ಅರಸೀಕೆರೆಯ ಎಪಿಎಂಸಿ ವರ್ತಕರ ಅಂಗಡಿಗಳಲ್ಲಿ ಸಂಗ್ರಹವಾಗಿರುವ ತೆಂಗಿನ ಕಾಯಿ. 
ಜಿಲ್ಲೆ

ಗಗನಮುಖಿಯಾದ ತೆಂಗಿನ ಕಾಯಿ

ಅಭಿನಯ್ ಎಚ್.ಎಂ

ಅರಸೀಕೆರೆ: ತೆಂಗು ಉತ್ಪನ್ನಗಳಿಗೆ ಪ್ರಸಿದ್ಧಿಯಾಗಿರುವ ಅರಸೀಕೆರೆ, ತಿಪಟೂರು, ತುರುವೇಕೆರೆ ಚನ್ನರಾಯಪಟ್ಟಣ ಸೇರಿದಂತೆ ತೋಟಗಾರಿಕಾ ಬೆಳೆ ವ್ಯಾಪ್ತಿಯ ಜಿಲ್ಲೆಗಳ ಎಪಿಎಂಸಿ ಕೇಂದ್ರಗಳಲ್ಲಿ ತೆಂಗಿನಕಾಯಿ ದರ ಗಗನಮುಖಿಯಾಗಿದ್ದರೆ, ಕೊಬ್ಬರಿ ಧಾರಣೆ ಏರಿಳಿತ ಬೆಳೆಗಾರರ ಹಾರ್ಟ್ ಬೀಟ್ ಹೆಚ್ಚಿಸಿದೆ.

ಕಳೆದೊಂದು ತಿಂಗಳಿನಿಂದ ಹಾವು-ಏಣಿಯಾಟದಂತೆ ದರ ಸಾಗಿದ್ದು ಅನ್ನದಾತರು ತಮ್ಮಲ್ಲಿರುವ ದಾಸ್ತಾನನ್ನು ಮಾರಾಟ ಮಾಡಬೇಕೇ ಅಥವಾ ಬೇಡವೇ ಎನ್ನುವ ಜಿಜ್ಞಾಸೆಯಲ್ಲಿದ್ದಾರೆ. ಕಳೆದ ಜನವರಿಯಿಂದ ಮಾರ್ಚ್ ಅಂತ್ಯದವರೆಗೂ ಪ್ರತಿ ಕ್ವಿಂಟಾಲ್ ಕೊಬ್ಬರಿ 14000-14600 ರೂ. ನಡುವೆ ಮಾರಾಟವಾಗಿತ್ತು. ಇದೀಗ ಏಪ್ರಿಲ್ ಮೊದಲ ವಾರದ ಹರಾಜಿನಲ್ಲಿ ದಾಖಲೆಯ 18,800 ರೂ.ಗೆ ಏರಿಕೆಯಾಗಿತ್ತು. ಏ.15ರಂದು ಮಂಗಳವಾರ ನಡೆದ 17,500 ರೂ.ಗೆ ಕುಸಿತವಾಗಿದ್ದು ಒಂದೇ ಹರಾಜಿನಲ್ಲಿ 1300 ರೂ.ಗಳಿಗೆ ಇಳಿಕೆಯಾಗಿದೆ. ಸತತ ಬೆಲೆ ಏರಿಳಿತದ ಹಗ್ಗಜಗ್ಗಾಟ ಸಹಜವಾಗಿಯೇ ಹೆಚ್ಚಿನ ಲಾಭದ ನಿರೀಕ್ಷೆ ಹೊಂದಿರುವ ಅನ್ನದಾತರಿಗೆ ಕೊಂಚ ದಿಗಿಲು ಹುಟ್ಟಿಸಿದೆ.

