ಮಡಿಕೇರಿ:
ಕೊಡಗಿನಲ್ಲಿ ಜಮ್ಮಾ ಭೂಮಿ ಹಕ್ಕುಗೆ ಸಂಬAಧಿಸಿದ ಎಲ್ಲಾ ಗೊಂದಲಗಳನ್ನು ಪರಿಹರಿಸಲಾಗುವುದು ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು. ಶುಕ್ರವಾರ ವಿರಾಜಪೇಟೆ ತಾಲೂಕು ಸಿದ್ದಾಪುರದ ಇವಾಲ್ವ್ ಬ್ಯಾಕ್ ರೆಸಾರ್ಟ್ನಲ್ಲಿ ನಡೆದ ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ 145ನೇ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ದೇಶಕ್ಕೆ ದೊಡ್ಡ ಕೊಡುಗೆ ನೀಡುತ್ತಿರುವ ಕಾಫಿ ಬೆಳೆಗಾರರು ಮಾರುಕಟ್ಟೆ, ವನ್ಯಜೀವಿ-ಮಾನವ ಸಂಘರ್ಷ, ಕಂದಾಯ... ಹೀಗೆ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪ್ರಮುಖವಾಗಿ ಜಿಲ್ಲೆಯ ಬೆಳೆಗಾರರರಿಗೆ ತಲೆನೋವಾಗಿರುವ ಜಮ್ಮಾ ಭೂಮೀ ಸೇರಿದಂತೆ ಕಂದಾಯ ಸಮಸ್ಯೆ ಪರಿಹರಿಸುವಲ್ಲಿ ಜಿಲ್ಲೆಯ ಇಬ್ಬರು ಶಾಸಕರು ಪ್ರಯತ್ನ ನಡೆಸಿದ್ದೇವೆ. ಭೂಮಿ ಹಕ್ಕು ಬಗೆಗಿನ ಗೊಂದಲಗಳನ್ನು ಬಗೆಹರಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗಿದೆ. ಇರುವ ಕಾನೂನು ಜ್ಞಾನವನ್ನೆಲ್ಲಾ ಬಳಕೆ ಮಾಡಲಾಗುತ್ತಿದೆ. ಕಂದಾಯ ಕಾನೂನು ಸರಳೀಕರಣ ಮಾಡಲಾಗುವುದು. ಈ ಸಂಬAಧ ತಿದ್ದುಪಡಿಗೋಸ್ಕರ ಈಗಾಗಲೇ 2 ಬಾರಿ ತಿದ್ದುಪಡಿ ಸಮಿತಿ ನಡೆಸಲಾಗಿದೆ. ಈ ಸಭೆಯಲ್ಲಿ ಎಲ್ಲಾ ವಿಷಯಗಳ ಚರ್ಚೆ ನಡೆಸಲಾಗಿದೆ. ತಿದ್ದುಪಡಿ ವಿಧೇಯಕದ ಅಂತಿಮ ರೂಪುರೇಷೆ ಸಿದ್ದವಾಗಿದ್ದು, ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಚರ್ಚೆಗೆ ಬರಲಿದೆ ಎಂದು ಮಾಹಿತಿ ನೀಡಿದರು.
ಕೊಡಗು ಕೊಡಗಾಗಿಯೇ ಉಳಿಯುವಲ್ಲಿ ಕಾಫಿ ಬೆಳೆಗಾರರ ಕೊಡುಗೆ ಸಾಕಷ್ಟಿದೆ. ಕಾಫಿಗೆ ಹೆಸರಾಗಿರುವ ಕೊಡಗಿನ ಹೆಸರಿನಲ್ಲಿ ಕಾಫಿ ಬ್ರಾö್ಯಂಡ್ ಆಗಬೇಕು. ದೇಶದಲ್ಲೆ ಅತ್ಯಂತ ಹಳೆಯ ಸಂಘಟನೆ ಆಗಿರುವ ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಈ ನಿಟ್ಟಿನಲ್ಲಿ ಕೆಲಸ ಮಾಡುವಂತಾಗಬೇಕು. ಬೆಳೆಗಾರರು ಎದುರಿಸುತ್ತಿರುವ ಸವಾಲುಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳಬೇಕು. ಜಿಲ್ಲೆಯಲ್ಲಿ ತ್ಯಾಜ್ಯ ವಿಲೇವಾರಿ ದೊಡ್ಡ ಸಮಸ್ಯೆ ಆಗಿದ್ದು, ಈಚೆಗೆ ನಡೆದಿದ್ದ ಸ್ವಚ್ಛ ಕೊಡಗು, ಸುಂದರ ಕೊಡಗು ಅಭಿಯಾನದ ವೇಳೆ ಟನ್‌ಗಟ್ಟಲೆ ಕಸ ಸಂಗ್ರಹ ಆಗಿದೆ. ಸ್ವಚ್ಛತೆ ಕಾಪಾಡುವುದು ನಮ್ಮ ಕೈಯಲ್ಲಿದೆ. ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ಪಣ ತೊಡಬೇಕು. ಕೊಡಗು ಹೀಗೆಯೇ ಮುಂದುವರಿಯಬೇಕು. ಪ್ರಾಕೃತಿಕ ಸಮತೋಲನ ಕಾಯ್ದುಕೊಳ್ಖುವುದು ಅಗತ್ಯ. ತ್ಯಾಜ್ಯ ನಿರ್ವಹಣೆ ಸರಿಯಾಗಿ ನಡೆಯಬೇಕು ಎಂದರು.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ ಕಾಫಿ ಬೆಳೆಗಾರರು ಸಂಘಟಿತರಾಗಿ ಆಗಾಗ್ಗೆ ಪರಸ್ಪರ ಒಟ್ಟುಗೂಡಿ ಚರ್ಚಿಸಬೇಕು. ಇದರಿಂದ ಸಮಸ್ಯೆಗಳು ಬೆಳಕಿಗೆ ಬರುತ್ತದೆ. ಪರಿಹಾರವನ್ನೂ ಈ ವೇಳೆಯಲ್ಲಿ ಕಂಡುಕೊಳ್ಳಬಹುದು. ಬೆಳೆಗಾರರ ಅದೃಷ್ಟ ಚೆನ್ನಾಗಿರುವುದರಿಂದ ಈಗ ಉತ್ತಮ ಬೆಲೆ ಸಿಗುತ್ತಿದೆ. ಆದರೆ ಬೆಳೆಗಾರರ ಸಮಸ್ಯೆಗಳೂ ಹೆಚ್ಚಾಗುತ್ತಿದೆ. ವಿಸ್ತಾರವಾಗುತ್ತಿರುವ ಮಾರುಕಟ್ಟೆ ಬೇಡಿಕೆಗಳನ್ನು ಪೂರೈಸಲು ಕಾಫಿ ಇಳುವರಿ ಹೆಚ್ಚಿಸುವ ದಾರಿ ಕಂಡುಕೊಳ್ಳಬೇಕು. ಈ ಸಂಬAಧ ಹೆಚ್ಚು ಸಂಶೋಧನೆಗಳು ನಡೆಯಬೇಕು. ಅರೇಬಿಕಾ ಕಾಫಿಗೆ ಬೆಲೆ ಹೆಚ್ಚು ಇದೆ. ಆದರೆ ಈ ಕಾಫಿ ಬೆಳೆಯುವಲ್ಲಿ ಇರುವ ಸಮಸ್ಯೆಗಳ ಕಾರಣಕ್ಕೆ ಬೆಳೆಗಾರರಲ್ಲಿ ಆಸಕ್ತಿ ಕಡಿಮೆ ಆಗುತ್ತಿದೆ. ಹವಾಮಾನ ಬದಲಾವಣೆಯೂ ಕಾಫಿ ಕೃಷಿ ಮೇಲೆ ಪರಿಣಾಮ ಬೀರುತ್ತಿದೆ.
ಕಾಫಿ ಬೆಳೆಗಾರರು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ನಡೆಸಲಾಗುವುದು. ಕಾಫಿಯ ಆಂತರಿಕ ಬಳಕೆ ದೇಶದಲ್ಲಿ ಕಡಿಮೆ ಇದೆ. ಇದನ್ನು ಹೆಚ್ಚು ಮಾಡಲು ಪ್ರಯತ್ನ ನಡೆಯಬೇಕು. ಇದರಿಂದ ವಿದೇಶದಲ್ಲಿ ಪ್ರತಿಕೂಲ ವಾತಾವರಣ ಇದ್ದಾಗಲೂ ಬೆಲೆಯ ಸ್ಥಿರತೆ ಸಾಧ್ಯವಾಗುತ್ತದೆ. ಕಾಫಿ ಬೆಳೆಗಾರರು ತಾವು ಬೆಳೆದ ಕಾಫಿಯನ್ನು ಮಾರಾಟಗಾರರ ಮೂಲಕ ಮಾರಾಟ ಮಾಡುವ ಬದಲು ಉದ್ಯಮಿಗಳೂ ಆಗಬೇಕು. ತಾವು ಬೆಳೆದ ಕಾಫಿಯನ್ನು ತಾವೇ ಲೋಟಕ್ಕೆ ತಲುಪಿಸುವ ಕೆಲಸ ಮಾಡಬೇಕು. ಇಂದಿನ ದಿನಗಳಲ್ಲಿ ಸ್ವಚ್ಚ ಕೊಡಗು ಪರಿಕಲ್ಪನೆಗೆ ಎಲ್ಲರೂ ಆದ್ಯತೆ ಕೊಡಬೇಕು. ಮಳೆ ನಿಂತ ಕೂಡಲೇ ಜಿಲ್ಲೆಯ ರಸ್ತೆ ದುರಸ್ತಿ ಕಾಮಗಾರಿ ಶುರುಮಾಡಲಾಗುವುದು. ಇದಕ್ಕಾಗಿ 200 ಕೋಟಿ ರೂ. ಅನುದಾನ ಲಭ್ಯವಿದೆ ಎಂದು ಹೇಳಿದರು.
