ಜಿಲ್ಲೆ

ಬೆಳೆಗಾರರ ಪಂಪ್ ಸೆಟ್ ವಿದ್ಯುತ್ ಬಿಲ್ ಷರತ್ತಿಗೆ ಅತೃಪ್ತಿ

reportermys

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಕಾಫಿ ಬೆಳೆಗಾರರು ಬಳಸುವ ಪಂಪ್ ಸೆಟ್ ವಿದ್ಯುತ್ ಬಿಲ್ ಮರುಪಾವತಿ ಮಾಡುವುದಾಗಿ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಬೆಳಗಾರರು ಪಾವತಿಸುವ ವಿದ್ಯುತ್ ಬಿಲ್ ಮರುಪಾವತಿ ಮಾಡುವ ಷರತ್ತು ವಿಧಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗುತ್ತಿದೆ.

ರಾಜ್ಯದ ಇತರೆ ರೈತರು ಬಳಸುವ ೧೦ ಎಚ್‌ಪಿವರೆಗಿನ ಪಂಪ್ ಸೆಟ್‌ಗೆ ಮೀಟರ್ ರಹಿತವಾಗಿ ಉಚಿತ ವಿದ್ಯುತ್ ಸಂಪರ್ಕ ಒದಗಿಸಲಾಗುತ್ತಿ
ದೆ. ಅದೇ ಮಾನದಂಡದಡಿ ಕಾಫಿ ಬೆಳೆಗಾರರು ಬಳಸುವ ಪಂಪ್ ಸೆಟ್ ಮೀಟರ್ ರಹಿತವಾಗಿ ಸಂಪೂರ್ಣ ಉಚಿತವಾಗಿ ವಿದ್ಯುತ್ ಸಂಪರ್ಕ ಒದಗಿಸಬೇಕೆಂಬ ಬೇಡಿಕೆ ವ್ಯಕ್ತವಾಗುತ್ತಿದೆ.

ಹಲವು ವರ್ಷದಿಂದ ಕಾಫಿ ಬೆಳೆಗಾರರಿಗೆ ಉಚಿತವಾಗಿ ವಿದ್ಯುತ್ ಸಂಪರ್ಕ ಒದಗಿಸಬೇಕೆಂಬ ಬೇಡಿಕೆ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂಗಡ ಪತ್ರ ಮಂಡಿಸುವ ಸಂದರ್ಭದಲ್ಲಿ ಕಾಫಿ ಬೆಳೆಗಾರರಿಗೂ ಉಚಿತ ವಿದ್ಯುತ್ ಸಂಪರ್ಕ ಒದಗಿಸುವ ಘೋಷಣೆ ಮಾಡಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕ ಇಲಾಖೆ ಉಚಿತ ವಿದ್ಯುತ್ ಸಂಪರ್ಕ ಒದಗಿಸುವ ಪ್ರಸ್ತಾವನೆಗೆ ಒಪ್ಪಿಗೆ ನೀಡ ಲಿಲ್ಲ.

ಮೀಟರ್ ಅಳವಡಿಕೆ, ಬಿಲ್ ಪಾವತಿ ಮಾಡಿದ ಬಳಿಕ ಸರ್ಕಾರ ಬಿಲ್ ಮರುಪಾವತಿ ಮಾಡುವ ಆದೇಶ ಬೆಳೆಗಾರರಿಗೆ ಇಷ್ಟ ತಂದು ಕೊಟ್ಟಿಲ್ಲ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಿಗೆ ಶೂನ್ಯ ಬಡ್ಡಿ ದರದಲ್ಲಿ ೩ ಲಕ್ಷ ರೂಪಾಯಿವರೆಗೂ ಸಾಲ ನೀಡುತ್ತಿದೆ. ಬಡ್ಡಿ ಹಣವನ್ನು ಸರ್ಕಾರ ನೇರವಾಗಿ ಆರ್‌ಬಿಐಗೆ ಪಾವತಿ ಮಾಡುತ್ತಿದೆ. ಅದೇ ರೀತಿಯಲ್ಲಿ ಕಾಫಿ ಬೆಳೆಗಾರರ ಪಂಪ್ ಸೆಟ್‌ಗೆ ಬಳಸುವ ವಿದ್ಯುತ್ ಬಿಲ್ ಅನ್ನು ಸರ್ಕಾರ ನೇರವಾಗಿ ವಿದ್ಯುತ್ ಇಲಾಖೆಗೆ ಪಾವತಿಸಲಿ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಹೇಳುತ್ತಾರೆ.

