ಜಿಲ್ಲೆ

ಹವಾಮಾನ ಬದಲಾವಣೆ - ಕಾಫಿಗೆ ರೋಗ

ಸುನಿಲ್ ಪೊನ್ನೇಟಿ

ಮಡಿಕೇರಿ:

ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿರುವ ಕಾಫಿ ಬೆಳೆಗಾರರು ಈ ಬಾರಿ ಹವಾಮಾನ ವೈಫರಿತ್ಯದ ಕಾರಣದಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಈ ಬಾರಿ ಕಾಫಿಗೆ ಅದರಲ್ಲೂ ವಿಶೇಷವಾಗಿ ರೋಬಸ್ಟಾ ಕಾಫಿಯಲ್ಲಿ ಕಾಂಡ ಕೊಳೆ ರೋಗ ಕಾಣಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ರೋಗದ ಪ್ರಮಾಣ ಕೂಡ ಹೆಚ್ಚಾಗಿದ್ದು, ಕಾಫಿ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.

ಸಾಮಾನ್ಯವಾಗಿ ಕಾಂಡ ಕೊಳೆ ರೋಗ ಮುಂಗಾರು ಮಧ್ಯಭಾಗದಲ್ಲಿ ಕಾಣಿಸಿಕೊಳ್ಳುತ್ತಿತ್ತು. ಆಗ ಇದನ್ನು ಹತೋಟಿಗೆ ತರಲ ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲು ಬೆಳೆಗಾರರಿಗೆ ಅನುಕೂಲ ಆಗುತ್ತಿತ್ತು. ಆದರೆ ಈ ವರ್ಷ ಮುಂಗಾರಿನ ಆರಂಭದಲ್ಲೇ ಕಾಫಿಯಲ್ಲಿ ಕಾಂಡ ಕೊಳೆಯುವ ರೋಗ ಕಾಣಿಸಿಕೊಂಡಿದೆ. ಇದರಿಂದಾಗಿ ಕಾಫಿ ತೆನೆ, ಕಾಫಿ ಬೀಜಗಳು ಕೊಳೆಯುತ್ತಿದೆ. ಸಾಕಷ್ಟು ಪ್ರಮಾಣದಲ್ಲಿ ಕಾಫಿ ಕಾಯಿ ನೆಲಕ್ಕೆ ಉದುರಿ ನಷ್ಟವಾಗಿದೆ.
ಆರಂಭದಲ್ಲಿ ಕೇವಲ ಒಂದು ಅಥವಾ ಎರಡು ಕಾಫಿ ಹಣ್ಣುಗಳು ಕೊಳೆಯಲು ಪ್ರಾರಂಭಿಸುತ್ತವೆ. ಒಂದು ದಿನದಲ್ಲಿ, ಇಡೀ ಸಸ್ಯದ ಮೇಲೆ ಪರಿಣಾಮ ಬೀರುತ್ತದೆ. ತೋಟದೊಳಗೆ ಈ ರೋಗ ಸ್ಥಳೀಯವಾಗಿ ಹರಡುವುದನ್ನು ತಡೆಯಲು ಸಸ್ಯಗಳ ಬಾಧಿತ ಭಾಗಗಳನ್ನು ತಕ್ಷಣವೇ ಕತ್ತರಿಸಿ ಮಣ್ಣಿನ ಅಡಿಯಲ್ಲಿ ಹೂಳಬೇಕು ಎನ್ನುವುದು ಕಾಫಿ ಸಂಶೋಧನಾ ಕೇಂದ್ರದ ತಜ್ಞರ ಸಲಹೆ. ಆದರೆ ರೋಗ ಕಾಣಿಸಿಕೊಂಡ ಸಂದರ್ಭದಲ್ಲಿ ಮಳೆಯ ಪ್ರಮಾಣ ಜೋರಾಗಿತ್ತು. ಇದರಿಂದಾಗಿ ಕಾಫಿ ತೋಟದಲ್ಲಿ ಕೆಲಸ ಮಾಡುವುದಿರಲಿ, ಮನೆಯಿಂದ ಹೊರಬರಲು ಸಾಧ್ಯವಾಗದ ಸ್ಥಿತಿ ಇತ್ತು. ಜತೆಗೆ ಕೆಲಸ ಮಾಡಲು ಕಾರ್ಮಿಕರೂ ಸಿಗುವುದಿಲ್ಲ. ಈಗ ಮಳೆ ಇಲ್ಲ. ರೋಗ ನಿಯಂತ್ರಣ ಕ್ರಮಕ್ಕೆ ಮುಂದಾಗೋಣ ಎಂದರೆ ಈಗಾಗಲೇ ದೊಡ್ಡ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ ಎನ್ನುವುದು ಬೆಳೆಗಾರರ ಅಳಲು.

