ತುಮಕೂರು: ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ ಕನಿಷ್ಠ 10000 ರೂ.ಗೆ ಮಾರಾಟವಾಗಿದ್ದು, ತೆಂಗು ಬೆಳೆಗಾರರಲ್ಲಿ ಭವಿಷ್ಯದ ಚಿಂತೆ ಶುರುವಾಗಿದೆ. 14 ಸಾವಿರ ರೂ.ಆಸುಪಾಸಿನಲ್ಲಿದ್ದ ಬೆಲೆ ದಿಢೀರ್ ಕುಸಿತ ವಾಗಿದ್ದು, ಶನಿವಾರದ ಹರಾಜಿನಲ್ಲಿ ಗರಿಷ್ಠ 10,700 ರೂ. ಕನಿಷ್ಠ 10,000 ರೂ.ಗೆ ಮಾರಾಟ ವಾಗಿದೆ. ಒಟ್ಟು ಆವಕ 3341.53 ಕ್ವಿಂಟಾಲ್, 7,771 ಚೀಲ ಬಂದಿದೆ.
ಬೇಸಿಗೆ ಆರಂಭ ವಾಗುತ್ತಿರುವ ಹಿನ್ನೆಲೆಯಲ್ಲಿ ಕೊಬ್ಬರಿ ಸಂರಕ್ಷಣೆ ಕಷ್ಟವಾಗಲಿದ್ದು ಬೆಲೆ ಮತ್ತಷ್ಟು ಕುಸಿಯುವ ಆತಂಕ ಎದುರಾಗಿದೆ. ಸರ್ಕಾರ 9,920 ರೂ. ಬೆಂಬಲ ಬೆಲೆ ನಿಗದಿ ಮಾಡಿದೆ, ಆದರೆ ಇದನ್ನು ಮುಟ್ಟದಂತೆ ವ್ಯಾಪಾರಿಗಳು ನೆಡ್ ಆರಂಭವಾಗುವುದನ್ನೂ ತಡೆಯುವ ತಂತ್ರ ನಡೆಸಿದ್ದಾರೆ. ತಿಪಟೂರು ಉಂಡೆ ಕೊಬ್ಬರಿಗೆ ಕೇಂದ್ರ ಸರ್ಕಾರದ ಬೆಂಬಲ ಬೆಲೆ 9,920ರೂ. ಇದೆ. ಇದಕ್ಕಿಂತ ಬೆಲೆ ಕಡಿಮೆಯಾದರೆ ಮಾತ್ರ ನೆಡ್ ಆರಂಭವಾಗಲಿದೆ. ಆದರೆ, ಕನಿಷ್ಠ 15,000 ರೂ. ಬೆಂಬಲ ಬೆಲೆ ನೀಡಬೇಕು ಎಂಬುದು ರೈತರ ಆಗ್ರಹವಾಗಿದೆ.
ಉತ್ಪಾದನಾ ವೆಚ್ಚವೇ -11529!:ಕೃಷಿ ಬೆಲೆ ಆಯೋಗ ವರದಿಯಂತೆ ಕ್ವಿಂಟಾಲ್ ಕೊಬ್ಬರಿ ಉತ್ಪಾದನಾ ವೆಚ್ಚ 11,529 ರೂ. ಆಗುತ್ತದೆ. ಆದರೆ, ಪ್ರಸ್ತುತ 10 ಸಾವಿರ ರೂ. ಸಿಕ್ಕರೆ ರೈತನಿಗೆ ಗಂಟೇ ಇಲ್ಲದಂತಾಗುತ್ತದೆ. ವರ್ಷಪೂರ್ತಿ ತೆಂಗಿನ ಕಾಯಿ ಶೇಖರಿಸಿಟ್ಟು ಕಾಪಾಡಿದ ಕೊಬ್ಬರಿಯನ್ನು ನಷ್ಟಕ್ಕೆ ಮಾರಾಟ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಅತಿಯಾದ ಆವಕವೇ ಬೆಲೆ ಕುಸಿತಕ್ಕೆ ಕಾರಣ!: ಇಲ್ಲಿನ ಕೊಬ್ಬರಿಗೆ ಹೈದರಾಬಾದ್, ಮುಂಬೈ ಹಾಗೂ ಉತ್ತರ ಪ್ರದೇಶ, ದೆಹಲಿ ಸೇರಿ ಉತ್ತರ ಭಾರತವೇ ಪ್ರಮುಖ ಮಾರುಕಟ್ಟೆ. ಈ ಪ್ರದೇಶಗಳಲ್ಲಿ ಚಳಿಗಾಲದಲ್ಲಿ ಮಾತ್ರ ಹೆಚ್ಚು ಬಳಸುತ್ತಾರೆ, ಬಿಸಿಲು ಆರಂಭವಾದರೆ ಕೊಬ್ಬರಿಗೆ ಬೇಡಿಕೆ ಕಡಿಮೆ. ಇದೇ ಸಮಯದಲ್ಲಿ ಜಿಲ್ಲೆಯಲ್ಲಿ ಅತಿಯಾದ ಪೂರೈಕೆ ಆರಂಭವಾಗಿರುವುದು ಬೆಲೆ ಕುಸಿತಕ್ಕೆ ಕಾರಣವಾಗಿದೆ.
