ಜಿಲ್ಲೆ

ಜನ ಕಾಫಿ ಕುಡಿಯೋಕೂ ಹಿಂದೆ ಮುಂದೆ ನೋಡ್ತಾರೆ…

ಹರ್ಷ ನ.ಪುರೋಹಿತ

ದಾವಣಗೆರೆ: ಕಾಫಿಪುಡಿ ಬೆಲೆ ಏರಿಕೆಯಾಗುತ್ತಿರುವ ಕಾರಣ ಕಾಫಿಪ್ರಿಯರು ಒಂದು ಕಪ್ ಕಾಫಿ ಕುಡಿಯೋದಕ್ಕೂ ಹಿಂದೆ ಮುಂದೆ ನೋಡುವಂತಾಗಿದೆ…

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿಪುಡಿ ಬೆಲೆ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಇದರಿಂದ ಕಾಫಿ ಮತ್ತು ಟೀ ವರ್ತಕರು ನಷ್ಟ ಅನುಭವಿಸುವಂತಾಗಿದೆ ಎಂದು ಸಂಘದ ಅಧ್ಯಕ್ಷ ಸಿ.ಎ. ಶಿವರಾಮ್ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಲೆ ಏರಿಕೆಯಿಂದ ಕಾಫಿಪುಡಿ ಕೊಂಡು ಕುಡಿಯುವವರ ಸಂಖ್ಯೆ ಕ್ಷೀಣಿಸುತ್ತಿದೆ. ದಾವಣಗೆರೆಯಲ್ಲಿ ಮೊದಲು 40ಕ್ಕೂ ಅಧಿಕ ಕಾಫಿಪುಡಿ ಮಾರಾಟ ಮಳಿಗೆಗಳಿದ್ದವು.

ಈಗ ಬದಲಾದ ಕಾಫಿ ಬೆಲೆಯಿಂದ ಬೆರಳಿಣಿಕೆಯಷ್ಟು ಮಾತ್ರ ಉಳಿದಿವೆ. ಇದು ಹೀಗೆಯೇ ಮುಂದುವರಿದರೆ ನಾವು ನಮ್ಮ ವ್ಯಾಪಾರದಿಂದಲೇ ಹಿಂದೆ ಸರಿಯಬೇಕಾಗುತ್ತದೆ ಎಂದು ಅಳಲು ತೋಡಿಕೊಂಡರು.

2 ದಶಕಗಳ ಹಿಂದೆ ಕಾಫಿಪುಡಿ ಬೆಲೆ 70 ರೂ.,ಗೆ ಮಾರಾಟವಾಗುತ್ತಿದ್ದ ಸಂದರ್ಭ ದಾವಣಗೆರೆಯಲ್ಲಿ ತಿಂಗಳಿಗೆ 8 ಕೋಟಿ ರೂ. ವಹಿವಾಟು ಇತ್ತು.

ಪ್ರಸ್ತುತ ಕಾಫಿಪುಡಿ ಬೆಲೆ 400 ರೂ., ಗಿಂತ ಅಧಿಕವಿದೆ. ಆದರೂ ತಿಂಗಳಿಗೆ 2 ಕೋಟಿ ರೂ. ವಹಿವಾಟು ನಡೆಯುವುದಿಲ್ಲ ಎಂದರು.

ಈ ಹಿಂದೆ ಕಾಫಿ ಮಂಡಳಿ ನಿಗದಿತ ಬೆಲೆಗೆ ಕಾಫಿಯನ್ನು ಆಂತರಿಕ ಮಾರುಕಟ್ಟೆಗೆ ಪೂರೈಸಿ, ಉಳಿದಿರುವುದರನ್ನು ರಫ್ತು ಮಾಡುತ್ತಿತ್ತು. ಕೇಂದ್ರ ಸರ್ಕಾರ ಕಾಫಿ ಮಂಡಳಿಗೆ ಮತ್ತೆ ಜವಾಬ್ದಾರಿ ನೀಡಿದರೆ ಬೆಲೆಗೆ ಕಡಿವಾಣ ಬೀಳಲಿದೆ. ವರ್ತಕರಿಗೂ ಅನುಕೂಲವಾಗಲಿದೆ ಎಂದರು.

ಸಂಘದ ಗೋಪಾಲಕೃಷ್ಣ ಶೆಟ್ಟಿ, ಶೇಷಾದ್ರಿ ಪ್ರಸಾದ್, ಬಲರಾಮ್ ಶೆಟ್ಟಿ, ಬದ್ರಿನಾಥ್, ಶ್ರೀನಿವಾಸ್, ವೀರೇಶ್ ಪುರಾಣಿಕ್, ಸಾಯಿಪ್ರಸಾದ್ ಇತರರಿದ್ದರು.