ಜಿಲ್ಲೆ

ಶ್ರಾವಣಕ್ಕೆ ತೆಂಗು ದುಬಾರಿ

ಗಂಗಾಧರ ಬಿ ವಿ

* ಕೆಜಿ 70 ರೂ ಸನಿಹಕ್ಕೆ

* ರೈತರ ಮೊಗದಲ್ಲಿ ಮೂಡಿದ ಸಂತಸ

ಗಂಗಾಧರ್ ಬೈರಾಪಟ್ಟಣ ರಾಮನಗರ

ಶ್ರಾವಣ ಮಾಸ ಆರಂಭವಾಗಿದೆ ಹಬ್ಬಗಳ ಸುಗ್ಗಿಯೂ ಆರಂಭಗೊಳ್ಳಲಿದೆ. ಇದರ ನಡುವೆ ಆಷಾಢದಲ್ಲಿಯೂ ಇಳಿಕೆ ಕಾಣದ ತೆಂಗಿನ ಬೆಲೆ ಮತ್ತಷ್ಟು ಏರಿಕೆ ಆಗುವ ಸೂಚನೆ ನೀಡಿದ್ದು, ಗ್ರಾಹಕರ ಕೈ ಸುಡುವುದಂತೂ ಗ್ಯಾರಂಟಿ ಆಗಿದೆ.

2024ರ ಬೇಸಿಗೆ ಬೇಗೆಗೆ ಬಹುತೇಕ ತೆಂಗು ನೆಲ ಕಚ್ಚಿ ಇಳುವರಿ ಕುಂಠಿತವಾದ ಪರಿಣಾಮ ಹಲವು ತಿಂಗಳಿಂದಲೂ ತೆಂಗಿಗೆ ಬಂಪರ್ ಬೆಲೆ ಬಂದಿದೆ. ಆಷಾಢ ಮಾಸದಲ್ಲಿ ಕೊಂಚ ಪ್ರಮಾಣದಲ್ಲಿ ಇಳಿಕೆಯಾಗಿದ್ದ ತೆಂಗಿನ ಬೆಲೆ ಶ್ರಾವಣ ಮಾಸದಲ್ಲಿ ಪ್ರತಿ ಕೆಜಿಗೆ 70-75 ರೂ. ತಲುಪಿದರೂ ಆಶ್ಚರ್ಯ ಪಡಬೇಕಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.

ಬೆಲೆ ಏರಿಕೆ ?:

ಸದ್ಯ ರಾಮನಗರ ಮಾರುಕಟ್ಟೆಯಲ್ಲಿ ಸಗಟು ಖರೀದಿಯಲ್ಲಿ ತೆಂಗಿನ ಕಾಯಿ ಪ್ರತಿ ಕೆಜಿಗೆ 62-65 ರೂ. ವರೆಗೂ ರೈತರಿಗೆ ಸಿಗುತ್ತಿದೆ. ಶ್ರಾವಣ ಮಾಸದಲ್ಲಿ ನಾಗರ ಪಂಚಮಿ, ವರಮಹಾಲಕ್ಷ್ಮೀ , ರಕ್ಷಾ ಬಂಧನ, ಗೋಕುಲಾಷ್ಟಮಿ ಹೀಗೆ ಸಾಲು ಸಾಲು ಹಬ್ಬಗಳೇ ಬರಲಿದ್ದು, ಇವುಗಳಿಗೆ ತೆಂಗಿನ ಅನಿವಾರ್ಯತೆಯಂತೂ ಇದ್ದೇ ಇದೆ. ಇದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಲಿದ್ದು, ತೋಟಗಳಲ್ಲಿಯೇ ಇಳುವರಿ ಕಡಿಮೆ ಇರುವ ಕಾರಣ, ರೈತರ ಬಳಿಯೇ ಪ್ರತಿ ಕೆಜಿಗೆ 70-75 ರೂ. ಗೆ ಖರೀದಿ ಮಾಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಹಬ್ಬಗಳಂದು ಸಾ`Áರಣ ತೆಂಗಿಗೆ ತಲಾ ಒಂದಕ್ಕೆ 35-40 ರೂ. ದಾಟುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯಾಪಾರಸ್ತರು.

ದುಬಾರಿಯಾಗಲು ಕಾರಣ?