ಎಳನೀರಿಗೆ ಮಾರುಕಟ್ಟೆ ಸೃಷ್ಠಿ ಅನಿವಾರ್ಯ!: ರೈತರು ಕೊಬ್ಬರಿ ತಯಾರಿಸುತ್ತಿರುವುದು ಮಾರುಕಟ್ಟೆಯಲ್ಲಿ ಪೂರೈಕೆ ಮಿತಿಮೀರಲು ಕಾರಣವಾಗಿದೆ. ಎಳನೀರಿಗೆ ಎಲ್ಲೆಡೆ ಮಾರುಕಟ್ಟೆ ಸೃಷ್ಠಿಸಬೇಕಿದೆ, ಕೊಬ್ಬರಿಗೆ ಬದಲಾಗಿ ನೀರಾ, ಎಳನೀರು ಬಳಸಿಕೊಂಡು ಚಾಕೋಲೇಟ್, ಐಸ್‌ಕ್ರೀಮ್ ಮತ್ತಿತರರ ಸಿಹಿತಿಂಡಿ ತಯಾರಿಸುವ ಸಂಶೋಧನೆಗಳು ನಡೆದರಷ್ಟೇ ತೆಂಗು ಬೆಳೆಗಾರರ ಉಳಿವು. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು, ವಿಜ್ಞಾನ ಕೇಂದ್ರಗಳು ಹಾಗೂ ಇವನ್ನು ಪೋಷಿಸುತ್ತಿರುವ ಸರ್ಕಾರ ಚಿಂತಿಸಬೇಕಿದೆ.
ಕೋಲ್ಡ್ ಸ್ಟೋರೇಜ್ ಪರಿಹಾರ!:ಬೆಲೆ ಕುಸಿತದ ಸಂದರ್ಭದಲ್ಲಿ ಕೊಬ್ಬರಿ ಸಂರಕ್ಷಿಸಿಟ್ಟು ಬೆಲೆ ಹೆಚ್ಚಾದಾಗ ಮಾರುವ ವ್ಯವಸ್ಥೆಯಿಂದ ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯವಿದೆ. ತಿಪಟೂರು ಭಾಗದಲ್ಲಿ ಕೊಬ್ಬರಿ ಶೇಖರಿಸಿಡಲು ಶೀತಲ ಕೇಂದ್ರ ಸ್ಥಾಪಿಸಬೇಕು ಎಂಬ ಅನ್ನದಾತನ ಬಹುದಿನದ ಬೇಡಿಕೆಗೆ ಇನ್ನೂ ಮನ್ನಣೆ ಸಿಕ್ಕಿಲ್ಲ.
ದೇಶದ ಆರ್ಥಿಕ ಸ್ಥಿತಿ ಕೊಬ್ಬರಿ ಬೆಲೆ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ, ವರ್ಷದ ಕನಿಷ್ಠ ದರ ದಾಖಲಾಗಿದ್ದು, 10 ಸಾವಿರಕ್ಕಿಂತ ಕೆಳಗಿಳಿಯುವ ಆತಂಕವಿದೆ. ಬೇಡಿಕೆ ಕಡಿಮೆಯಾಗಿ ಉತ್ಪಾದನೆ ಹೆಚ್ಚಾಗಿರುವುದು ಭವಿಷ್ಯದಲ್ಲಿ ಕೊಬ್ಬರಿ ಬೆಳೆಗಾರರಿಗೆ ನಷ್ಟ ತರಲಿದೆ. ಶ್ರೀಕಾಂತ್ ಕೆಳಹಟ್ಟಿ ಕೊಬ್ಬರಿ ವರ್ತಕ, ತಿಪಟೂರು ಮಾರುಕಟ್ಟೆ