- ಫ್ಯಾರಾಫಿನ್ ಮಿಶ್ರಣ ಅವ್ಯಾಹತ ಆರೋಪ
- ಆತಂಕದಲ್ಲಿ ತೆಂಗು ಬೆಳೆಗಾರ
ಪುತ್ತೂರು: ತೆಂಗಿನಕಾಯಿ ಧಾರಣೆಯಲ್ಲಿ ತೀವ್ರ ಇಳಿಕೆಯಾಗಿದ್ದರೂ, ತೆಂಗಿನ ಎಣ್ಣೆ ದರ ಇಳಿಕೆಯಾಗಿಲ್ಲ. ಹೊರರಾಜ್ಯದ ಗಡಿ ಪ್ರದೇಶದಲ್ಲಿ ಶುದ್ಧ ಎಣ್ಣೆ ದರ ೨೦೦ ರೂ. ಆದರೂ, ಜಿಲ್ಲೆಯ ಕೆಲವು ಭಾಗದಲ್ಲಿ ಇನ್ನೂ ೪೦೦ ರೂ. ಇದೆ. ಇದರ ನಡುವೆ ಪುತ್ತೂರಿನಲ್ಲಿ ಎಣ್ಣೆಗೆ ಅಪಾಯಕಾರಿ ಫ್ಯಾರಾಫಿನ್ ಮಿಶ್ರಣದ ಕಲಬೆರಕೆ ಅವ್ಯಾಹತವಾಗಿ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಕರಾವಳಿಯಲ್ಲಿ ತೆಂಗಿನಕಾಯಿಗೆ ಹಾಗೂ ಎಳನೀರಿಗೆ ಬೇಡಿಕೆ ಹೆಚ್ಚಿದ್ದು, ಕಳೆದ ಕೆಲವು ವರ್ಷಗಳಲ್ಲಿ ಸಾಕಷ್ಟು ಬೆಳೆ ಇಲ್ಲದೆ ಜನರಿಗೆ ತೆಂಗಿನಕಾಯಿ ಪೂರೈಸಲಾಗದೆ ಕೊರತೆಯಾಗಿತ್ತು. ಕಾಯಿ ಕೊರತೆಯಿಂದ ಕೊಬ್ಬರಿಯೂ ಕಡಿಮೆಯಾಗಿ ತೆಂಗಿನ ಎಣ್ಣೆ ದರ ಗಗನಕ್ಕೇರಿತ್ತು. ಕಳೆದ ವರ್ಷ ತೆಂಗಿನಕಾಯಿ ಪ್ರತಿ ಕೆಜಿಗೆ ೮೦ರಿಂದ ೧೦೦ ರೂ. ತಲುಪಿದ್ದು ಬಳಿಕ ೬೦ರಿಂದ ೬೫ ರೂ.ಗೆ ಸ್ಥಿರವಾಗಿತ್ತು. ಪ್ರಸ್ತುತ ಮಾರುಕಟ್ಟೆಯಲ್ಲಿ ೪೦ರಿಂದ ೪೭ ರೂ.ನಲ್ಲಿ ತೆಂಗಿನಕಾಯಿ ಲಭಿಸುತ್ತಿದೆ.
ತೆಂಗಿನ ಎಣ್ಣೆ ಗಗನಕ್ಕೇರಿದಾಗ ಮಾರುಕಟ್ಟೆಯಲ್ಲಿ ಬ್ರ್ಯಾಂಡಿಂಗ್ ಹೆಸರಿನಲ್ಲಿ ಪೈಪೋಟಿ ಪ್ರಾರಂಭವಾಗಿತ್ತು. ಈ ಸಂದರ್ಭ ಕೆಲವು ಬ್ರ್ಯಾಂಡ್‌ಗಳು ಜನರ ಜೀವದ ಜತೆ ಆಟವಾಡಿಯಾದರೂ ಲಾಭ ಗಳಿಸಬೇಕೆಂಬ ಉದ್ದೇಶಕ್ಕೆ ಮುಂದಾಗಿದ್ದವು. ರಾತ್ರಿ ಸಮಯ ಫ್ಯಾರಾಫಿನ್ ಕಲಬೆರಕೆ ಎಣ್ಣೆಯ ಲೋಡ್ ತರಿಸಿ ದಾಸ್ತಾನು ಇರಿಸಿಕೊಂಡಿದ್ದಾರೆಂಬುದು ಪ್ರತ್ಯಕ್ಷ ದರ್ಶಿಗಳ ಮಾಹಿತಿ.
ಆಹಾರ ಸುರಕ್ಷಾ ಇಲಾಖೆಯ ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ಫ್ಯಾರಾಫಿನ್ ಮಿಶ್ರಿತ ಅಪಾಯಕಾರಿ ತೆಂಗಿನ ಎಣ್ಣೆ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿದೆ. ಕೆಲವು ಬ್ರ್ಯಾಂಡ್‌ಗಳು ೫೦ ಲಕ್ಷ ರೂ.ನಷ್ಟು ಡೀಲ್ ನಡೆಸಿ ದಾಳಿಗಳಾಗುವುದನ್ನು ತಪ್ಪಿಸಿಕೊಂಡಿವೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೂ ಅಽಕಾರಿ ವರ್ಗ ಅಗತ್ಯ ಕ್ರಮಕ್ಕೆ ಮುಂದಾಗದೆ, ದಂಧೆಕೋರರಿಗೆ ವರದಾನವಾಗಿದೆ.