ಅನಿರೀಕ್ಷಿತ ಬೆಲೆ ಏರಿಕೆ ರೈತರ ಮೊಗದಲ್ಲಿ ಸಂತೋಷ ಮನೆ ಮಾಡಿದೆ. ಜಿಲ್ಲೆಯಲ್ಲಿ ಸುಮಾರು 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದ್ದು, ಚನ್ನಪಟ್ಟಣ ತಾಲೂಕು ಒಂದರಲ್ಲಿಯೇ ಸುಮಾರು 11 ಸಾವಿರ ಹೆಕ್ಟೇರ್ ಪ್ರದೇಶ ತೆಂಗು ಬೆಳೆಯಲಾಗುತ್ತದೆ. ಕಳೆದ ಹಲವು ವರ್ಷಗಳಿಂದಲೂ ಬೆಂಕಿ ರೋಗ, ನುಸಿ ಪೀಡೆಯಂತಹ ನುಸಿ ಪೀಡೆಯನ್ನು ಎದುರಿಸಿದ್ದಾರೆ. ಈಗಲೂ ನುಸಿ ಪೀಡೆ ರೋಗ ವ್ಯಾಪಕವಾಗಿದೆ. ಕಳೆದ ವರ್ಷ ರಾಮನಗರ ಜಿಲ್ಲೆಯಲ್ಲಿ ಬಿಸಿಲ ತಾಪ 40 ಡಿಗ್ರಿ ಆಸುಪಾಸಿಗೆ ಬಂದು ತಲುಪಿತ್ತು. ನೀರಾವರಿ ತೋಟದಲ್ಲಿಯೂ ತೆಂಗು ಬಿಸಿಲ ಬೇಗೆಗೆ ಸಾಯುವ ಹಂತಕ್ಕೆ ತಲುಪಿದ್ದವು. ಇದರ ಪರಿಣಾಮ ಇನ್ನೂ ತೆಂಗು ಇಳುವರಿ ಮೇಲೆ ಇದ್ದು, ಉತ್ಪಾದನೆ ಮೇಲೆ ಪರಿಣಾಮ ಬೀರಿದೆ.

ಆವಕ ಕಡಿಮೆ

ರಾಮನಗರ ಮಾರುಕಟ್ಟೆಗೆ ಪ್ರತಿ ದಿನ ಸರಾಸರಿ 15-20 ಟನ್ ತೆಂಗು ಬರುತ್ತಿದೆ. ಸಾಮಾನ್ಯವಾಗಿ ತೆಂಗಿಗೆ ವ್ಯಾಪಾರ ಹೆಚ್ಚಾರ ರಾಮನಗರ ಮತ್ತು ಚನ್ನಪಟ್ಟಣ ಎಪಿಎಂಸಿಯಲ್ಲಿಯೇ ನಡೆಯುತ್ತಿದ್ದು, ಇಲ್ಲಿಯೂ ಆವಕ ಕಡಿಮೆ ಆಗಿರುವುದು ಪೂರೈಕೆಯಲ್ಲಿನ ಕೊರತೆ ಸೂಚಿಸಿದೆ. ಅಲ್ಲದೆ, ಮಂಗಳವಾರ ಪ್ರತಿ ಕಾಯಿಗೆ 20 ರೂ. ನಿಂದ 60 ರೂ. ವರೆಗೂ ಮಾರಾಟವಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ಸುನಿಲ್ ಕುಮಾರ್ ಮಾಹಿತಿ ನೀಡಿದರು.

ಪ್ರಸ್ತುತ ಪ್ರತಿ ಕೆಜಿಗೆ 62-65 ರೂ. ವರೆಗೂ ಮಾರುಕಟ್ಟೆಯಲ್ಲಿ ಬೆಲೆ ಇದೆ. ಆಷಾಢ ಕಳೆಯುತ್ತಿದ್ದಂತೆ ಹಬ್ಬಗಳ ಸುಗ್ಗಿ ಆರಂಭಗೊಳ್ಳುವ ಕಾರಣ ತೆಂಗಿನ ಬೆಲೆ 75 ರೂವರೆಗೂ ಏರಿಕೆ ಕಾಣುವ ಸಾಧ್ಯತೆ  ಇದೆ. ಇಳುವರಿ ಕುಂಠಿತವಾಗಿರುವ ಕಾರಣ ತೆಂಗಿನ ಬೆಲೆ ಏರಿಕೆ ಆಗಿದೆ. | ಶಿವರಾಜ್, ಕೋಲೂರು, ತೆಂಗು ವ್ಯಾಪಾರಿರೋಗ ಬಾಧೆ ಹಾಗೂ ಕಳೆದ ಬಾರಿ ಬೇಸಿಗೆ ಹೊಡೆತಕ್ಕೆ ನಮ್ಮ ಮರಗಳಲ್ಲಿ ಇಳುವರಿ ಕುಂಠಿತವಾಗಿದೆ. ಈಗ ಉತ್ತಮ ಬೆಲೆ ಸಿಗುತ್ತಿದೆಯಾದರೂ, ಸಂಪೂರ್ಣ ಇಳುವರಿ ಇದ್ದಿದ್ದರೆ ಮತ್ತಷ್ಟು ಲಾಭವನ್ನು ರೈತರು ನೋಡಬಹುದಿತ್ತು. ಆದರೆ, ಯಾವಾಗಲೂ ಇದೇ ಬೆಲೆ ಇದ್ದರೆ ಖುಷಿ. | ಗಿರಿ, ರೈತ, ದೇವರಹಳ್ಳಿ