ಹವಾಮಾನ ಬದಲಾವಣೆಯೇ ರೋಗದ ಹರಡುವಿಕೆಗೆ ಕಾರಣ ಎಂದು ಕಾಫಿ ಸಂಶೋಧನಾ ಕೇಂದ್ರದ ತಜ್ಞರು ಹೇಳುತ್ತಿದ್ದಾರೆ. ಕಾಂಡ ಕೊಳೆ ರೋಗ ಹರಡುವಲ್ಲಿ ಹವಾಮಾನ ಪರಿಸ್ಥಿತಿಗಳು ಪ್ರಮುಖ ಪಾತ್ರವಹಿಸುತ್ತವೆ. ಮಳೆಗಾಲದಲ್ಲಿ ಮಣ್ಣಿನಲ್ಲಿ ತೇವಾಂಶ ಹೆಚ್ಚಿರುತ್ತದೆ. ಈ ತೇವಾಂಶವು ಸ್ವಲ್ಪ ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ, ಇದು ಆಂಥ್ರಾಕ್ನೋಸ್ ಶಿಲೀಂಧ್ರದ ಅಣಬೆಗಳು ಹಬ್ಬಲು ಸಹಾಯ ಮಾಡುತ್ತದೆ, ಇದರಿಂದ ಕಾಂಡ ಕೊಳೆ ರೋಗ ಉಂಟಾಗುತ್ತದೆ ಎನ್ನುತ್ತಾರೆ ತಜ್ಞರು.

ಏರುತ್ತಿರುವ ನಿರ್ವಹಣಾ ವೆಚ್ಚ, ಕಾರ್ಮಿಕರ ಕೊರತೆ, ಅಕಾಲಿಕ ಮಳೆ, ದುಬಾರಿ ಆಗಿರುವ ಔಷಧಿ, ಗೊಬ್ಬರ ಬೆಲೆ, ಕಾಂಡ ಕೊರಕ ಕೀಟದ ಹಾವಳಿ ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾಫಿ ಬೆಳೆಗಾರರಿಗೆ ಕಾಂಡ ಕೊಳೆಯುವ ರೋಗ ಮತ್ತೊಂದಿಷ್ಟು ಹೊಡೆತ ನೀಡಿದೆ. ಈ ಬಗ್ಗೆ ವಿಜಯವಾಣಿ ಓದುಗರು ಲೌಡ್‌ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಜಿಲ್ಲೆಯು ಒಟ್ಟು ೪,೧೦೬ ಚ.ಕಿ.ಮೀ. ಭೌಗೋಳಿಕ ಪ್ರದೇಶದ ಪೈಕಿ ೧,೧೯೭ ಚ.ಕಿ.ಮೀ. ಪ್ರದೇಶದಲ್ಲಿ ಕಾಫಿ ಕೃಷಿ ಮಾಡಲಾಗುತ್ತಿದೆ. ರಾಜ್ಯದ ಒಟ್ಟು ಕಾಫಿ ಬೆಳೆಯುವ ಪ್ರದೇಶದ ಶೇ. ೪೪ ಭಾಗದಲ್ಲಿ ಅಂದರೆ ೧,೦೬,೯೨೧ ಹೆ.ಪ್ರದೇಶದಲ್ಲಿ ಕೊಡಗಿನಲ್ಲಿ ಕಾಫಿ ಬೆಳೆಸಲಾಗುತ್ತಿದೆ. ಜಿಲ್ಲೆಯ ಕಾಫಿ ಪ್ರದೇಶದ ಬಹುಪಾಲು ಭಾಗವನ್ನು ಸಣ್ಣ ಬೆಳೆಗಾರರು, ಅಂದರೆ ೧೦ ಹೆಕ್ಟೇರ್‌ಗಿಂತ ಕಡಿಮೆ ಹಿಡುವಳಿ ಹೊಂದಿರುವ ರೈತರು ಹೊಂದಿದ್ದಾರೆ. ಕೊಡಗಿನಲ್ಲಿ ವರ್ಷಕ್ಕೆ ಸುಮಾರು ೧,೧೦,೭೩೦ ಮೆಟ್ರಿಕ್ ಟನ್ ಕಾಫಿ ಉತ್ಪಾದಿಸಲಾಗುತ್ತದೆ. ಇದು ರಾಜ್ಯದ ಶೇ. ೫೦ ಮತ್ತು ದೇಶದ ಕಾಫಿ ಉತ್ಪಾದನೆಯ ಶೇ. ೩೫ರಷ್ಟಿದೆ ಎನ್ನುತ್ತದೆ ಕಾಫಿ ಮಂಡಳಿಯ ಮಾಹಿತಿ. ಸ್ಥಳೀಯ ಪ್ರದೇಶದ ನಿರ್ದಿಷ್ಟ ಪರಿಸರ ಸ್ಥಿತಿಯನ್ನು ಅವಲಂಬಿಸಿ ಕಾಫಿ ಕೃಷಿ ಮಾಡಲಾಗುತ್ತಿದೆ. ಮಡಿಕೇರಿ, ವಿರಾಜಪೇಟೆ, ಪೊನ್ನಂಪೇಟೆ ಹಾಗೂ ಕುಶಾಲನಗರ ತಾಲೂಕಿನಲ್ಲಿ ರೋಬಸ್ಟಾ ಕಾಫಿಯನ್ನು ಮುಖ್ಯವಾಗಿ ಬೆಳೆಯಲಾಗುತ್ತದೆ. ಸೋಮವಾರಪೇಟೆ ತಾಲೂಕಿನಲ್ಲಿ ಅರೇಬಿಕಾ ಕಾಫಿ ಮುಖ್ಯ ಬೆಳೆಯಾಗಿದೆ.

