ಜಿಲ್ಲೆ

ಹಬ್ಬಾಚರಣೆಗಳಿಗೂ ಮಾದರಿ ನೀತಿ ಸಂಹಿತೆ ಬಿಸಿ

reportermys

ಮಡಿಕೇರಿ:
ಚುನಾವಣೆಯ ಮಾದರಿ ನೀತಿ ಸಂಹಿತೆ ಬಿಸಿ ಕೊಡಗಿನಲ್ಲಿ ವಾರ್ಷಿಕ ಹಬ್ಬ, ಜಾತ್ರೆಗಳ ಆಚರಣೆ ಮೇಲೂ ಕಾಣಿಸಿಕೊಳ್ಳಲಾರಂಭಿಸಿದೆ. ರಾಮನವಮಿ ದಿನದಂದು ನೀತಿ ಸಂಹಿತೆ ಉಲ್ಲಂಘಿಸಿ ಅನ್ನದಾನ ಮಾಡಿದ ಆರೋಪದಲ್ಲಿ ಮಡಿಕೇರಿ ಪೇಟೆ ಶ್ರೀರಾಮ ಮಂದಿರ ಆಡಳಿತ ಮಂಡಳಿ ವಿರುದ್ಧ ಚುನಾವಣಾಧಿಕಾರಿಗಳು ಪೊಲೀಸ್ ದೂರನ್ನೇ ದಾಖಲಿಸಿದ್ದಾರೆ.

ಚುನಾವಣಾ ಆಯೋಗದ ಇಂತಹ ಕಟ್ಟುನಿಟ್ಟಿನ ನಿರ್ಬಂಧದಿಂದಾಗಿ ಕೆಲವೆಡೆ ಹಬ್ಬಗಳನ್ನೇ ಮುಂದೂಡಬೇಕಾದ ಅನಿವಾರ್ಯತೆ ಎದುರಾಗಿದೆ.
ವಿರಾಜಪೇಟೆ ತಾಲೂಕು ಕರಡಿಗೋಡು ಶ್ರೀ ಬಸವೇಶ್ವರ ದೇವಸ್ಥಾನ ವಾರ್ಷಿಕೋತ್ಸವ ಏ. ೩ ಮತ್ತು ಏ. ೪ರಂದು ನಿಗದಿಯಾಗಿತ್ತು. ಆದರೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಪ್ರಸಾದ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ಕೆ ಅವಕಾಶವಿಲ್ಲದ ಕಾರಣಕ್ಕೆ ಉತ್ಸವ ಮುಂದೂಡಲಾಗಿದೆ. ಈ ಬಗ್ಗೆ ಪ್ರಕಟಣೆ ನೀಡಿರುವ ಬಸವೇಶ್ವರ ದೇವಸ್ಥಾನ ಸಮಿತಿ, ಉತ್ಸವದ ಮುಂದಿನ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದಿದೆ.

ಕುಶಾಲನಗರ ತಾಲೂಕು ನಂಜರಾಯಪಟ್ಟಣದ ಐತಿಹಾಸಿಕ ಶ್ರೀ ನಂಜುಂಡೇಶ್ವರ ದೇವಾಲಯದ ವಾರ್ಷಿಕ ಉತ್ಸವ ಕೂಡ ಏ. ೩ ಮತ್ತು ಏ. ೪ರಂದು ನಡೆಯಬೇಕಿತ್ತು. ನೀತಿ ಸಂಹಿತೆ ಕಾರಣಕ್ಕೆ ಇಲ್ಲಿಯೂ ಪ್ರಸಾದ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ಕೆ ಅವಕಾಶವಿಲ್ಲದಿರುವುದು ಹಾಗೂ ರಾಜಕೀಯ ನಾಯಕರ ಪಾಲ್ಗೊಳ್ಳುವಿಕೆಗೆ ನಿರ್ಬಂಧ ಇರುವುದರಿಂದ ದೇವಸ್ಥಾನದ ವಾರ್ಷಿಕೋತ್ಸವ ಮುಂದೂಡಿರುವ ಬಗ್ಗೆ ನಂಜುಂಡೇಶ್ವರ ದೇವಸ್ಥಾನ ಸಮಿತಿ ಮಾಹಿತಿ ನೀಡಿದೆ.

ಅನ್ನಸಂತರ್ಪಣೆ, ಪ್ರಸಾದ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಜೊತೆ ವರ್ಷಂಪ್ರತಿ ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿರುವ ಬಹುತೇಕ ದೇವಾಲಯಗಳ ವಾರ್ಷಿಕ ಉತ್ಸವಗಳು, ಊರು ಹಬ್ಬಗಳನ್ನು ಇದೇ ರೀತಿಯಲ್ಲಿ ಜಿಲ್ಲೆಯ ೫ ತಾಲೂಕುಗಳಲ್ಲೂ ಮುಂದೂಡಿರುವ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಚುನಾವಣಾ ನೀತಿ ಸಂಹಿತೆ ತೆರವಾದ ನಂತರ ಎಂದಿನಂತೆ ಸಂಭ್ರಮಿಸುವ ಬಗ್ಗೆ ದೇವಾಲಯ ಸಮಿತಿಗಳು ತೀರ್ಮಾನ ತೆಗೆದುಕೊಂಡಿವೆ.

