ಜಿಲ್ಲೆ

ಎಳನೀರು ಜತೆಗೆ ಕಾಯಿಗೂ ದಾಖಲೆ ದರ!

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಕಳೆದ ಮೂರ‌್ನಾಲ್ಕು ತಿಂಗಳಿಂದ ದಾಖಲೆ ಎಂಬಂತೆ ಏರಿಕೆ ಕಂಡಿರುವ ಎಳನೀರು ದರದ ನಡುವೆ ಕೆಲವು ದಿನಗಳಿಂದ ದಿಢೀರನೇ ತೆಂಗಿನ ಕಾಯಿ ದರವೂ ಗಗನಮುಖಿಯಾಗಿರುವುದು ತೆಂಗುಬೆಳೆಗಾರರಲ್ಲಿ ಸಂತಸ ಮೂಡಿಸಿದ್ದರೆ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಹೋಟೆಲ್ ಉದ್ಯಮಕ್ಕೆ ದರ ಬಿಸಿ ಮುಟ್ಟುತ್ತಿದೆ.

ಇಂಗು ತೆಂಗು ಇದ್ದರೆ ಮಂಗವೂ ಅಡುಗೆ ಮಾಡುತ್ತದೆ ಎಂಬುದು ಜನಪದರ ಮಾತು, ತೆಂಗಿಲ್ಲದೆ ಯಾವುದೇ ಅಡುಗೆ ರುಚಿಸುವುದಿಲ್ಲ ಎನ್ನುವಷ್ಟರ ಮಟ್ಟಿಗೆ ತೆಂಗಿನ ಕಾಯಿಯ ಅವಶ್ಯಕತೆ ಇದೆ. ದಿನನಿತ್ಯದ ಬಳಕೆಯಾಗಿರುವ ತೆಂಗಿನಕಾಯಿ ದರ ಗಗನಮುಖಿಯಾಗಿರುವುದು ಜನರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

50 ರೂ. ದಾಟಿದ ತೆಂಗಿನಕಾಯಿ: ಸಾಮಾನ್ಯ ದಿನಗಳಲ್ಲಿ ಮಾರುಕಟ್ಟೆಗಳಲ್ಲಿ 20-25 ರೂಪಾಯಿಯಿಂದ ಆರಂಭವಾಗುತ್ತಿದ್ದ ತೆಂಗಿನ ದರ ದಿಢೀರನೇ 40-50 ರೂಪಾಯಿಗೆ ಏರಿಕೆಯಾಗಿದೆ, ದೊಡ್ಡಗಾತ್ರದ ಗುಣಮಟ್ಟದ ತೆಂಗಿನ ಕಾಯಿ ದರ 60ರ ಗಡಿಯಲ್ಲಿದೆ. ಸಾಮಾನ್ಯವಾಗಿ ಎಳನೀರಿಗೆ ಹೋಲಿಸಿದರೆ ತೆಂಗಿನ ಕಾಯಿ ದರ ಕಡಿಮೆ ಇರುತ್ತದೆ ಈ ಬಾರಿ ಎಳನೀರಿಗೆ ಸೆಡ್ಡು ಹೊಡೆಯುವಂತೆ ಕಾಯಿಯ ದರ ಏರುಮುಖದಲ್ಲಿ ಸಾಗುತ್ತಿದೆ.

ಎಳನೀರು ದರದ ಎೆಕ್ಟ್! ಕಳೆದ ನಾಲ್ಕೈದು ತಿಂಗಳಿಂದ ಎಳನೀರು ದರ ಏರಿಕೆಯಿಂದ ತೆಂಗು ಬೆಳೆಗಾರರು ಎಳನೀರಿಗೆ ಒತ್ತು ನೀಡುತ್ತಿದ್ದಾರೆ, ಜತೆಗೆ ಕೇಂದ್ರ ಸರ್ಕಾರ ಕೊಬ್ಬರಿಗೆ ಬೆಂಬಲ ಬೆಲೆ ನೀಡಿರುವುದರಿಂದ ತೆಂಗಿನಕಾಯಿ ಬದಲಿಗೆ ಕೊಬ್ಬರಿಗೆ ಆದ್ಯತೆ ನೀಡಲಾಗುತ್ತಿದೆ ಇದರ ಪರಿಣಾಮವಾಗಿ ಮಾರುಕಟ್ಟೆಗೆ ತೆಂಗಿನ ಆಮದು ತಗ್ಗಿದ್ದು ದರ ಏರಿಕೆಗೆ ಕಾರಣವಾಗಿದೆ ಎಂಬ ಮಾತು ಕೇಳಿಬರುತ್ತಿದೆ.ಇದರೊಂದಿಗೆ ಕಳೆದೆರಡು ವರ್ಷದ ಬರದ ಪರಿಣಾಮವಾಗಿ ಉತ್ಪಾದನೆ ಕುಸಿತ ಕಂಡಿತ್ತು, ಇದೂ ಸಹ ದರ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ಸಾಲು ಸಾಲು ಹಬ್ಬಗಳು ಆಗಮಿಸುತ್ತಿದ್ದು ಮುಂದಿನ ದಿನಗಳಲ್ಲಿ ತೆಂಗಿನ ಕಾಯಿ ಮತ್ತಷ್ಟು ದುಬಾರಿಯಾಗುವ ಲಕ್ಷಣ ಕಂಡುಬರುತ್ತಿದೆ.

