ಮಂಡ್ಯ: ಕಿವುಡುತನದಿಂದ ಬಳಲುವ ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಯೋಜನೆ ಅತ್ಯಂತ ಉಪಯುಕ್ತವಾಗಿದ್ದು, ಇದರಿಂದ ಶ್ರವಣದೋಷ ಮುಕ್ತ ಮಾಡಲು ಸಾಧ್ಯವಾಗಲಿದೆ ಎಂದು ಇಎನ್‌ಟಿ ತಜ್ಞ ಡಾ.ಶಂಕರ್ ಮಡಿಕೇರಿ ತಿಳಿಸಿದರು.
ಮಿಮ್ಸ್‌ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಶ್ರವಣದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮದಡಿ ಕರ್ನಾಟಕ ಸರ್ಕಾರ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ವತಿಯಿಂದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಕಾಕ್ಲಿಯರ್ ಇಂಪ್ಲಾಂಟ್ ಯೋಜನೆ ಪ್ರಾರಂಭಿಸಿದೆ. ಯೋಜನೆಯಡಿ ಆರು ವರ್ಷದೊಳಗಿನ ಹುಟ್ಟು ಮೂಕ ಮತ್ತು ಕಿವುಡ ಮಕ್ಕಳನ್ನು ಉಚಿತ ತಪಾಸಣಾ ಶಿಬಿರಗಳ ಮೂಲಕ ಗುರುತಿಸಲಾಗುವುದು. ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಶಸ್ತ್ರ ಚಿಕಿತ್ಸೆಗೆ ಹೊಂದಿಕೊಳ್ಳುವ ಅರ್ಹ ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಟ್‌ನ್ನು ಅಳವಡಿಸಲಾಗುತ್ತದೆ. ಇದಕ್ಕೆ ಸುಮಾರು 8 ರಿಂದ 10 ಲಕ್ಷ ರೂ ವೆಚ್ಚ ತಗುತ್ತಿದ್ದು, ರಾಜ್ಯ ಸರ್ಕಾರದಿಂದ ನೋಂದಾಯಿತ ಆಸ್ಪತ್ರೆಗಳಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ ಎಂದು ಹೇಳಿದರು.
ಶ್ರವಣದೋಷ ಇರುವಂತಹ ಮಕ್ಕಳಿಗೆ ಮಿಮ್ಸ್‌ನ ಇಎನ್‌ಟಿ ವಿಭಾಗದಲ್ಲಿ ಈಗಾಗಲೇ 15 ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಅಳವಡಿಕೆಯಲ್ಲಿ ಯಶಸ್ಸು ಕಂಡಿದೆ. ಶನಿವಾರ ಮತ್ತಿಬ್ಬರು ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಇದರೊಂದಿಗೆ ಇನ್ನೂ ನಾಲ್ಕು ಮಕ್ಕಳ ಶ್ರವಣ ದೋಷದ ಕುರಿತು ನಿಗಾ ವಹಿಸಲಾಗಿದೆ. ಅವರಿಗೆ ಅವಶ್ಯವಿದ್ದಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಜನ ವೈದ್ಯರಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡಲು ತರಬೇತಿ ನೀಡಲಾಗಿದೆ. ಮಿಮ್ಸ್‌ನಲ್ಲಿ ಡಾ.ಬಾಲಾಜಿ ತರಬೇತಿ ಪಡೆದಿದ್ದು, ಮುಂದಿನ ದಿನಗಳಲ್ಲಿ ಮಂಡ್ಯದಲೂ ಅವರು ಶಸ್ತ್ರ ಚಿಕಿತ್ಸೆ ನಡೆಸಲಿದ್ದಾರೆ ಎಂದು ಹೇಳಿದರು.
ಮಿಮ್ಸ್‌ನಲ್ಲಿ ಜನಿಸುವ ಮಕ್ಕಳ ಪ್ರತೀ ಮಕ್ಕಳಿಗೂ ಶ್ರವಣ ಸಾಧನದಿಂದ ಪರೀಕ್ಷೆ ನಡೆಸಿ ಒಂದು ವೇಳೆ ಶ್ರವಣದೋಷ ಇದ್ದಲ್ಲಿ ಪತ್ತೆ ಹಚ್ಚಲು ಕ್ರಮ ವಹಿಸಲಾಗುತ್ತಿದೆ. 6 ತಿಂಗಳ ಮಗುವಿನಿಂದ 6 ವರ್ಷದವರೆಗವಿಗೂ ಶಸ್ತ್ರ ಚಿಕಿತ್ಸೆ ಮಾಡಬಹುದಾಗಿದ್ದು, ಈ ಅವಧಿಯಲ್ಲೇ ಶ್ರವಣದೋಷವಿರುವ ಮಕ್ಕಳನ್ನು ಪತ್ತೆ ಹಚ್ಚಲಾಗುತ್ತದೆ. ಈಗಾಗಲೇ ಅಂಗನವಾಡಿ ಕಾರ್ಯಕರ್ತರಿಗೂ ಸ್ವಲ್ಪ ಮಟ್ಟಿಗೆ ತಿಳಿವಳಿಕೆ ನೀಡಲಾಗಿದೆ. ಜತೆಗೆ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ನುರಿತ ವೈದ್ಯರು ಸಹ ಇದನ್ನು ಪತ್ತೆ ಹಚ್ಚುವಂತೆ ತರಬೇತಿಗೊಳಿಸಿ ಸಜ್ಜುಗೊಳಿಸಲಾಗಿದೆ. ನಂತರ ಗುರುತಿಸಲ್ಪಟ್ಟ ಆಸ್ಪತ್ರೆಗಳಿಗೆ ಕರೆತಂದು ವಿವಿಧ ತಪಾಸಣೆ ನಡೆಸಲಾಗುತ್ತದೆ. ಜತೆಗೆ ಶ್ರವಣ ಸಾಧನವನ್ನೂ 6 ತಿಂಗಳ ಅಳವಡಿಸಿ ಪರೀಕ್ಷಿಸಲಾಗುತ್ತದೆ. ಅಂತಿಮವಾಗಿ ಶಸ್ತ್ರ ಚಿಕಿತ್ಸೆ ಅಗತವಿದ್ದಲ್ಲಿ ನಡೆಸಲಾಗುತ್ತದೆ ಎಂದು ವಿವರಿಸಿದರು.
ಮಿಮ್ಸ್ ನಿರ್ದೇಶಕ ಡಾ.ಬಿ.ಜೆ.ಮಹೇಂದ್ರ, ವೈದ್ಯಕೀಯ ಅಧೀಕ್ಷಕ ಡಾ.ಪಿ.ವಿ.ಶ್ರೀಧರ್, ಇಎನ್‌ಟಿ ವಿಭಾಗದ ಮುಖ್ಯಸ್ಥರಾದ ಡಾ. ಹನುಮಂತಪ್ರಸಾದ್, ಡಾ.ರವಿ, ಪ್ರಾಂಶುಪಾಲ ಡಾ.ತಮ್ಮಣ್ಣ, ಅನೆಸ್ತೇಷಿಯಾ ವಿಭಾಗದ ಮುಖ್ಯಸ್ಥ ಡಾ.ಶಿವಕುಮಾರ್, ಇಎನ್‌ಟಿ ತಜ್ಞ ಡಾ. ರಾಮಲಿಂಗೇಗೌಡ ಇತರರಿದ್ದರು.