ಕೊಬ್ಬರಿ ಧಾರಣೆಯಲ್ಲಿ ಪ್ರತಿ ಹರಾಜಿನಲ್ಲಿಯೂ ಏರಿಳಿತದ ತುಮುಲ ಕಂಡು ಬಂದಿದ್ದರೆ, ಇದಕ್ಕೆ ವ್ಯತಿರಿಕ್ತ ಎನ್ನುವಂತೆ ತೆಂಗಿನಕಾಯಿ ಬೆಲೆ ಮಾತ್ರ ಗಗನ ಮುಖಿಯಾಗಿದೆ. ಪ್ರತಿ ಟನ್‌ಗೆ 55ರಿಂದ 60 ಸಾವಿರ ರೂ.ಗೆ ಬಿಕರಿಯಾಗುತ್ತಿದ್ದು, ಆ ಮೂಲಕ ಬಂಪರ್ ದರ ದೊರೆಯುತ್ತಿದೆ. ಆದರೆ ಮದುವೆ, ಆರತಕ್ಷತೆ ಸೇರಿದಂತೆ ಹತ್ತು ಹಲವು ಬಗೆಯ ಶುಭ ಸಮಾರಂಭ ಮಾಡುವವರಿಗೆ ತೆಂಗಿನ ಕಾಯಿ ಜೇಬು ಸುಡುತ್ತಿದೆ. ಹೇಗಾದರೂ ಸರಿ ಅತಿಥಿ ಸತ್ಕಾರ ಮಾಡಲೇಬೇಕೆಂಬ ಹಠಕ್ಕೆ ಬಿದ್ದವರು ಕಿತ್ತಳೆ, ಮೊಸಂಬಿ ಹಣ್ಣಿನ ಮೊರೆ ಹೋಗುವಂತಾಗಿದೆ.

ಅಗತ್ಯ ವಸ್ತುಗಳ ಬೆಲೆ ಹೆಚ್ಚಳದ ಜತೆಗೆ ತೆಂಗಿನ ಕಾಯಿ, ಕೊಬ್ಬರಿಗೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯುತ್ತಿದೆ ಎನ್ನಲಾಗಿದೆ. ಖಾದ್ಯ ತೈಲಕ್ಕೆ ಭಾರಿ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ತಮಿಳುನಾಡು ಹಾಗೂ ಕೇರಳ ಸೇರಿದಂತೆ ಹಲವು ಸಣ್ಣ ಪುಟ್ಟ ವ್ಯಾಪಾರಿಗಳು ಮಧ್ಯವರ್ತಿಗಳ ಮೂಲಕ ಸ್ಥಳೀಯ ತೆಂಗು ಬೆಳೆಗಾರರ ಬಳಿ ತೆರಳಿ ಕೊಬ್ಬರಿ ಖರೀದಿಸಲು ಹಳ್ಳಿಗಳಿಗೆ ಮುಗಿ ಬೀಳುತ್ತಿದ್ದಾರೆ.

ಇದಲ್ಲದೆ ತಿಪಟೂರು, ಚನ್ನರಾಯಪಟ್ಟಣ, ಅರಸೀಕೆರೆ ಹಾಗೂ ತುರುವೇಕೆರೆ ಸೇರಿದಂತೆ ಇತರ ಕೃಷಿ ಉತ್ಪನ್ನ ಮಾರುಕಟ್ಟೆಗಳಿಂದ ಉತ್ತರ ಪ್ರದೇಶ, ಪಂಜಾಬ್, ದೆಹಲಿ, ಮಹಾರಾಷ್ಟ್ರ, ಜಲಂಧರ್, ಪುಣೆ, ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ಉತ್ತರ ಭಾರತದ ಅನೇಕ ರಾಜ್ಯಗಳಿಗೆ ರವಾನೆಯಾಗುವ ಬಹುಪಾಲು ಕೊಬ್ಬರಿ ದಿನ ನಿತ್ಯದ ಬಳಕೆಗೆ ಯೋಗ್ಯವಾಗಿರುವುದು ಸದ್ಯದ ಮಟ್ಟಿಗೆ ಧಾರಣೆ ಹೆಚ್ಚಳಕ್ಕೆ ಪ್ರಮುಖ ಕಾರಣವೆಂದೇ ವಿಶ್ಲೇಷಿಸಲಾಗುತ್ತಿದೆ.