ಕಾಫಿ ಬೆಳೆಗಾರರು ಬಳಸುವ ೧೦ ಎಚ್‌ಪಿವರೆಗಿನ ಪಂಪ್ ಸೆಟ್ ವಿದ್ಯುತ್ ಬಿಲ್ ಮರುಪಾವತಿಗೆ ಸಂಬಂಧಿಸಿದ್ದಂತೆ ಸರ್ಕಾರ ಷರತ್ತು ಬದ್ಧ ವಾಗಿ ಹೊರಡಿಸಿರುವ ಸುತ್ತೋಲೆ ಹಿನ್ನೆಲೆಯಲ್ಲಿ ಲೌಡ್ ಸ್ಪೀಕರ್‌ಗೆ ಅಭಿಪ್ರಾಯ ಸಂಗ್ರಹಿಸಲಾಗಿದೆ.

**
ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಕಾಫಿಯಿಂದ ೮ ಸಾವಿರ ಕೋಟಿ ರೂ. ತೆರಿಗೆ ಕೇಂದ್ರ- ರಾಜ್ಯ ಸರ್ಕಾರ ಗಳು ಬಾಚುತ್ತಿವೆ. ಜಿಲ್ಲೆಗೆ ೧,೨೦೦ ಕೋಟಿ ರೂ. ವಾಪಾಸ್ಸು ಸಿಗುತ್ತಿದೆ. ಶಾಸಕಾಂಗದವರು ಸಂಬಳ, ಭತ್ಯೆ ಜಾಸ್ತಿ ಮಾಡಿಕೊಂಡಿದ್ದಾರೆ. ಅವರಿಗೆ ಕೋವಿಡ್ ಸಂಕಷ್ಟ ಇಲ್ಲವೇ. ಉಚಿತ ವಿದ್ಯುತ್ ನೀಡದಿದ್ದರೆ, ಕಾಫಿ ಬೆಳೆಗಾರರು ಕರ ನಿರಾಕರಣೆ ಚಳುವಳಿ ಹಮ್ಮಿಕೊಳ್ಳಬೇಕಾಗು ತ್ತದೆ. ಕೆ.ಎಂ. ದಿನೇಶ್, ಕರ್ನಾಟಕ ರೈತ ಸಂಘದ ಸೋಮವಾರಪೇಟೆ ತಾಲೂಕು ಅಧ್ಯಕ್ಷ.

