ಜಿಲ್ಲೆ

ತೆಂಗಿನಕಾಯಿ 'ಬೆಲೆ' ಜಿಗಿತ...!!

ಕೆಜಿಗೆಗೆ 75ರಿಂದ 80ರೂ.ಗೆ ಏರಿಕೆ

ದರ ಏರಿಕೆಯಿಂದ ಗ್ರಾಹಕರಿಗೆ ಹೊಡೆತ

ಪ್ರಶಾಂತ ಭಾಗ್ವತ, ಉಡುಪಿ

ಜೀವನದಲ್ಲಿ ನಿತ್ಯಬಳಕೆಗೆ ಬೇಕಾಗಿರುವ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೇ ತೆಂಗಿನಕಾಯಿಯೂ ಸಹ ತನ್ನ ದರವನ್ನು ದ್ವಿಗುಣ ಮಾಡಿಕೊಂಡಿದೆ. ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಬೆಲೆ ಕೆಜಿಗೆ 75ರಿಂದ 80ರೂ.ಗೆ ಏರಿಕೆ ಕಂಡಿದೆ.

ತರಕಾರಿ, ಖಾದ್ಯ ತೈಲ, ಅಕ್ಕಿ, ಬೇಳೆ-ಕಾಳು, ಹಣ್ಣು-ಹಂಪಲುಗಳ ಗಗನಮುಖಿ ಬೆಲೆಯಿಂದ ಮೊದಲೇ ಕಂಗೆಟ್ಟಿರುವ ಗ್ರಾಹಕರಿಗೆ ಇದೀಗ ಕಲ್ಪವೃಕ್ಷದ ಉತ್ಪನ್ನವಾದ ತೆಂಗಿನಕಾಯಿಯೂ ಬರೆ ಎಳೆದಿದೆ.

ಕಾಯಿ ಬೆಲೆ ದ್ವಿಗುಣ

ಮೂರು ವರ್ಷದಿಂದ ತೆಂಗಿನ ಬೆಲೆ ಏರುತ್ತಲೇ ಇದೆ. 2022-23ರ ವೇಳೆಯಲ್ಲಿ ಮಾರುಕಟ್ಟೆಯಲ್ಲಿ ಕೆಜಿ ತೆಂಗಿನಕಾಯಿಗೆ 18ರಿಂದ 20 ರೂ. ದರವಿತ್ತು. 2024ರಲ್ಲಿ 30ರಿಂದ 35ರೂ. ದರವಿತ್ತು. 2025ರ ಆರಂಭದಲ್ಲಿಯೇ ಕಾಯಿಯ ಬೆಲೆ 60ರಿಂದ 65 ರೂ.ಗೆ ಏರಿಕೆಯಾಗಿತ್ತು. ಒಂದೇ ವರ್ಷದಲ್ಲಿ ಬೆಲೆ ದ್ವಿಗುಣಗೊಂಡಿದ್ದು, ಸದ್ಯ ಕೆಜಿಗೆ 75ರಿಂದ 80ರೂ.ಗೆ ಏರಿದೆ.

ಹೋಟೆಲ್​ನಲ್ಲೂ ದರ ಏರಿಕೆ

ಸಾಂಬಾರ್​ ಹಾಗೂ ಚಟ್ನಿ ತಯಾರಿಕೆಗೆ ಹೆಚ್ಚಿನ ಪ್ರಮಾಣದಲ್ಲಿ ಕಾಯಿ ಬಳಸುವುದರಿಂದ ಹೋಟೆಲ್​ಗಳಲ್ಲೂ ಸಹ ತಿಂಡಿ-ಊಟದ ದರ ತುಸು ಏರಿದೆ. ಹೋಟೆಲ್​ನವರು ಈ ಮೊದಲು ಪ್ರತಿ ತಿಂಗಳು ಕಾಯಿ ಖರೀದಿಗೆ 5 ಸಾವಿರ ರೂ. ವ್ಯಯಿಸುತ್ತಿದ್ದರೆ ಅದೀಗ 10 ಸಾವಿರ ರೂ.ಗೆ ಏರಿದೆ. ಹೀಗಾಗಿ ಎಲ್ಲ ಬಗೆಯ ತಿಂಡಿ ಪ್ಲೇಟ್​ಗಳಿಗೆ 5ರಿಂದ 10 ರೂ. ಹಾಗೂ ಊಟಕ್ಕೆ 10ರಿಂದ 20ರೂ. ಏರಿಸಲಾಗಿದೆ.

ಗ್ರಾಹಕರ ಪರದಾಟ

ತೆಂಗಿನೆಣ್ಣೆಯ ದರವೂ ಗಗನಕ್ಕೇರುತ್ತಿದೆ. ಲೀಟರ್​ಗೆ 180ರಿಂದ 200 ರೂ.ಗೆ ಲಭಿಸುತ್ತಿದ್ದ ಎಣ್ಣೆ, 340ರಿಂದ 360ರೂ.ಗೆ ಏರಿದೆ. ಮನೆಯಲ್ಲಿ ಅಡುಗೆ ಮಾಡಲು ತೆಂಗು ಹಾಗೂ ತೆಂಗಿನೆಣ್ಣೆ ಅತ್ಯಗತ್ಯವಾಗಿದ್ದು, ಗ್ರಾಹಕರ ಜೇಬಿಗೆ ದೊಡ್ಡ ಕತ್ತರಿ ಬಿದ್ದಿದೆ. ಆರ್ಥಿಕ ಹೊರೆಯಿಂದಾಗಿ ಗ್ರಾಹಕರು ಪರದಾಡುವಂತಾಗಿದೆ.

ಬೆಲೆ ಏರಿಕೆಗೇನು ಕಾರಣ?