ಬೇಸಿಗೆ ಬಿಸಲಿನ ಝಳದಿಂದ ಬಳಲುತ್ತಿರುವ ಜನರು ಅನಿವಾರ್ಯವಾಗಿ ಎಳನೀರಿನ ಮೊರೆ ಹೋಗುವಂತಾಗಿದೆ. ನಗರದ ಆಯಕಟ್ಟಿನ ಜಾಗಗಳಲ್ಲಿ ಸಿಕ್ಕಿದ್ದೇ ಸೀರುಂಡೆ ಎನ್ನುವಂತೆ ಕೆಲವೆಡೆ 50 ರಿಂದ 60 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಎಳನೀರು ಮಾರುಕಟ್ಟೆಗೆ ಆವಕವಾಗುತ್ತಿದೆ. ಹೊರ ಜಿಲ್ಲೆ, ರಾಜ್ಯಗಳಿಗೂ ರವಾನೆಯಾಗುತ್ತಿರುವುದರಿಂದ ತೆಂಗಿನ ಕಾಯಿ, ಕೊಬ್ಬರಿಗೆ ಉತ್ತಮ ಧಾರಣೆ ದೊರೆಯುತ್ತಿದೆ. ಇನ್ನೇನು ಕೆಲವೇ ತಿಂಗಳಿನಲ್ಲಿ ವರಮಹಾಲಕ್ಷ್ಮಿ, ಗೌರಿ, ಗಣೇಶ ಹಬ್ಬ, ಮಹಾನವಮಿ, ದೀಪಾವಳಿ ಬರಲಿದ್ದು ಕೊಬ್ಬರಿ ಅಚ್ಚರಿಯ ಬೆಲೆ ದೊರೆಯಬಹುದೆಂಬ ಲೆಕ್ಕಾಚಾರವೂ ನಡೆದಿದೆ.

ಬಾಧೆ: ತೆಂಗಿನ ಗರಿಗೆ ತಗುಲಿರುವ ಕಪ್ಪುತಲೆ ಹುಳು ಕಾಟ, ಮಳೆ ಕೊರತೆ, ಸುಳಿ ಕೊರೆಯುವ ಕೀಟ, ಹಣಬೆ ರೋಗ ತೆಂಗು ಬೆಳೆಗಾರರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ತಾಲೂಕಿನಾದ್ಯಂತ ಉತ್ತಮ ಮಳೆ ಸುರಿದ ಹಿನ್ನೆಲೆಯಲ್ಲಿ ಕೆರೆಕಟ್ಟೆಗಳು ಸಂಪೂರ್ಣ ಭರ್ತಿಯಾಗಿದ್ದು ಅಂತರ್ಜಲ ಹೆಚ್ಚಿದ್ದು ಇಳುವರಿ ನಿರೀಕ್ಷೆ ಕೈ ಕೊಟ್ಟಿದೆ. ಕೆಲವೆಡೆ ತೆಂಗಿನ ಮರದಲ್ಲಿ ಗರಿ ಹೊರತು ಪಡಿಸಿದರೆ, ಸಣ್ಣ ಎಳನೀರನ್ನು ಕಾಣಲು ಸಾಧ್ಯವಿಲ್ಲದಂತಾಗಿದೆ. ಕಡಿಮೆ ಫಸಲು ದೊರೆಯುತ್ತಿರುವುದು ಮಾರುಕಟ್ಟೆಗೆ ದಾಸ್ತಾನು ಆವಕವಾಗುತ್ತಿಲ್ಲ. ಇದರಿಂದಾಗಿಯೇ ತೆಂಗಿನ ಕಾಯಿ, ಕೊಬ್ಬರಿ ಬೆಲೆ ಹೆಚ್ಳಳವಾಗಿದೆ.