**
ಸರ್ಕಾರ ಕಾಫಿ ಬೆಳೆಗಾರರ ತಾಳ್ಮೆ ಪರೀಕ್ಷೆ ಮಾಡಬಾರದು. ೧೦ ಎಚ್‌ಪಿವರೆಗಿನ ವಿದ್ಯುತ್ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಿದರೆ, ಸರ್ಕಾರಕ್ಕೆ ನಷ್ಟವಾಗುವುದಿಲ್ಲ. ಗುಣಮಟ್ಟದ ಕಾಫಿ ಉತ್ಪಾದನೆಯಾಗುತ್ತದೆ. ಅಧಿಕ ತೆರಿಗೆಯೂ ಸರ್ಕಾರದ ಬೊಕ್ಕಸ ಸೇರುತ್ತದೆ. ಹವಮಾನ ವೈಪರಿತ್ಯದಿಂದ ನಿಗದಿತ ಸಮಯದಲ್ಲಿ ಹೂ ಮಳೆ ಬೀಳುತ್ತಿಲ್ಲ. ಸಣ್ಣ ಬೆಳೆಗಾರಿಗೆ ಕೊಳವೆ ಬಾವಿ ಕೊರೆಸಲು ಸಹಾಯಧನ ನೀಡಬೇಕು. ಯಾವುದೇ ಷರತ್ತಿಲ್ಲದೆ ಉಚಿತ ವಿದ್ಯುತ್ ನೀಡಬೇಕು. ಲಿಂಗೇರಿ ರಾಜೇಶ್, ಜಿಲ್ಲಾಧ್ಯಕ್ಷ, ರೈತ ಹೋರಾಟ ಸಮಿತಿ.

**
ಕಾಫಿ ಬೆಳೆಗಾರರ ಬಹುದಿನದ ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ. ವಿದ್ಯುತ್ ಪಂಪ್ ಸೆಟ್‌ಗೆ ಮೀಟರ್ ಅಳವಡಿಸಬಾರದೆಂಬ ಬೇಡಿಕೆಗೆ ಸರ್ಕಾರ ಪೂರಕವಾಗಿ ಸ್ಪಂದಿಸಿದೆ. ಬೆಳೆಗಾರರ ಹಿತದೃಷ್ಟಿಯಿಂದ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ. ಸಣ್ಣಪುಟ್ಟ ಲೋಪ-ದೋಷ ಇದ್ದಲ್ಲಿ ಸರ್ಕಾರ ಮುಂದಿನ ದಿನಗಳಲ್ಲಿ ಅದನ್ನು ಸರಿ ಪಡಿಸಲಿದೆ. ಪಳೆಯಂಡ ರಾಬಿನ್ ದೇವಯ್ಯ, ಬಿಜೆಪಿ ಜಿಲ್ಲಾಧ್ಯಕ್ಷರು.

**
ಕಾಫಿ ಬೆಳೆಗಾರರ ೧೦ ಎಚ್‌ಪಿವರೆಗಿನ ವಿದ್ಯುತ್ ಪಂಪ್ ಸೆಟ್‌ಗೆ ಮೀಟರ್ ಅಳವಡಿಸುವ ಅಗತ್ಯತೆ ಇಲ್ಲ. ಸಂಪೂರ್ಣ ಉಚಿತವಾಗಿ ವಿದ್ಯುತ್ ಸಂಪರ್ಕ ಒದಗಿಸಬೇಕು. ಬೆಳೆಗಾರರು ಬಿಲ್ ಪಾವತಿಸಿದ ಬಳಿಕ ಸರ್ಕಾರ ಮರುಪಾವತಿ ಮಾಡುವ ಕ್ರಮ ಸರಿಯಲ್ಲ. ಎರಡೆರಡೂ ಕೆಲಸ ಏಕಾಗಿ. ಜನವರಿಯಿಂದ ಮೇ ತಿಂಗಳವರೆಗೆ ಉಚಿತ ವಿದ್ಯುತ್ ಸಂಪರ್ಕ ಒದಗಿಸಬೇಕು. ಪ್ರಸ್ತುತ ಸರ್ಕಾರದ ಆದೇಶ ಬೆಳೆಗಾರರಿಗೆ ಆಸೆ ತೋರಿಸುವಂತಿದೆ. ತೀತೀರ ಧರ್ಮಜ ಉತ್ತಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷರು.

