- ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಚಾಂಪಿಯನ್‌ಷಿಪ್ 2ನೇ ದಿನವೂ ಯಶಸ್ವಿ
- ರಮೇಶ್ ಬುಡಿಹಾಳ್ 14.83 ಅಂಕಗಳನ್ನು ಗಳಿಸುವ ಮೂಲಕ ಅಗ್ರಸ್ಥಾನ ಪಡೆದರು
ಮಂಗಳೂರು: ತಣ್ಣೀರುಬಾವಿಯ ಬ್ಲೂ ಫ್ಲ್ಯಾಗ್ ಬೀಚ್‌ನಲ್ಲಿ ಎನ್‌ಎಫ್‌ಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಚಾಂಪಿಯನ್‌ಷಿಪ್ 2ನೇ ದಿನವೂ ಯಶಸ್ವಿಯಾಗಿ ನಡೆದಿದ್ದು, ದಿನದಾಟದಲ್ಲಿ ಐದು ವಿವಿಧ ವಿಭಾಗಗಳಲ್ಲಿ ಒಟ್ಟು ಆರು ಕ್ವಾರ್ಟರ್‌ಫೈನಲ್ ಹಾಗೂ ಆರು ಸೆಮಿಫೈನಲ್ ಪಂದ್ಯಗಳು ನಡೆದವು. ಫಲಿತಾಂಶ ಈ ಕೆಳಗಿನಂತಿದೆ.
ಪುರುಷರ ಓಪನ್ ವಿಭಾಗದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಒಟ್ಟು 24 ಸರ್ಫಿಂಗ್ ಪಟುಗಳು ಕ್ವಾರ್ಟರ್‌ಫೈನಲ್ ಪ್ರವೇಶಕ್ಕಾಗಿ ಆರು ಹೀಟ್ಸ್‌ಗಳಲ್ಲಿ ಸ್ಪರ್ಧಿಸಿದ್ದರು. ಈ ಸುತ್ತಿನಲ್ಲಿ ಕಿಶೋರ್ ಕುಮಾರ್ 14.17 ಅಂಕಗಳೊಂದಿಗೆ ಅರ್ಹತಾ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರೆ, ಅಜೀಶ್ ಅಲಿ (13.33) ಮತ್ತು ರಮೇಶ್ ಬುಡಿಹಾಳ್ (13) ನಂತರದ ಸ್ಥಾನ ಪಡೆದರು. ಇವರೊಂದಿಗೆ ಸಂಜಯ್ ಸೆಲ್ವಮಣಿ (11.27), ಶ್ರೀಕಾಂತ್ ಡಿ. (11), ಶಿವರಾಜ್ ಬಾಬು (10.23), ತಯಿನ್ ಅರುಣ್ (9.80), ನವೀನ್‌ಕುಮಾರ್ ಆರ್. (8.10), ಹರೀಶ್ ಎಂ. (7.83), ಸೋಮ ಶೇಖಿ (7.77), ರುಬನ್ ವಿ. (7.57) ಮತ್ತು ಸಂಜಯ್‌ಕುಮಾರ್ ಎಸ್. (7.20) ಅಂಕ ಪಡೆದು ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಪುರುಷರ ಓಪನ್ ಕ್ವಾರ್ಟರ್ ಫೈನಲ್
ಪುರುಷರ ಓಪನ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೇರಳದ ರಮೇಶ್ ಬುಡಿಹಾಳ್ 14.83 ಅಂಕಗಳನ್ನು ಗಳಿಸುವ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರು. ಇವರ ಬೆನ್ನಲ್ಲೇ ಶ್ರೀಕಾಂತ್ ಡಿ. 13 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದರು. ಉಳಿದಂತೆ ಕಿಶೋರ್ ಕುಮಾರ್ (11.80), ಅಜೀಶ್ ಅಲಿ (9.93), ಸಂಜಯ್ ಸೆಲ್ವಮಣಿ (9.57) ಮತ್ತು ಶಿವರಾಜ್ ಬಾಬು (8.76) ಅಂಕ ಗಳಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟರು.