ಅಕಾಲಿಕ ಮಳೆಯಿಂದಾಗಿ ಕಾಫಿ ಫಸಲಿನ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪ್ರತಿವರ್ಷ ಅಕಾಲಿಕವಾಗಿ ಕಾಫಿ ಹಣ್ಣಾಗಿ ಉದುರಿ ಮಣ್ಣು ಸೇರುತ್ತಿದೆ. ಕಾಫಿ ಕೊಯ್ಲಿನ ಸಂದರ್ಭ ಮಳೆ ಸುರಿದು ಹೆಚ್ಚಿನ ಬೆಳೆ ನಷ್ಟ ಆಗುತ್ತಿದೆ. ಕಳೆದ ಹತ್ತು ವರ್ಷಗಳಿಂದ ನಿರಂತರ ನಷ್ಟವಾಗುತ್ತಿದೆ. ಕಾಫಿ ತೋಟಗಳು ಉಳಿಯಬೇಕಾದರೆ ಸರ್ಕಾರಗಳು ವಿಶೇಷ ಪ್ಯಾಕೇಜ್ ಮೂಲಕ ಪ್ರತಿವರ್ಷ ಸಣ್ಣಬೆಳೆಗಾರರಿಗೆ ಸಹಾಯಧನ ನೀಡಬೇಕು.
ಮೋಹನ್ ಬೋಪಣ್ಣ, ಅಧ್ಯಕ್ಷ, ಕಾಫಿ ಬೆಳೆಗಾರರ ಸಂಘ, ಸೋಮವಾರಪೇಟೆ ತಾಲೂಕು

