ಸೋಮವಾರಪೇಟೆ: ತಾಲೂಕಿನ ಶಾಂತಳ್ಳಿ ಸಮೀಪದ ಗುಡ್ಡಳ್ಳಿಯಲ್ಲಿ ನಡೆದಿದ್ದ ಕಾಫಿ ಕಳವು ಮಾಡಿದ್ದವನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜ.31ರಂದು ಗುಡ್ಡಳ್ಳಿ ಗ್ರಾಮದ ಸಂತೋಷ್ ಅವರಿಗೆ ಸೇರಿದ 3 ಚೀಲ ಪಾರ್ಚಮೆಂಟ್ ಕಾಫಿಯನ್ನು ಗಣಗೂರು ಗ್ರಾಮ ಪಂಚಾಯಿತಿ ಗೋಣಿಮರೂರು ನಿವಾಸಿ ಚಂದ್ರಪ್ಪ ಎಂಬಾತ ಕಳವು ಮಾಡಿ ಪಟ್ಟಣದ ಡಿಪೋವೊಂದಕ್ಕೆ ಮಾರಾಟ ಮಾಡಿದ್ದ ಎನ್ನಲಾಗಿದೆ. ಈ ನಡುವೆ ಬುಧವಾರ ಪಟ್ಟಣದಲ್ಲಿ ನಡೆದ ಹಸು ಕಳವು ಪ್ರಕರಣದಲ್ಲಿ ಚಂದ್ರಪ್ಪ ಭಾಗಿಯಾಗಿದ್ದು, ಪೊಲೀಸರು ವಿಚಾರಣೆಗೆ ಒಳಪಡಿಸಿದ ಸಂದರ್ಭ, ಗುಡ್ಡಳ್ಳಿ ಗ್ರಾಮದಿಂದ ಕಾಫಿ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಇದೀಗ ಪೊಲೀಸರು ಆರೋಪಿಯೊಂದಿಗೆ ಡಿಪೋಗೆ ತೆರಳಿ, ಮಾರಾಟ ಮಾಡಿದ್ದ ಕಾಫಿಯನ್ನು ವಶಕ್ಕೆ ಪಡೆದಿದ್ದಾರೆ. ಇದರೊಂದಿಗೆ ಚಂದ್ರಪ್ಪ ವಿರುದ್ಧ ಮೊಕದ್ದಮೆ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ನ್ಯಾಯಾಧೀಶರ ಆದೇಶದ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.