ಜಿಲ್ಲೆ

ಅಡಕೆ ಜತೆ ಕಾಫಿ ಬೆಳೆ : ಕ್ಯಾಪ್ಟನ್ ಬ್ರಿಜೇಶ್ ಚೌಟ ಸಲಹೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಸುಳ್ಯ

ಅಡಕೆ ಬೆಳೆಗೆ ಪರ್ಯಾಯವಾಗಿ ಕಾಫಿ ಬೆಳೆಯುವುದು ಅಲ್ಲ, ಅಡಕೆ ಜತೆ ಕಾಫಿ ಬೆಳೆಯಬೇಕಾಗಿದೆ. ಆಧುನಿಕ ತಂತ್ರಜ್ಞಾನದ ಸಹಾಯದಿಂದ ಕಾಫಿ ಬೆಳೆಯುವ ಮೂಲಕ ಕಾಫಿಯಲ್ಲಿ ಕರಾವಳಿ ಬ್ರಾಂಡ್ ನಿರ್ಮಿಸಲು ಎಲ್ಲರ ಪ್ರಯತ್ನ ಅಗತ್ಯ ಎಂದು ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.

ದ.ಕ. ಜಿಲ್ಲೆಯಲ್ಲಿ ಕಾಫಿ ಕೃಷಿ ಉತ್ತೇಜಿಸಲು ರೈತರಿಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಸುಳ್ಯ ಸಿಎ ಬ್ಯಾಂಕ್ ಸಭಾಂಗಣದಲ್ಲಿ ‘ಕಾಫಿಕೊ’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ದ.ಕ. ಜಿಲ್ಲೆಯಲ್ಲಿ ಕಾಫಿಯನ್ನು ಅಡಕೆ ಜತೆ ಉಪ ಬೆಳೆಯಾಗಿ ಬೆಳೆಯುವ ಮೂಲಕ ಹೊಸ ಸಾಧ್ಯತೆ ಕಂಡುಕೊಳ್ಳಬೇಕು. ಅಡಕೆ ಹಳದಿ ರೋಗಕ್ಕೆ ಪರಿಹಾರ, ಪರ್ಯಾಯಕ್ಕೆ ನನ್ನ ಬದ್ಧತೆ ಸದಾ ಇದೆ. ಒಂದು ವರ್ಷದಲ್ಲಿ ಅಡಕೆ ಹಳದಿ ರೋಗದ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ಸಾಧ್ಯವಾಗಿದೆ. ಸಚಿವರ ನೇತೃತ್ವದಲ್ಲಿ ಸಂಸದರ, ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಅಡಕೆ ಹಳದಿ ರೋಗ ಬಾಧಿತ ಪ್ರದೇಶಕ್ಕೆ ಕೇಂದ್ರ ಸಚಿವರನ್ನು ಕರೆ ತರುವ ಪ್ರಯತ್ನ ಮುಂದುವರಿಸಿ ಕೃಷಿಗೆ ಹಾನಿ ಸಂಭವಿಸಿದ ಕೃಷಿಕರಿಗೆ ಪೂರ್ಣ ಪರಿಹಾರ ನೀಡಲಾಗದಿದ್ದರೂ ಒಂದಿಷ್ಟು ಪರಿಹಾರ ದೊರಕಿಸುವ ಪ್ರಯತ್ನ ನಡೆಸಲಾಗುವುದು. ದ.ಕ. ಜಿಲ್ಲೆಯ ತಾಲೂಕುಗಳಲ್ಲಿ ಬೆಳೆಯುವ ಕಾಫಿಗೆ ಮಾನ್ಯತೆ ನೀಡುವ ಕೆಲಸ ಆಗಬೇಕು ಎಂದು ಕಾಫಿ ಮಂಡಳಿ ಅಧ್ಯಕ್ಷರಿಗೆ ತಿಳಿಸಿದರು.