ಕಾಫಿ ವಾಣಿಜ್ಯ ಬೆಳೆಯಾಗಿರುವ ಕಾರಣ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಕೂಡಲೇ ಸರ್ಕಾರ ಕಾಫಿಯನ್ನು ಕೃಷಿ ಬೆಳೆಯನ್ನಾಗಿ ಪರಿವರ್ತನೆ ಮಾಡಬೇಕು. ಹಾಗಾದಾಗ ಸರ್ಕಾರದ ಯೋಜನೆಗಳು ಬೆಳೆಗಾರರಿಗೆ ಸಿಗುತ್ತದೆ. ಅಕಾಲಿಕ ಮಳೆಯಿಂದ ಕಾಫಿ ಫಸಲು ಹಾನಿಯಾಗುತ್ತಿದೆ. ೨ಲಕ್ಷ ರೂ.ಗಳಷ್ಟು ಹಾನಿಯಾದರೆ ೨೦ ಸಾವಿರ ರೂ. ಪರಿಹಾರ ಸಿಗುತ್ತಿದೆ. ಆಸ್ತಿ ದಾಖಲಾತಿ ಪಕ್ಕ ಇದ್ದರೆ ಮಾತ್ರ ಇದು ಸಿಗುತ್ತದೆ. ಕಾಫಿ ತೋಟಗಳು ನಾಶವಾಗುವುದರೊಳಗೆ ಸರ್ಕಾರ ಯೋಜನೆ ರೂಪಿಸಬೇಕು.
ಕೆ.ಎಂ.ದಿನೇಶ್, ಅಧ್ಯಕ್ಷ, ರಾಜ್ಯ ರೈತಸಂಘ, ಸೋಮವಾರಪೇಟೆ ತಾಲೂಕು

ಮಳೆ ಕೊರತೆ ಕಾಫಿ ಬೆಳೆಗೆ ಅಂಥ ನಷ್ಟವನ್ನೇನು ತಂದೊಡ್ಡುವುದಿಲ್ಲ. ಈಗಾಗಲೇ ಕಾಫಿಗೆ ಬೇಕಾದ ಮಳೆ ಬಂದಿದೆ. ಹೂವು ಅರಳುವ ಸಮಯದಲ್ಲಿ ಮಳೆ ಬೇಕಾಗುತ್ತದೆ ವಿನಃ ಸದ್ಯದ ಮಟ್ಟಿಗೆ ಮಳೆಯಿಲ್ಲದೆ ಕಾಫಿಗೆ ಹಾನಿಯಾಗುತ್ತಿಲ್ಲ. ಆದರೆ ಬಿಸಿಲಿನ ತಾಪ ವಿಪರೀತವಾದರೆ ನೀರಿಲ್ಲದೆ ಗಿಡಗಳು ಬಾಡಿದಂತಾಗಬಹುದು.
ಪ್ರೇಮಾ ಬಿ.ಡಿ., ವಕೀಲರು, ವಿರಾಜಪೇಟೆ.

ಕಾಫಿತೋಟದಲ್ಲಿ ಅತಿಯಾದ ಮಳೆಯೂ ಆಗಿಲ್ಲ, ಅತೀ ಬಿಸಿಲು ಇಲ್ಲ. ಒಂದು ಹದವಾದ ವಾತವರಣ ತೋಟದಲ್ಲಿ ಇದೆ. ಕಳೆ ಕತ್ತರಿಸಿದರೆ ಬಿಸಿಲಿಗೆ ಚೆನ್ನಾಗಿ ಒಣಗುತ್ತದೆ. ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಇದೆ ಎಂದು ಹವಾಮಾನ ಇಲಾಖೆ ವರದಿಗಳು ಇರುವುದರಿಂದ ಅಂಥ ದೊಡ್ಡ ನಷ್ಟವೇನೂ ಆಗಲಾರದು. ಕಾಫಿತೋಟದ ಮಣ್ಣಿನಲ್ಲಿ ಇನ್ನೂ ತೇವಾಂಶ ಇದೆ. ಸದ್ಯದ ಮಟ್ಟಿಗೆ ಕಾಫಿ ಬೆಳೆಗೆ ಯಾವ ತೊಂದರೆಯೂ ಇಲ್ಲ.
ರವಿ, ಮಲೆತಿರಿಕೆ ಬೆಟ್ಟದ ನಿವಾಸಿ, ವಿರಾಜಪೇಟೆ.