ಪ್ರವಾಸೋದ್ಯಮಿ ಕುಟ್ಟಪ್ಪನ್ ಮಾತನಾಡಿ ಈ ಬಾರಿಯ ಮನ್‌ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಫಿ ಬಗ್ಗೆ ಪ್ರಸ್ತಾಪ ಮಾಡಿರುವುದು ಕಾಫಿ ಉದ್ಯಮ ಅವಲಂಬಿಸಿರುವವರ ಪಾಲಿಗೆ ಉತ್ತಮ ವಿಷಯವಾಗಿದೆ. ಕಾಫಿ ಬೆಳೆಗಾರರ ಸಮಸ್ಯೆಯನ್ನು ಪ್ರಧಾನಿ ಗಮನಕ್ಕೆ ತರಲು ಇದು ಸರಿಯಾz ಸಮಯ. ಬೆಳೆಗಾರರಿಗೆ ಎಲ್ಲಾ ರೀತಿಯ ನೆರವು ಕೊಡಲು ಭಾರತೀಯ ಕಾಫಿ ಮಂಡಳಿ ತಯಾರಿದೆ. ಆದರೆ ಸಾಕಷ್ಟು ಅನುದಾನ ಅಲ್ಲಿ ಲಭ್ಯವಿಲ್ಲ. ಈ ಬಗ್ಗೆಯೂ ಪ್ರಧಾನಿ ಅವರ ಗಮನ ಸೆಳೆಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಎ. ನಂದ ಬೆಳ್ಳಿಯಪ್ಪ ಮಾತನಾಡಿ, ಈ ಸಂಸ್ಥೆ 146 ವರ್ಷಗಳನ್ನು ಪೂರ್ಣಗೊಳಿಸಿದೆ. ಈ ಅವಧಿಯಲ್ಲಿ ಬೆಳೆಗಾರರ ಸಂಘಟನೆಗಾಗಿ ಸಂಸ್ಥೆ ದುಡಿದಿದೆ. ಈ ಸಂಸ್ಥೆ ಕಟ್ಟುವಲ್ಲಿ ಹಿರಿಯರ ಶ್ರಮ ಸ್ಮರಣೀಯವಾಗಿದ್ದು ಅವರು ಹಾಕಿಕೊಟ್ಟ ಹಾದಿಯಲ್ಲಿ ಮುನ್ನಡೆಯಲಾಗುತ್ತಿದೆ. ಸಿಪಿಎ ಕಾಲಕ್ಕೆ ತಕ್ಕಂತೆ ತನ್ನ ಕಾರ್ಯವೈಖರಿಯನ್ನು ರೂಢಿಸಿಕೊಳ್ಳುತ್ತಿದೆ. ಕೊಡಗಿನ ಪ್ರತಿಯೊಂದು ಮೂಲೆಯಿಂದಲೂ ಬೆಳೆಗಾರರು ನಮ್ಮ ಬಳಿಗೆ ಬರುತ್ತಾರೆ ಎನ್ನುವ ನಿರೀಕ್ಷೆಗಿಂತ ನಾವು ಸಕ್ರಿಯವಾಗಿ ಅವರಿಗೆ ತಲುಪಬೇಕು ಎನ್ನುವ ಗುರಿ ಇಟ್ಟುಕೊಳ್ಳಲಾಗಿದೆ. ಅದಕ್ಕಾಗಿಯೇ ಕ್ಲಸ್ಟರ್ ಸಭೆಗಳನ್ನು ಶುರುಮಾಡಲಾಗಿದೆ ಎಂದರಲ್ಲದೆ ಪ್ರಸಕ್ತ ಸಾಲಿನಲ್ಲಿ ಬೆಳೆಗಾರರಿಗಾಗಿ ಮುತುವರ್ಜಿ ತೆಗೆದುಕೊಂಡು ಮಾಡಿದ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು.
ಐಐಪಿಎಂ ಸದಸ್ಯ ಕಾರ್ಯದರ್ಶಿ ಡಾ. ಜಾನ್ ಮನೋರಾಜ್, ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ವೇದಿಕೆಯಲ್ಲಿ ಇದ್ದರು.
ಪ್ರವಾಸೋದ್ಯಮಿ ಕುಟ್ಟಪ್ಪನ್, ಕರ್ನಾಟಕ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ, ಶನಿವಾರಸಂತೆಯ ಪ್ರಗತಿಪರ ಬೆಳೆಗಾರ ಕೆ.ಎಂ. ಕಾಂತರಾಜ್, ಮಾಯಮುಡಿಯ ಕಾಫಿ ಬೆಳೆಗಾರ ಕೊಡಂದೇರ ತಮ್ಮಯ್ಯ ಹಾಗೂ ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ನಂದ ಬೆಳ್ಯಪ್ಪ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.