ದೇಶದಲ್ಲಿ ಅತಿಹೆಚ್ಚು ತೆಂಗು ಬೆಳೆಯುವ ಕೇರಳ ಹಾಗೂ ತಮಿಳುನಾಡಿನಲ್ಲಿ ಇಳುವರಿ ಕುಸಿತಗೊಂಡಿದೆ. ಮಂಡ್ಯ, ಕರಾವಳಿ ಭಾಗದಲ್ಲೂ ಈ ಮೊದಲಿನಂತೆ ಇಳುವರಿ ಬರುತ್ತಿಲ್ಲ. ಇದಕ್ಕೆ ನಿಖರ ಕಾರಣ ತಿಳಿದಿಲ್ಲವಾದರೂ ಜಾಗತಿಕ ತಾಪಮಾನದ ಪ್ರಭಾವ ಇದ್ದಿರಬಹುದು ಎನ್ನಲಾಗುತ್ತಿದೆ. ತೆಂಗಿನಕಾಯಿ ಹೂವು ಬಿಡುವ ಸಂದರ್ಭದಲ್ಲಿ ಅಕಾಲಿಕ ಮಳೆಯಿಂದಾಗಿ ಅವು ಉದುರಿ ಕಾಯಿ ಬಿಡುವ ಸಂಖ್ಯೆ ಕಡಿಮೆಯಾಗುತ್ತಿದೆ. ಸೆಕೆಯ ಪ್ರಮಾಣ ಹೆಚ್ಚಾಗುತ್ತಿದ್ದು ಎಳನೀರಿಗೆ ಬೇಡಿಕೆ ಇದೆ. ಮಾರುಕಟ್ಟೆಯಲ್ಲಿ ಒಂದು ಎಳನೀರಿಗೆ 45ರಿಂದ 60ರೂ. ದರವಿದ್ದು, ಹೆಚ್ಚಿನ ಲಾಭವೂ ಸಿಗುವುದರಿಂದ ಬೆಳೆಗಾರರು ತೆಂಗಿನಕಾಯಿಯ ಬದಲು ಎಳನೀರು ಮಾರಾಟ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಲಭಿಸುವ ತೆಂಗಿನಕಾಯಿಗಳು ಅರಸಿಕೆರೆ, ತಿಪಟೂರು ಭಾಗಗಳಲ್ಲಿರುವ ಕಾಯಿ ಫ್ಯಾಕ್ಟರಿಗೆ ರವಾನೆಯಾಗುತ್ತಿದೆ. ಅದನ್ನು ಡ್ರೈ ಪೌಡರ್​ ಮಾಡಿ, ಹೆಚ್ಚಿನ ದರಕ್ಕೆ ಉತ್ತರ ಭಾರತದ ಪ್ರದೇಶಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಬೇಡಿಕೆಯಷ್ಟು ತೆಂಗು ಲಭಿಸದ್ದರಿಂದ ದರ ಏರುತ್ತಲಿದೆ.
ತೆಂಗಿನ ಬೆಳೆ ಬಹಳ ಲಾಭದಾಯಕವಾಗಿತ್ತು. ಆದರೆ, ಬೆಳೆಗಾಗಿ ಮಾಡುವ ಖರ್ಚು, ಕೆಲಸಗಾರರ ಮಜೂರಿ, ಗೊಬ್ಬರ ದರ ಏರಿಕೆಯಿಂದಾಗಿ ಇತ್ತೀಚೆಗೆ ಬೆಳೆಗಾರು ತೆಂಗು ಬೆಳೆಯಲು ಮುಂದಾಗುತ್ತಿಲ್ಲ. ಕಾಯಿ ಬೆಳೆಯುವ ಅವಧಿಯೊಳಗೆ 2 ಬಾರಿ ಎಳನೀರು ತೆಗೆಯುತ್ತಿದ್ದಾರೆ. ಅದರಿಂದ ತೆಂಗಿನಕಾಯಿ ಅಲಭ್ಯತೆಯಿಂದ ದರ ಏರುತ್ತಿದೆ. ಅಕ್ಟೋಬರ್​ವರೆಗೂ ದರ ಇಳಿಯುವ ಲಕ್ಷಣವಿಲ್ಲ. | ಯೋಗೀಶ ಭಕ್ತ. ತೆಂಗಿನಕಾಯಿ, ತೆಂಗಿನೆಣ್ಣೆ ಡೀಲರ್​, ಉಡುಪಿ ಎರಡು ತಿಂಗಳಿಂದ ಮದುವೆ, ಉಪನಯನ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳ ಭರಾಟಯಿಂದ ತೆಂಗಿನಕಾಯಿ ಬೇಡಿಕೆ ಹೆಚ್ಚಿದೆ. ನಾಲ್ಕು ತಿಂಗಳಿನಿಂದ ಕೆಜಿಗೆ 70ರೂ.ಗಿಂತ ಅಧಿಕ ದರವಿದೆ. ಅಂಗಡಿಗೆ ಬರುವ ಮಧ್ಯಮ ವರ್ಗದ ಗ್ರಾಹಕರು ಕಾಯಿಯ ದರ ಕೇಳಿದೊಡನೆ 'ಅಯ್ಯೋ' ಎಂದು ಉದ್ಗರಿಸುತ್ತಾರೆ. ಅಗತ್ಯಕ್ಕೆ ತಕ್ಕಷ್ಟು ಮಾತ್ರ ಖರೀದಿಸುತ್ತಿದ್ದಾರೆ. | ರಮೇಶ ಪೂಜಾರಿ. ಇಂದ್ರಾಣಿ ವೆಜಿಟೇಬಲ್ಸ್​ ಆ್ಯಂಡ್​ ಫ್ರುಟ್ಸ್​ ಶಾಪ್​, ಉಡುಪಿ