ಕಳೆದ ಕೆಲವು ವರ್ಷಗಳಿಂದ ಕಾಫಿ ಫಸಲು ಸರಿಯಾದ ರೀತಿಯಲ್ಲಿ ಸಿಗುತ್ತಿಲ್ಲ. ಚೆನ್ನಾಗಿ ಹೂವು ಅರಳಿ ಒಳ್ಳೆಯ ಫಸಲು ಬರುತ್ತದೆಂದು ಸಂತಸಪಡುವಷ್ಟರಲ್ಲಿ ಹವಾಮಾನ ವೈಪರೀತ್ಯದಿಂದ ಕಾಫಿ ಫಸಲು ಕೈಸೇರದೆ ಉದುರಿ ಹೋಗುತ್ತಿದೆ. ಈ ಬಾರಿಯೂ ಶ್ರೀಮಂಗಲ ವ್ಯಾಪ್ತಿಯಲ್ಲಿ ಕೊಳೆರೋಗ ವ್ಯಾಪಕವಾಗಿದ್ದು ರೈತರು ಸಂಕಷ್ಟದಲ್ಲಿದ್ದಾರೆ. ವಿಜ್ಞಾನಿಗಳು ಪರಿಹಾರ ಹೇಳುತ್ತಾರೆ. ಆದರೆ ಈಗಿನ ಕೂಲಿ ಕಾರ್ಮಿಕರ ಸಂಬಳದಲ್ಲಿ ಅವರು ಹೇಳಿದಂತೆ ಪಾಲಿಸುವುದು ಕಷ್ಟವೇ ಸರಿ. ನಿಯಮಿತ ಬೋಡೋ ಮತ್ತು ಔಷಧಿ ಸಿಂಪಡಣೆಯಿಂದ ಕೊಂಚ ಮಟ್ಟಿಗೆ ಹತೋಟಿ ತರಬಹುದು.
ನೆಲ್ಲಿರ ಧನು, ರೈತ, ಬಿರುನಾಣಿ

ಅತಿವೃಷ್ಟಿ - ಅನಾವೃಷ್ಟಿಯಿಂದ ಕೃಷಿಕ ವರ್ಗ ಕಷ್ಟ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಡಗಿನ ಮುಖ್ಯ ಬೆಳೆಗೆ ಕೊಳೆರೋಗ ಬಾಧೆ ಶಾಪವಾಗಿ ಪರಿಣಮಿಸಿದೆ. ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ರೈತರ ಹಿತ ಕಾಪಾಡಬೇಕು.
ಲಿಖಿತಾ ಕೆ.ಡಿ., ಗೋಣಿಕೊಪ್ಪಲು

ಈ ಬಾರಿ ಜೂನ್ ತಿಂಗಳಿನಲ್ಲಿ ಬರಬೇಕಾಗಿದ್ದ ಮಳೆ ಬರದೇ ಕಾಫಿ ತೋಟದ ಮಾಲೀಕರು ತೀರ ಸಂಕಷ್ಟ ಎದುರಿಸುವಂತಾಗಿದೆ. ಅನೇಕ ಬೆಳೆಗಾರರು ತೋಟಕ್ಕೆ ಗೊಬ್ಬರ ಹಾಕಲು ಪರದಾಡುವಂತಾಗಿದೆ. ಜುಲೈ ತಿಂಗಳಿನಲ್ಲಿ ಒಮ್ಮೆಲೇ ಬಂದ ಮಳೆ ಕಾಫಿ ತೋಟಕ್ಕೆ ಪೂರಕವಾಗಿರಲಿಲ್ಲ. ಗಿಡದ ಎಲೆಗಳು ಕೊಳೆಯಲು ಪ್ರಾರಂಭವಾಗಿ ಬೆಳೆಯುವ ಹಂತದಲ್ಲಿದ್ದ ಕಾಫಿ ಕಾಯಿಗೆ ಕೊಳೆ ರೋಗದ ಭೀತಿ ಎದುರಾಗಿದೆ. ಇದನ್ನೇ ನಂಬಿಕೊಂಡಿರುವ ಕಾಫಿ ಬೆಳೆಗಾರರು ತೀರ ಸಂಕಷ್ಟ ಎದುರಿಸುತ್ತಿದ್ದಾರೆ.
ಜ್ಹಾನವಿ ರಮೇಶ್, ಕಾಫಿ ಬೆಳೆಗಾರರು, ಕಣಿವೆ ಬಸವನಹಳ್ಳಿ