18 ವರ್ಷದೊಳಗಿನ ಬಾಲಕರ ವಿಭಾಗ
ದಿನದ ಎರಡನೇ ವಿಭಾಗವಾಗಿ ಸರ್ಫಿಂಗ್ ಜೂನಿಯರ್ಸ್ ಅಂಡರ್-18 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಬಾಲಕರ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆದವು. ಟೂರ್ನಿಯ ಅಂತಿಮ ದಿನ ನಡೆಯಲಿರುವ ಸೆಮಿಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು 12 ಯುವ ಸರ್ಫರ್‌ಗಳು ಮೂರು ಕ್ವಾರ್ಟರ್ ಫೈನಲ್ ಹೀಟ್ಸ್‌ಗಳಲ್ಲಿ ಸೆಣಸಾಡಿದರು. ಇವರಲ್ಲಿ ಹರೀಶ್ ಪಿ. (13.60), ತಯಿನ್ ಅರುಣ್ (12.67), ಸೋಮ ಶೇಖಿ (12.00) ಮತ್ತು ಯೋಗೇಶ್ ಎ. (11.34) ಅಗ್ರ ಪ್ರದರ್ಶನಕಾರರಾಗಿ ಹೊರಹೊಮ್ಮಿ ಸೆಮಿಫೈನಲ್ ತಲುಪಿದರು. ಇವರೊಂದಿಗೆ ಪ್ರಹ್ಲಾದ್ ಶ್ರೀರಾಮ್ (9.40) ಮತ್ತು ಪ್ರದೀಪ್ ಪೂಜಾರ್ (6.56) ಕೂಡ ತಮ್ಮ ಹೀಟ್ಸ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಮುಂದಿನ ಹಂತಕ್ಕೆ ಅರ್ಹತೆ ಪಡೆದರು.
18 ವರ್ಷದೊಳಗಿನ ಬಾಲಕಿಯರ ವಿಭಾಗ
ಸರ್ಫಿಂಗ್ ಜೂನಿಯರ್ಸ್ ಅಂಡರ್-18 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ಸೆಮಿಫೈನಲ್ಸ್‌ನಲ್ಲಿ ಕಮಾಲಿ ಮೂರ್ತಿ ಅದ್ಭುತ ಪ್ರದರ್ಶನ ನೀಡಿ, 12.44 ಗರಿಷ್ಠ ಅಂಕ ಪಡೆದು ಫೈನಲ್‌ಗೆ ಲಗ್ಗೆ ಇಟ್ಟರು. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಕಮಾಲಿ ಅವರೊಂದಿಗೆ ಆದ್ಯಾ ಸಿಂಗ್ (7.50), ಸಾನ್ವಿ ಹೆಗಡೆ (5.30) ಮತ್ತು ಧಮಯಂತಿ ಶ್ರೀರಾಮ್ (4.27) ಕೂಡ ಪ್ರಶಸ್ತಿಗಾಗಿ ಕಾದಾಡಲಿದ್ದಾರೆ.
ಗ್ರೋಮ್ಸ್ (ಅಂಡರ್ -14) ವಿಭಾಗ
ಅತ್ಯಂತ ಕಿರಿಯ ಸರ್ಫಿಂಗ್ ಪ್ರತಿಭೆಗಳು ಭಾಗವಹಿಸುವ "ಗ್ರೋಮ್ಸ್ ಡಿವಿಷನ್' ಎಂದೇ ಜನಪ್ರಿಯವಾಗಿರುವ ಜೂನಿಯರ್ಸ್ ಯು-14 ಬಾಲಕ ಮತ್ತು ಬಾಲಕಿಯರ ವಿಭಾಗದ ಸೆಮಿಫೈನಲ್ ಪಂದ್ಯಗಳೂ ನಡೆದವು. ಬಾಲಕರ ವಿಭಾಗದಲ್ಲಿ ಹರೀಶ್ ಪಿ. 14.40 ಅಂಕಗಳೊಂದಿಗೆ ಅರ್ಹತಾ ಸುತ್ತಿನಲ್ಲಿ ಮುನ್ನಡೆದರೆ, ಶೇಕ್ ದಾವೂದ್ ಎಸ್. (13), ಯೋಗೇಶ್ ಎ. (9.40) ಮತ್ತು ಪ್ರಹ್ಲಾದ್ ಶ್ರೀರಾಮ್ (7.27) ಫೈನಲ್ ತಲುಪಿದರು. ಇನ್ನು ಬಾಲಕಿಯರ ವಿಭಾಗದಲ್ಲಿ ಧಮಯಂತಿ ಶ್ರೀರಾಮ್ (9.50) ಮತ್ತು ಸಾನ್ವಿತಾ ಕುಂದರ್ (5.10) ಮೊದಲ ಎರಡು ಸ್ಥಾನಗಳನ್ನು ಪಡೆದರೆ, ಅರಬೋಲು ನೇತ್ರಾ (1.00) ಮತ್ತು ಗೌರಿ ಶ್ರೀಮುಷ್ಣಮ್ (0.50) ಕೂಡ ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಕಾಯ್ದುಕೊಂಡರು.