ಪುತ್ತೂರು: ಕೊಬ್ಬರಿ, ತೆಂಗಿನಕಾಯಿಗೆ ಉತ್ತಮ ದರ ಸಿಗುವ ನಿರೀಕ್ಷೆ ಇದ್ದು, ದೀಪಾವಳಿ ಬಳಿಕ ಬೆಲೆ ಇನ್ನೂ ಹೆಚ್ಚಾಗಲಿದೆ. ತೆಂಗಿನಕಾಯಿ ಕೆ.ಜಿ.ಗೆ ೬೦ರಿಂದ ೭೦ ರೂ.ಗೆ ಏರಲಿದ್ದು, ಬೆಳೆಗಾರರು ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಬೆಲೆ ಪಡೆಯಲಿದ್ದಾರೆ ಎಂದು ದ.ಕ. ತೆಂಗು ರೈತ ಉತ್ಪಾದಕರ ಸಂಸ್ಥೆ ಅಧ್ಯಕ್ಷ ಕುಸುಮಾಧರ ಎಸ್.ಕೆ. ಹೇಳಿದ್ದಾರೆ.
ಹವಾಮಾನ ವೈಪರೀತ್ಯದಿಂದ ತೆಂಗು ಇಳುವರಿಗೆ ದೊಡ್ಡ ಪೆಟ್ಟು ಬಿದ್ದಿದೆ. ಹೀಗಾಗಿ ಬೆಳೆಯೂ ಕಡಿಮೆಯಾಗಿದ್ದು ಇದರ ಪರಿಣಾಮ ಖಚಿತವಾಗಿ ಬೆಲೆ ಹೆಚ್ಚಳಕ್ಕೆ ಕಾರಣವಾಗಲಿದೆ. ಈಗಾಗಲೇ ಎಳನೀರಿಗೆ ೬೦ ರೂ. ಆಗಿದ್ದು, ಬೆಳೆಗಾರರಿಂದ ೪೦-೫೦ ರೂ.ಗೆ ಖರೀದಿಯಾಗುತ್ತಿದೆ. ಇದರಿಂದಾಗಿ ಎಳನೀರನ್ನೂ ರೈತರು ಮಾರಾಟ ಮಾಡುತ್ತಿದ್ದಾರೆ. ಎಳನೀರಿಗೆ ದರ ಏರಿಕೆಯಾಗುತ್ತಿರುವುದು ಮತ್ತು ಎಳನೀರು ಮಾರಾಟಕ್ಕೆ ರೈತರು ಒಲವು ತೋರುತ್ತಿರುವುದು ಮಾರುಕಟ್ಟೆ ದೃಷ್ಟಿಯಿಂದ ಉತ್ತಮ ಲಕ್ಷಣ. ಇದು ತೆಂಗು ಕೃಷಿಯಲ್ಲಿ ಆಗಿರುವ ಉತ್ತಮ ಬೆಳವಣಿಗೆ. ಇದೆಲ್ಲದರ ಪರಿಣಾಮ ಕೃಷಿಕರ ಪಾಲಿಗೆ ಲಾಭದಾಯಕವಾಗಲಿದೆ. ಇದರಿಂದ ತೆಂಗು ಮತ್ತು ಕೊಬ್ಬರಿಗೆ ಬೆಲೆ ಹೆಚ್ಚುವುದು ಖಚಿತ ಎಂದಿದ್ದಾರೆ.
ಈಗಲೇ ಸಗಟು ಮಾರುಕಟ್ಟೆಯಲ್ಲಿ ೫೫-೬೦ರೂ. ತೆಂಗಿನಕಾಯಿ ದರ ಇದೆ. ತೆಂಗು ಉತ್ಪಾದಕ ಸಂಸ್ಥೆ ಬೆಳೆಗಾರರಿಂದ ೪೦-೪೫ ರೂ.ಗೆ ತೆಂಗಿನಕಾಯಿ ಖರೀದಿ ಮಾಡುತ್ತಿದೆ. ಈ ದರ ದೀಪಾವಳಿ ಬಳಿಕ ಹೆಚ್ಚಲಿದೆ. ಹೀಗಾಗಿ ತೆಂಗು ಬೆಳೆಗಾರರು ದುಡುಕದೆ ಉತ್ತಮ ದರ ಬರುವವರೆಗೆ ತಾಳ್ಮೆ ವಹಿಸಬೇಕು. ತೆಂಗು ದರ ಏರಿಕೆಯಾದರೆ ಕೃಷಿಕರ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.