ಕಾಫಿ ತೋಟದ ಮಾಲೀಕರು ಪ್ರತಿ ವರ್ಷ ಒಂದಲ್ಲ ಒಂದು ಸಮಸ್ಯೆ ಎದುರಿಸುವಂತಾಗಿದೆ. ಸಮಯಕ್ಕೆ ಸರಿಯಾಗಿ ಮಳೆ ಬರದಿದ್ದರೆ ಕಾಫಿ ಬೆಳೆ ಸರಿಯಾಗಿ ಫಸಲು ಬಾರದೇ ತೊಂದರೆಯಾಗುತ್ತದೆ. ಸಮಯಕ್ಕೆ ಸರಿಯಾಗಿ ರಸಗೊಬ್ಬರ ಹಾಕದಿದ್ದರೆ ಹೆಚ್ಚು ಕಾಫಿ ಪಸಲು ಬರುವುದಿಲ್ಲ. ಈ ಬಾರಿ ಸಮಯಕ್ಕೆ ಸರಿಯಾಗಿ ಗೊಬ್ಬರ ಹಾಕಲು ಸಾಧ್ಯವಾಗಿಲ್ಲ. ಇನ್ನೊಂದೆಡೆ ಕಾರ್ಮಿಕರ ಸಮಸ್ಯೆಯೂ ಬೆಳೆಗಾರರಿಗೆ ಆಗುತ್ತಿದೆ. ಇದೀಗ ದಿಢೀರನೇ ಮಳೆ ಕಡಿಮೆಯಾಗಿರುವುದರಿಂದ ಕಾಫಿ ಗಿಡಗಳು ಒಣಗುತ್ತಿದೆ. ರಸಗೊಬ್ಬರ ಹಾಕಲು ಸಾಧ್ಯವಾಗುತ್ತಿಲ್ಲ. ಗೊಬ್ಬರ ತಂದು ಮಳೆಗಾಗಿ ಕಾಯುವಂತಾಗಿದೆ.
ಲೀಲಾ ದಾಸ್, ಕಾಫಿ ಬೆಳೆಗಾರರು, ಮಾಲಂಬಿ

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಳೆ ಕಡಿಮೆಯಾದರೂ ಕಡಿಮೆಯಾದರೂ, ಅಕಾಲಿಕ ಮಳೆಯಿಂದ ಕಾಫಿಗೆ ತುಂಬಾ ಹಾನಿಯಾಗಿದೆ. ವಿಶೇಷವಾಗಿ ರೋಬಸ್ಟಾ ಕಾಫಿ ಬೆಳೆಯ ಪ್ರದೇಶವಾಗಿರುವ ಚೆಯ್ಯಂಡಾಣೆ, ಕಕ್ಕಬೆ, ನಾಪೋಕ್ಲು, ಶ್ರೀಮಂಗಲ, ಬಿರುನಾಣಿ, ಟಿ.ಶೆಟ್ಟಿಗೇರಿ ಪ್ರದೇಶದಲ್ಲಿ ಈ ಬಾರಿ ಬೇಗನೇ ಹೂವು ಅರಳಿ ಅವಧಿಗೆ ಮೊದಲೇ ಕಾಯಿ ಕಟ್ಟಿರುವುದರಿಂದಲೂ ಸಮಸ್ಯೆ ಆಗಿದೆ. ಅವಧಿಗೆ ಮುಂಚಿನ ಮಳೆ ಮತ್ತು ನುರಿತ ಕಾರ್ಮಿಕರ ಕೊರತೆ ಪರಿಣಾಮವಾಗಿ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲು ಕೂಡ ಸಾಧ್ಯವಾಗಿಲ್ಲ. ಹಾಗಾಗಿ ಈ ಬಾರಿ ಕೊಡಗಿನಲ್ಲಿ ಕಾಫಿ ಉತ್ಪಾದನೆಯಲ್ಲಿ ಇಳಿಕೆ ಆಗುವ ಸಾಧ್ಯತೆ ಹೆಚ್ಚಿದೆ.

ಡಾ. ಕಾವೇರಪ್ಪ, ಮಾಜಿ ಉಪಾಧ್ಯಕ್ಷ, ಭಾರತೀಯ ಕಾಫಿ ಮಂಡಳಿ