ಯೋಜನೆ ರೂಪಿಸಿ: ಎಳನೀರನ್ನು ರಾಷ್ಟ್ರೀಯ ಪಾನೀಯವೆಂದು ಘೋಷಿಸಿ ಶಾಲಾ ಮಕ್ಕಳ ಬಿಸಿಯೂಟದ ವೇಳೆ ಮಕ್ಕಳಿಗೆ ಎಳನೀರು ನೀಡುವ ಮೂಲಕ ಬೆಳೆಗಾರರನ್ನು ಸರ್ಕಾರ ಪ್ರೋತ್ಸಾಹಿಸಬೇಕು. ಜತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆಂಗು ಉತ್ಪನ್ನಗಳನ್ನು ಪರಿಚಯಿಸಲು ಯೋಜನೆ ರೂಪಿಸಬೇಕು. ಮಾರುಕಟ್ಟೆ ಗುಟ್ಟನ್ನು ಬಿಟ್ಟುಕೊಡುತ್ತಿರುವ ಕೆಲ ವರ್ತಕರ ಧೋರಣೆ ಬೆಲೆ ಏರಿಳಿತಕ್ಕೆ ಪ್ರಮುಖ ಕಾರಣವಾಗಿದೆ. ಎಪಿಎಂ ಅಧಿಕಾರಿಗಳು ಇಂತಹವರನ್ನು ಪತ್ತೆಹಚ್ಚಿ ವ್ಯಾಪಾರ ಪರವಾನಗಿ ರದ್ದುಗೊಳಿಸದರೆ ಮಾತ್ರವೇ ರೈತರಿಗೆ ಸ್ಥಿರ ಹಾಗೂ ಉತ್ತಮ ಧಾರಣೆ ದೊರೆಯಲು ಸಾಧ್ಯ ಎನ್ನುವ ಆಗ್ರಹವೂ ಎಲ್ಲೆಡೆ ಕೇಳಿಬಂದಿದೆ.

ಕೊಬ್ಬರಿ ದಾಸ್ತಾನು ಕಡಿಮೆ ಪ್ರಮಾಣದಲ್ಲಿ ಮಾರುಕಟ್ಟೆಗೆ ಆವಕವಾಗುತ್ತಿರುವ ಹಿನ್ನೆಲೆಯಲ್ಲಿ ತೆಂಗಿನಕಾಯಿ ಹಾಗೂ ಕೊಬ್ಬರಿ ಬೆಲೆ ಹೆಚ್ಚಳವಾಗಿದೆ. ಜತೆಗೆ ನೆರೆಯ ರಾಜ್ಯಗಳ ವರ್ತಕರು ಇಲ್ಲಿನ ಕಾಯಿ, ಕೊಬ್ಬರಿ ಕೊಳ್ಳಲು ಉತ್ಸುಕರಾಗಿದ್ದು ಆಶಾದಾಯಕ ಬೆಳವಣಿಗೆಯಾಗಿದೆ. ಹಬ್ಬಗಳು ಆಗಮಿಸುವ ವೇಳೆಗೆ ಬೆಲೆ ಹೆಚ್ಚವಾಗುವ ನಿರೀಕ್ಷೆಯಿದೆ.

ಸಿದ್ದರಂಗಸ್ವಾಮಿ ಎಪಿಎಂಸಿ ಕಾರ್ಯದರ್ಶಿ, ಅರಸೀಕೆರೆ

ಮಾರುಕಟ್ಟೆಯಲ್ಲಿ ತೆಂಗಿನ ಕಾಯಿ ಹಾಗೂ ಕೊಬ್ಬರಿ ಬೆಲೆ ಏರಿಕೆಯಾಗಿರುವುದು ಅನ್ನದಾತರಿಗೆ ಕೊಂಚ ನೆಮ್ಮದಿ ನೀಡಿದೆ. ಬೆಲೆ ಸ್ಥಿರತೆ ಕಾಪಾಡುವ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋಲ್ಡ್ ಸ್ಟೋರೇಜ್ ನಿರ್ಮಿಸಿ ನೆರವಿಗೆ ಧಾವಿಸುವತ್ತ ಗಂಭೀರ ಚಿಂತನೆ ನಡೆಸಬೇಕು. ಆಗ ಮಾತ್ರವೇ ತೆಂಗು ಬೆಳೆಗಾರರಿಗೆ ಬೆಲೆ ಏರಿಳಿತದ ಸಮರದಿಂದ ವಿಮುಕ್ತಿ ದೊರೆಯಲಿದೆ.

ಮಲ್ಲೇನಹಳ್ಳಿ ಶಿವಶಂಕರಸ್ವಾಮಿ ತೆಂಗು ಬೆಳೆಗಾರ, ಅರಸೀಕೆರೆ