ಜಿಲ್ಲೆಯಲ್ಲಿ ಸಾಮಾನ್ಯವಾಗಿ ಮಾರ್ಚ್‌ನಿಂದ ಜೂನ್ ಮೊದಲ ವಾರದ ತನಕವೂ ಊರು ಹಬ್ಬಗಳು, ದೇವಾಲಯದ ವಾರ್ಷಿಕೋತ್ಸವಗಳು ಪ್ರತಿ ಊರಿನಲ್ಲೂ ನಡೆಯುತ್ತಿರುತ್ತದೆ. ವರ್ಷ ಪೂರ್ತಿ ಭತ್ತದ ಗದ್ದೆ, ಕಾಫಿ ತೋಟಗಳಲ್ಲಿ ದುಡಿದು ಭತ್ತ ಕಟಾವು, ಕಾಫಿ ಕೊಯ್ಲಿನ ನಂತರ ಸಿಗುವ ಬಿಡುವಿನ ಅವಧಿಯನ್ನು ಇಂತಹ ಹಬ್ಬಾಚರಣೆಗಳಿಗೆ ಮೀಸಲಿಡಲಾಗಿರುತ್ತದೆ. ಶಾಲೆಗಳಿಗೆ ಬೇಸಿಗೆ ರಜೆಯೂ ಆರಂಭವಾಗವುದರಿಂದ ಈ ಸಮಯದಲ್ಲಿ ಉತ್ಸವಗಳು ಮಕ್ಕಳ ಸಡಗರದೊಂದಿಗೆ ಕಳೆಗಟ್ಟುತ್ತದೆ. ಸೇನೆಯಲ್ಲಿ ಇರುವವರು, ಉದ್ಯೋಗ ಸೇರಿದಂತೆ ವಿವಿಧ ಕಾರಣಗಳಿಗೆ ಪರ ಊರಿನಲ್ಲಿ ನೆಲೆಸಿರುವವರು ಊರು ಹಬ್ಬದ ದಿನಾಂಕ ನೋಡಿಕೊಂಡು ರಜೆ ಮಾಡಿ ಬರುವುದು ಇಲ್ಲಿ ಸಾಮಾನ್ಯ.

ಊರು ಹಬ್ಬಗಳು, ದೇವಾಲಯ ವಾರ್ಷಿಕೋತ್ಸವಗಳು ರಾಜಕೀಯ ರಹಿತವಾಗಿ, ಸಾಮರಸ್ಯದ ವೇದಿಕೆಯಾಗಿ ನಡೆಯುತ್ತದೆ. ಒಂದೊಂದು ಊರಿನಲ್ಲೂ ವಿಭಿನ್ನ ಆಚರಣೆಗಳು ಕಂಡು ಬರುತ್ತದೆ. ಸಂಪ್ರದಾಯದ ಪ್ರತಿಬಿಂಬವಾಗಿಯೂ ಇಂತಹ ಉತ್ಸವಗಳು ಗುರುತಿಸಿಕೊಂಡಿದೆ. ಊರಿನ ಒಗ್ಗಟ್ಟು, ಗ್ರಾಮಸ್ಥರ ಪ್ರತಿಭಾ ಪ್ರದರ್ಶನ, ವರ್ಷಪೂರ್ತಿ ಕಾಯಕಕ್ಕೆ ಜೊತೆಯಾಗುವ ಜಾನುವಾರುಗಳಿಗೆ ಕೃತಜ್ಞತೆ ಹೀಗೆ ಗ್ರಾಮೀಣ ಆಚರಣೆಗಳಿಗೆ ಹಲವು ಆಯಾಮಗಳು ಇವೆ. ಎಲ್ಲಾ ಕಡೆಯೂ ಅನ್ನಸಂತರ್ಪಣೆ ಸಾಮಾನ್ಯವಾಗಿ ನಡೆಯುತ್ತದೆ.

ಕೃಷಿ ಪ್ರಧಾನ ಕೊಡಗಿನಲ್ಲಿನ ಜೂನ್ ಮಧ್ಯ ಭಾಗದಿಂದ ಮತ್ತೆ ಕಾಫಿ, ಭತ್ತದ ಕೆಲಸ ಶುರುವಾಗುತ್ತದೆ. ಹಾಗಾಗಿ ಮಾರ್ಚ್ ಮತ್ತು ಜೂನ್ ನಡುವಿನ ಅವಧಿಯಲ್ಲೇ ಹೆಚ್ಚಾಗಿ ಜಾತ್ರೆ, ದೇವಾಲಯ ವಾರ್ಷಿಕೋತ್ಸವ, ಊರು ಹಬ್ಬಗಳು ಇರುತ್ತದೆ. ಆದರೆ ಈ ಬಾರಿ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು, ಆಚರಣೆಗಳ ಪ್ರಮುಖ ಭಾಗವೇ ಆಗಿರುವ ಪ್ರಸಾದ ವಿತರಣೆ, ಅನ್ನಸಂತರ್ಪಣೆಗೆ ಚುನಾವಣಾ ಆಯೋಗ ನಿರ್ಬಂಧ ವಿಧಿಸಿರುವುದರಿಂದ ಆಚರಣೆಯನ್ನೇ ಮುಂದೂಡುವ ಮತ್ತು ಕೆಲವಡೆ ಈ ವರ್ಷದ ಮಟ್ಟಿಗೆ ರದ್ದುಪಡಿಸುವ ತೀರ್ಮಾನವನ್ನು ದೇವಾಲಯ ಸಮಿತಿಗಳು ತೆಗೆದುಕೊಂಡಿವೆ. ಇದರಿಂದಾಗಿ ಸದ್ಯದ ಮಟ್ಟಿಗೆ ಚುನಾವಣಾ ಆಯೋಗದ ’ಮತದಾನವನ್ನು ಹಬ್ಬದಂತೆ ಸಂಭ್ರಮಿಸಿ’, ಎನ್ನುವ ಘೋಷ ವಾಕ್ಯವೇ ಸತ್ಯವಾದಂತಿದೆ.