ಜಿಲ್ಲೆ

ಕಾಫಿ ಬೋರ್ಡ್ ಅಧ್ಯಯನ ತಂಡ ಬೆಳ್ತಂಗಡಿಗೆ : ಬೆಳೆ ಸಾಧ್ಯತೆ ಅರಿಯಲು ಸರ್ವೇ

ಸೌಮ್ಯ ಆರ್

ಉಪ್ಪಿನಂಗಡಿ: ಅಡಕೆ ಬೆಳೆಗಾರರಿಗೆ ಬೆಲೆ ಕುಸಿತ ಹಾಗೂ ರೋಗ ಬಾಧೆಯ ಭೀತಿ ಕಾಡುತ್ತಿರುವ ನಡುವೆ ದ.ಕ ಜಿಲ್ಲೆಯ ಪುತ್ತೂರು ಬೆಳ್ತಂಗಡಿ ಹಾಗೂ ಕಡಬ ತಾಲೂಕಿನಲ್ಲಿ ಕಾಫಿ ಬೆಳೆ ಬೆಳೆಯಲು ವಿಪುಲ ಅವಕಾಶಗಳಿದ್ದು, ಈ ಬಗ್ಗೆ ಸರ್ವೇ ನಡೆಸಿ ಕಾಫಿ ಬೋರ್ಡಿನ ಕಚೇರಿ ಆರಂಭಿಸುವ ಸಾಧ್ಯತೆ ಅಧ್ಯಯನ ಮಾಡಲು ಅಕ್ಟೋಬರ್ 9ರಂದು ಕೇಂದ್ರ ಸರ್ಕಾರದ ಕಾಫಿ ಬೋರ್ಡ್‌ನ ಮಡಿಕೇರಿ ವಿಸ್ತರಣಾಧಿಕಾರಿಗಳ ತಂಡ ಉಪ್ಪಿನಂಗಡಿಗೆ ಭೇಟಿ ನೀಡಲಿದೆ.

ಈಗಾಗಲೇ ಕಾಫಿ ಬೆಳೆಯುತ್ತಿರುವ ಉಪ್ಪಿನಂಗಡಿಯ ಪ್ರಗತಿಪರ ಕೃಷಿಕ ಚಂದ್ರಶೇಖರ್ ತಾಳ್ತಜೆ ಅವರ ತೋಟಕ್ಕೆ ಭೇಟಿ ನೀಡಲಿರುವ ಈ ತಂಡ, ಬೆಳಗ್ಗೆ 11 ಗಂಟೆಯಿಂದ ತೋಟದಲ್ಲಿ ಕಾಫಿ ಗಿಡಗಳ ವೀಕ್ಷಣೆ ಮತ್ತು ಮಾಹಿತಿ ಸಭೆ ನಡೆಸಲಿದೆ. ಆಸಕ್ತರು ಭಾಗವಹಿಸಬಹುದು. ತಾಲೂಕಿನ ಕಾಫಿ ಬೆಳೆಗಾರ ಕೃಷಿಕರು ತಂಡದ ಭೇಟಿಯನ್ನು ಅಪೇಕ್ಷಿಸಿದರೆ ಚಂದ್ರಶೇಖರ್ ತಾಳ್ತಜೆ(9449200681 ) ಅವರನ್ನು ಸಂಪರ್ಕಿಸಬಹುದು.

ಯಾವುದೇ ಕಾಳಜಿ ಯಾ ನಿರ್ವಹಣೆ ಮಾಡದೆಯೂ ಕಾಫಿ ಗಿಡದಲ್ಲಿ ಉತ್ತಮ ಫಸಲು ಲಭಿಸುತ್ತಿದ್ದು, ಘಟ್ಟ ಪ್ರದೇಶದಲ್ಲಿ ಕಾಫಿ ಬೆಳೆಗೆ ನೀಡುವ ಪ್ರಾಧಾನ್ಯ ಹಾಗೂ ಉತ್ತಮ ನಿರ್ವಹಣೆ ತೋರಿದರೆ ಇನ್ನಷ್ಟು ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದು ಚಂದ್ರಶೇಖರ್ ತಾಳ್ತಜೆ ಅಭಿಪ್ರಾಯಪಟ್ಟಿದ್ದಾರೆ.