ಕಾಫಿ ಬೋರ್ಡ್ ಆಫ್ ಇಂಡಿಯಾ ಉಪ ನಿರ್ದೇಶಕ ಡಾ.ವಿ.ಚಂದ್ರಶೇಖರ್, ಕಾಫಿ ಬೋರ್ಡ್ ಚೇರ್ಮನ್ ದಿನೇಶ್ ಎಂ.ಜೆ.,ನಬಾರ್ಡ್ ಡಿಡಿಎಂ ಸಂಗೀತ ಕರ್ತ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಮಂಜುನಾಥ್, ಸಕಲೇಶಪುರ 7 ಬೀನ್ ಟೀಂ ಸ್ಥಾಪಕಾಧ್ಯಕ್ಷ ಡಾ.ಪ್ರದೀಪ್ ಸಕಲೇಶಪುರ, 7 ಬೀನ್ ಟೀಂ ಚೇರ್ಮನ್ ಡಾ.ಧರ್ಮರಾಜ್, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಯಾರಾ ಫರ್ಟಿಲೈಸರ್ ಮುಖ್ಯಸ್ಥ ಬೋಪಣ್ಣ, ಝೈನ್ ಇರಿಗೇಷನ್‌ನ ಕಾರ್ತಿಕ್ ಮಂಜುನಾಥ್, ಸುಳ್ಯ ನಪಂ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸುಳ್ಯ ಸಿಎ ಬ್ಯಾಂಕ್ ಅಧ್ಯಕ್ಷ ವಿಕ್ರಮ್ ಎ.ವಿ. ಉಪಸ್ಥಿತರಿದ್ದರು.

ಕಾಫಿಕೊ ಕಾರ್ಯಾಗಾರ ಸಂಚಾಲಕ ಸಂತೋಷ್ ಕುತ್ತಮೊಟ್ಟೆ ಸ್ವಾಗತಿಸಿದರು. ಸಹ ಸಂಚಾಲಕ ರಾಮಕೃಷ್ಣ ಭಟ್ ಕುರುಂಬುಡೇಲು ವಂದಿಸಿದರು. ಸುದರ್ಶನ ಎಸ್.ಪಿ., ವಾಸುದೇವ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

ಮಲೆನಾಡಿಗೂ ಕರಾವಳಿಗೂ, ಕರಾವಳಿಗೂ ಕಾಫಿಗೂ ಸಂಬಂಧವಿದೆ. ಕಾಫಿ ಮೂಲಕ ಈ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ. ಕಾಫಿ ಮಂಡಳಿಗೆ ಹೊಸ ದಿಕ್ಕು ತೋರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಏಳು ಲಕ್ಷ ಟನ್ ಕಾಫಿ ಬೆಳೆದು ವಿಶ್ವದ 5ನೇ ಕಾಫಿ ಬೆಳೆಯುವ ರಾಷ್ಟ್ರವನ್ನಾಗಿ ಬೆಳೆಸುವುದು ನಮ್ಮ ಗುರಿ. ವೈಜ್ಞಾನಿಕವಾಗಿ ಬೆಳೆಯುವ ಮೂಲಕ ಕಾಫಿ ಕೃಷಿಯಲ್ಲಿ ಸಾಧನೆ ಮಾಡಬೇಕು. ಈ ಭಾಗದ ಕೃಷಿಕರ ಬೆಂಬಲಕ್ಕೆ ನಾವು ಸದಾ ಇದ್ದೇವೆ. ಕಾಫಿ ಬೆಳೆಯಲು ಸವಾಲು, ಅವಕಾಶ ಎರಡೂ ಇದೆ. ಸವಾಲು ಎದುರಿಸಿ ಅವಕಾಶ ಬಳಸಿಕೊಳ್ಳಬೇಕು. ದಿನೇಶ್ ಎಂ.ಜೆ., ಕಾಫಿ ಬೋರ್ಡ್ ಚೇರ್ಮನ್