ವಿಜಯಪುರ: ಸಮಾಜದಲ್ಲಿ ಒಗ್ಗಟ್ಟಿನ ಕೊರತೆ ಎದುರಾದರೆ ಪ್ರಗತಿ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬರೂ ಚಿಂತಿಸಬೇಕಿದೆ ಎಂದು ಕರ್ನಾಟಕ ಕ್ಷತ್ರಿಯ ಒಕ್ಕೂಟದ ಅಧ್ಯಕ್ಷ ಉದಯ್‌ಸಿಂಗ್ ಹೇಳಿದರು.
ಹೋಬಳಿಯ ಪ್ರವಾಸಿ ಮಂದಿರದಲ್ಲಿ ಶನಿವಾರ ಕರ್ನಾಟಕ ಕ್ಷತ್ರಿಯ ಒಕ್ಕೂಟದದಿಂದ ಏರ್ಪಡಿಸಿದ್ದ 2021 ರ ಕ್ಯಾಲೆಂಡರ್ ಬಿಡುಗಡೆ, ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
20 ವರ್ಷದ ಹಿಂದೆ ಕ್ಷತ್ರಿಯ ಜನಾಂಗದ ಮುಖಂಡ ಹರಿ ಸಾ ಖೋಡೆ ಎಲ್ಲರನ್ನೂ ಒಗ್ಗೂಡಿಸಿ, ಜನಾಂಗದ ಅಭಿವೃದ್ಧಿಗೆ ಶ್ರಮಿಸಿದ್ದರು. ನಂತರ ಸಂಘಟನೆ ಕ್ಷೀಣಿಸಿತ್ತು, ಕಳೆದ ಎರಡೂವರೆ ವರ್ಷದಿಂದ ಬೀದರ್‌ನಿಂದ ಪ್ರಾರಂಭಿಸಿ, 22 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಸಂಘಟನೆ ಬಲಪಡಿಸಲಾಗುತ್ತಿದೆ ಎಂದರು.
ಸಮಾಜದ ಮುಖಂಡ ವಿ.ರಾಮಚಂದ್ರಪ್ಪ ಮಾತನಾಡಿ, ಒಂದು ಕಾಲಕ್ಕೆ ದೇಶವನ್ನು ಆಳಿದ ಕ್ಷತ್ರಿಯರಿಗೆ ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲಿ ಸಮರ್ಪಕ ಅಧಿಕಾರ ಪಡೆಯುವ ಸ್ಥಿತಿ ನಿರ್ಮಾಣವಾಗಬೇಕಿದೆ ಎಂದು ತಿಳಿಸಿದರು.
ಗ್ರಾಮಾಂತರ ಜಿಪಂ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ, ಚಿಕ್ಕಬಳ್ಳಾಪುರ ಜಿಪಂ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ವಿಜಯಪುರ ಪುರಸಭಾ ಮಾಜಿ ಅಧ್ಯಕ್ಷ ಎಂ.ಚಿನ್ನಯ್ಯ, ಬಿದಲಪುರ ರೇಷ್ಮೆ ಬೆಳೆಗಾರರ ರೈತರ ಸಹಕಾರ ಸಂಘದ ಅಧ್ಯಕ್ಷ ಜಿ.ಲಲಿತೇಶ್, ವಿಶ್ವ ಪಾಂಡವರ ಸೇನೆ ಅಧ್ಯಕ್ಷ ದೇವಾರ್ಜುನ್ ಮತ್ತಿತರರಿದ್ದರು.