ಖಾನಾವಳಿಗೆ ಸಂಕಷ್ಟ: ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಹೋಟೆಲ್ ಉದ್ಯಮವೂ ಮುಂಚೂಣಿಯಲ್ಲಿದೆ, ದರ್ಶಿನಿ, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಸೇರಿ ಮೆಸ್‌ಗಳು, ಬೀದಿಬದಿ ಹೋಟೆಲ್‌ಗಳು ಸಾಕಷ್ಟು ಸಂಖ್ಯೆಯಲ್ಲಿವೆ, ಕೈಗಾರಿಕಾ ಪ್ರದೇಶಗಳ ವ್ಯಾಪ್ತಿಯಲ್ಲಿ ಮೆಸ್, ಹೋಟೆಲ್‌ಗಳ ಸಂಖ್ಯೆ ಹೆಚ್ಚಿವೆ, ತೆಂಗಿನ ಕಾಯಿ ದರ ಏರಿಕೆ ಹೋಟೆಲ್ ಉದ್ಯಮಕ್ಕೆ ದುಬಾರಿಯಾಗಿ ಪರಿಣಮಿಸಿದೆ ಎಂಬ ಮಾತು ಕೇಳಿಬರುತ್ತಿದೆ.

ಗ್ರಾಮಾಂತರ ಜಿಲ್ಲೆಯಲ್ಲಿ ತೆಂಗು ಪ್ರಮುಖ ಬೆಳೆಯಾಗಿಲ್ಲವಾದರೂ ಇತ್ತೀಚಿನ ವರ್ಷಗಳಲ್ಲಿ ತೆಂಗು ಬೆಳೆಗೆ ರೈತರು ಆಸಕ್ತಿ ತೋರಿಸುತ್ತಿದ್ದಾರೆ, ಸುಮಾರು ಎರಡೂವರೆ ಸಾವಿರ ಹೆಕ್ಟೇರ್‌ನಲ್ಲಿ ತೆಂಗು ಬೆಳೆ ಇದೆ, ಹೊರಗಡೆಯಿಂದ ಜಿಲ್ಲೆಯ ಮಾರುಕಟ್ಟೆಗೆ ಬರುವ ತೆಂಗಿನ ಕಾಯಿ ಪ್ರಮಾಣ ಕಡಿಮೆಯಾಗಿದೆ, ಇದರ ಜತೆಗೆ ಕಳೆದೆರಡು ವರ್ಷ ತೀವ್ರ ಮಳೆ ಕೊರತೆಯಿಂದಾಗಿ ತೆಂಗಿನ ಉತ್ಪಾದನೆ ಕುಸಿತ ಕಂಡಿತ್ತು. ಮಾರುಕಟ್ಟೆಗಳಲ್ಲಿ ತೆಂಗಿನ ಕಾಯಿ ಪ್ರಮಾಣ ಕಡಿಮೆಯಾಗಿರುವುದರಿಂದ ದರ ಏರಿಕೆ ಕಂಡಿದೆ.

ಗುಣವಂತ, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ ಬೆಂ.ಗ್ರಾಮಾಂತರ

ಎಳನೀರಿಗೆ ಹೆಚ್ಚಿನ ದರ ಇರುವುದರಿಂದ ವ್ಯಾಪಾರಿಗಳಿಂದ ಹೆಚ್ಚಿನ ಬೇಡಿಕೆ ಇದೆ, ಎಳನೀರು ಬಲಿಯಲು ಬಿಡುತ್ತಿಲ್ಲ, ಜತೆಗೆ ಕಳೆದೆರಡು ವರ್ಷ ತೀವ್ರ ಮಳೆ ಕೊರತೆಯಿಂದಾಗಿ ನಿರೀಕ್ಷಿತ ಲವೂ ಇಲ್ಲವಾಗಿದೆ ಇದರಿಂದ ತೆಂಗಿನ ಕಾಯಿ ಕೊರತೆ ಉದ್ಘವಿಸಿದ್ದು, ದರ ಏರಿಕೆಗೆ ಕಾರಣವಾಗಿದೆ.

ಜಗದೀಶಪ್ಪ, ಗೊಡ್ಲುಮುದ್ದೇನಹಳ್ಳಿ ರೈತ