**
ರಾಜ್ಯದ ಇತರೆ ರೈತರಿಗೆ ನೀಡುತ್ತಿರುವಂತೆ ಕಾಫಿ ಬೆಳೆಗಾರರಿಗೂ ಉಚಿತವಾಗಿ ವಿದ್ಯುತ್ ಸಂಪರ್ಕ ಒದಗಿಸಬೇಕು. ಕಾಫಿ ಬೆಳೆಗಾರರನ್ನೂ ರೈತರೆಂದು ಪರಿಗಣಿಸಬೇಕು. ಅತಿವೃಷ್ಟಿ- ಅನಾವೃಷ್ಟಿಯಿಂದ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಬೆಳಗಾರರ ಹಿತದೃಷ್ಟಿಯಿಂದ ೧೦ ಎಚ್‌ಪಿವರೆಗಿನ ವಿದ್ಯುತ್ ಸಂಪರ್ಕಕ್ಕೆ ಮೀಟರ್ ರಹಿತವಾಗಿ ಸಂಪೂರ್ಣ ಉಚಿತ ವಿದ್ಯುತ್ ಸಂಪರ್ಕ ಒದಗಿಸಬೇಕು. ಕೆ.ಎಂ. ಗಣೇಶ್, ಜೆಡಿಎಸ್ ಜಿಲ್ಲಾಧ್ಯಕ್ಷರು.

**
ಸರ್ಕಾರ ರೈತ ಸ್ನೇಹಿ ಆದೇಶ ಹೊರಡಿಸಲು ಹೋರಾಟ ರೂಪಿಸಲಾಗುವುದು. ಅಲ್ಲಿಯವರೆಗೂ ಕೊಡಗು, ಚಿಕ್ಕಮಗಳೂರು, ಹಾಸನ ಭಾಗದ ಬೆಳೆಗಾರರು ವಿದ್ಯುತ್ ಪಂಪ್ ಸೆಟ್ ವಿದ್ಯುತ್ ಬಿಲ್ ಪಾವತಿಸಬಾರದು. ರೈತ ಸಂಘ ಬೆಳೆಗಾರರ ಈಡೇರಿಸುವವರೆಗೂ ಹೋರಾಟ ಮುಂದುವರಿಯಲಿದೆ. ಸೆಸ್ಕ್‌ಗೆ ಸರ್ಕಾರ ನೇರವಾಗಿ ವಿದ್ಯುತ್ ಬಿಲ್ ಪಾವತಿಸಬೇಕು. ಪ್ರಸ್ತುತ ಸರ್ಕಾರ ಹೊರಡಿಸಿರುವ ಆದೇಶ ಸಂತೋಷ ಪಡುವಂತಿಲ್ಲ. ಕಾಡ್ಯಮಾಡ ಮನು ಸೋಮಯ್ಯ, ಜಿಲ್ಲಾಧ್ಯಕ್ಷರು, ಕರ್ನಾಟಕ ರೈತ ಸಂಘ.

**

ರಾಜ್ಯದ ಇತರೆ ಬೆಳೆ ಬೆಳೆಯುವ ರೈತರಿಗೆ ಮೀಟರ್ ರಹಿತವಾಗಿ ಉಚಿತ ವಿದ್ಯುತ್ ಸಂಪರ್ಕ ನೀಡುತ್ತಿರುವಂತೆ ಕಾಫಿ ಬೆಳೆಗಾರರು ಬಳಸುವ ಪಂಪ್ ಸೆಟ್‌ಗೆ ಉಚಿತ ವಿದ್ಯುತ್ ಸಂಪರ್ಕ ಒದಗಿಸಬೇಕು. ಪ್ರತಿಕೂಲ ಹವಮಾನ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕಾಫಿ ಬೆಳೆಗಾರರಿಗೆ ನೆರವು ನೀಡಲು ಸರ್ಕಾರ ತಕ್ಷಣ ತಿದ್ದುಪಡಿ ಸುತ್ತೋಲೆ ಹೊರಡಿಸಿಬೇಕು. ಪುಚ್ಚಿಮಾಡ ಶಿಲ್ಪ ಮಾದಪ್ಪ, ರೈತ ನಾಯಕಿ, ಮಾಯಮುಡಿ.