ.

ಕುಣಿಗಲ್​ ಪುರಸಭೆಯಲ್ಲು ಸಮಸ್ಯೆ

ಕುಣಿಗಲ್​ ಪುರಸಭೆಯಲ್ಲು ಇಂತಹದ್ದೇ ಸಮಸ್ಯೆ ಉದ್ಭವವಾಗಿದೆ. ಲೋಕ ಚುನಾವಣೆ ಮುನ್ನ ನೀತಿ ಸಂಹಿತೆ ಜಾರಿ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್​ರನ್ನು ಅಣ್ಣಿಗೇರಿ ಪುರಸಭೆಗೆ ವರ್ಗಾಯಿಸಲಾಗಿತ್ತು. ಅಲ್ಲಿಂದ ವೈ.ಜಿ.ಗದ್ದಿಗೌಡರ ಅವರನ್ನು ವರ್ಗಾಯಿಸಲಾಗಿತ್ತು. ಸ್ವಲ್ಪದಿನದಲ್ಲೇ ಬೆಳಗಾವಿ ಜಿಲ್ಲೆ ಮುನ್ನಳ್ಳಿಗೆ ಗದ್ದಿಗೌಡರ ವರ್ಗಾವಣೆ ಮಾಡಿಸಿಕೊಂಡಿದ್ದರು. ಅಷ್ಟರಲ್ಲಿ ಸ್ಥಳಿಯ ಶಾಸಕ ಡಾ.ಎಚ್​.ಡಿ.ರಂಗನಾಥ್​ ಶಿಾರಸಿನ ಮೇರೆಗೆ ಈ ಸ್ಥಾನಕ್ಕೆ ಪೌರಾಡಳಿತ ಇಲಾಖೆಯಿಂದ ಜಿ.ಮಂಜುಳಾರನ್ನು ವರ್ಗಾಯಿಸಲಾಗಿತ್ತು. ನೀತಿ ಸಂಹಿತೆ ಮುಗಿದ ಬಳಿಕ ಮತ್ತೆ ಮರಳಿದ ಶಿವಪ್ರಸಾದ್​ಗೆ ಮಂಜುಳಾ ಅಧಿಕಾರ ಹಸ್ತಾಂತರಿಸಲು ಒಪ್ಪದ್ದಿದ್ದರಿಂದ ಕುರ್ಚಿಗಾಗಿ ಕಾದಾಟವೇ ನಡೆಯಿತು. ಈ ಸಂದರ್ಭದಲ್ಲಿ ಶಿವಪ್ರಸಾದ್​ ಬೆನ್ನಿಗೆ ಡಾ.ಜಿ.ಪರಮೇಶ್ವರ್​ ಯುವ ಸೇನೆ ನಿಂತಿದ್ದು ಈಗ ಕೆಎಟಿ ಮೆಟ್ಟಿಲೇರಿದ್ದಾರೆ.