ಗಡಿ ದಾಟಿದರೆ ಬೆಲೆ ಇಲ್ಲ!
ಕೇರಳ ಕರಾವಳಿ ತೆಂಗಿನ ಬೆಳೆಗೆ ಹೆಸರುವಾಸಿಯಾಗಿದ್ದು, ಇಲ್ಲಿ ಈ ವರ್ಷ ಉತ್ತಮ ಬೆಳೆಯಾಗಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಕರ್ನಾಟಕ ಕೇರಳ ಗಡಿಭಾಗದಲ್ಲೇ ದರ ವ್ಯತ್ಯಾಸ ಗಮನಿಸಬಹುದಾಗಿದೆ. ತೆಂಗಿನ ಎಣ್ಣೆ ಧಾರಣೆಯಲ್ಲಿ ಕೇರಳದಲ್ಲಿ ತೀವ್ರ ಇಳಿಕೆಯಾಗಿದೆ. ಸದ್ಯ ೧೮೦ ರೂ.ನಿಂದ ೨೩೦ ರೂ.ನಲ್ಲಿ ಗುಣಮಟ್ಟದ ತೆಂಗಿನ ಎಣ್ಣೆ ಲಭಿಸುತ್ತಿದೆ. ಇದರ ಜತೆಗೆ ಮಂಗಳೂರು ನಗರ ಭಾಗದಲ್ಲೂ ದರ ಇಳಿಕೆಯಾಗಿದೆ ಎಂಬ ಮಾಹಿತಿಯಿದೆ.
ಬ್ರ್ಯಾಂಡಿಂಗ್ ಹೆಸರಿನಲ್ಲಿ ದರ ಏರಿಕೆ
ಕಳೆದ ವರ್ಷ ತೆಂಗಿನ ಎಣ್ಣೆ ಲೀಟರ್ ಒಂದಕ್ಕೆ ಸುಮಾರು ೫೫೦ ರೂ. ತಲುಪಿದ್ದು, ೪೫೦ ರೂ.ಗೆ ಸ್ಥಿರವಾಗಿತ್ತು. ತೆಂಗಿನ ಎಣ್ಣೆಯ ಟಾಪ್ ಬ್ರ್ಯಾಂಡ್ ೩೫೦ ರೂ.ವರೆಗೆ ದರ ನಿಗದಿ ಮಾಡಿದರೆ, ಲಾಸ್ಟ್ ಬ್ರ್ಯಾಂಡ್ ೩೦೦ ರೂ.ಗೆ ಲಭಿಸುತ್ತಿದೆ. ಬ್ರ್ಯಾಂಡಿಂಗ್ ಹೆಸರಿನಲ್ಲಿ ಗ್ರಾಹಕರನ್ನು ದೋಚುವ ಕಾರ್ಯ ನಡೆಯುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಲಾಭ ಗಳಿಸುವ ಆಸೆಯಿದ್ದವರಿಗೆ ನಷ್ಟ
ತೆಂಗಿನ ಬೆಲೆ ಗಮನಿಸಿ ಕೆಲವು ಕೃಷಿಕರು ತೆಂಗು ಗಿಡ ಹಾಕಿದ್ದರೆ, ಇನ್ನು ಕೆಲವು ಕೃಷಿಕರು ಕಡಿಮೆ ದರದಲ್ಲಿ ತೆಂಗಿನಕಾಯಿ ಖರೀದಿಸಿ ದಾಸ್ತಾನು ಇಟ್ಟು ಕೊಬ್ಬರಿ ಮಾಡಿ ಲಾಭ ಗಳಿಸುವ ಯೋಜನೆ ಹಾಕಿದ್ದರು. ಈಗ ತೆಂಗಿನ ಬೆಲೆ ಅರ್ಧಕ್ಕೆ ಕುಸಿತವಾಗಿರುವುದು ತೆಂಗು ಬೆಳೆಗಾರರನ್ನು ಆತಂಕಕ್ಕೆ ಕಾರಣವಾಗಿಸಿದೆ.
"
ದರ ಸಮರ ಮಾಡದೆ, ಗ್ರಾಹಕರಿಗೆ ಶುದ್ಧ ಎಣ್ಣೆ ಒದಗಿಸುವ ಪ್ರಯತ್ನ ಮಾಡಬೇಕು. ಕೆಲವು ಬ್ರ್ಯಾಂಡೆಂಡ್ ತೆಂಗಿನ ಎಣ್ಣೆಯ ಪರಿಮಳದಲ್ಲಿ ವ್ಯತ್ಯಾಸವಿರುತ್ತದೆ. ನಿರಂತರ ಬಳಕೆಯಿಂದ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದಿದೆ. ಕಲಬೆರಕೆ ಮಾಡುವ ಗಾಣಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು.
— | ಶಿವಶಂಕರ, ಪೇಟೆ ತೆಂಗಿನ ಎಣ್ಣೆ ಬಳಕೆದಾರರು