ಹುಬ್ಬಳ್ಳಿ : ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ಟೌನ್ ಹಾಗೂ ಇನರ್ ವಿಲ್ ಮಿಡ್ ಟೌನ್ ಸಹಯೋಗದಲ್ಲಿ ಇಲ್ಲಿಯ ಹೊಸ ಕೋರ್ಟ್ ಹಿಂಭಾಗದ ಕಲ್ಲೂರ ಲೇಔಟ್ ಮೈದಾನದಲ್ಲಿ ಮೇ 1 ರಿಂದ 3 ರ ವರೆಗೆ ಕರಾವಳಿ ಉತ್ಸವ ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡಟೌನ್ ಅಧ್ಯಕ್ಷ ದಿನೇಶ ಶೆಟ್ಟಿ, ಕಡಲ ಕರೆಯ ಬದಕು, ಬಣ್ಣ ಭಾವಗಳ ಸಮ್ಮಿಲನ, ವಸ್ತು ಪ್ರದರ್ಶನ, ಮಾರಾಟ ಮೇಳವೆ ಕರಾವಳಿ ಉತ್ಸವವಾಗಿದೆ. ಪ್ರಥಮ ಬಾರಿಗೆ ಉತ್ತರ ಕರ್ನಾಟಕದಲ್ಲಿ ಆಯೋಜಿಸಲಾಗಿದೆ ಎಂದರು.
ಮೇ 1 ರಂದು ಸಂಜೆ 5 ಗಂಟೆಗೆ ವಿಧಾನಸಭೆ ಸಭಾಪತಿ ಯು.ಟಿ. ಖಾದರ ಉತ್ಸವಕ್ಕೆ ಚಾಲನೆ ನೀಡುವರು. ಕೇಂದ್ರ ಸಚಿವ ಪ್ರಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಂಸದ ಜಗದೀಶ ಶೆಟ್ಟರ್, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಪ್ರದೀಪ ಶೆಟ್ಟರ್, ಮೇಯರ್ ರಾಮಪ್ಪ ಬಡಿಗೇರ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಭಾಗವಹಿಸುವರು ಎಂದು ತಿಳಿಸಿದರು.
ಕರಾವಳಿ ಉತ್ಸವದಲ್ಲಿ ಆಹಾರ, ಸಿದ್ದ ಉಡುಪು ಹಾಗೂ ಗೃಹೋಪಯೋಗಿ ವಸ್ತುಗಳಲ್ಲದೇ 50ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು ಇರಲಿವೆ. ಮೇ 1 ರಂದು ರಾತ್ರಿ 7 ರಿಂದ 9 ಗಂಟೆವರೆಗೆ ಅರೆಹೊಳೆ ಪ್ರತಿಷ್ಠಾನ ಮಂಗಳೂರು ಅವರಿಂದ ಮಂದಾರ್ತಿ ಮಹಾತ್ಮೆ ಪ್ರಸಿದ್ಧ ನೃತ್ಯರೂಪಕ ನಡೆಯಲಿದೆ ಎಂದು ಹೇಳಿದರು.
ಮೇ 2 ರಂದು ಸಂಜೆ 6 ರಿಂದ ರಾತ್ರಿ 9 ಗಂಟೆವರೆಗೆ ಅಳ್ವಾಸ್ ವಿದ್ಯಾರ್ಥಿಗಳಿಂದ ನರ ಶಾರ್ದೂಲ ಯಕ್ಷಗಾನ ಪ್ರಸಂಗ ಹಾಗೂ 3 ರಂದು ಸಂಜೆ 6.30 ರಿಂದ ರಾತ್ರಿ 9 ಗಂಟೆವರೆಗೆ ಕುದ್ರೋಳಿ ಗಣೇಶ ಅವರಿಂದ ಮನಸೆಳೆಯುವ ಜಾದೂ ಹಾಗೂ ಸಂಜೆ 4 ರಿಂದ 6 ಗಂಟೆವರೆಗೆ ಪಿಲಿ (ಹುಲಿ) ಡಾನ್ಸ್ ಪ್ರದರ್ಶನ ನಡೆಯಲಿದೆ ಎಂದರು.
ಮೂರು ದಿನಗಳವರೆಗೆ ನಡೆಯಲಿರುವ ಈ ಕರಾವಳಿ ಉತ್ಸವದಲ್ಲಿ ಕರಾವಳಿ ನಾಡು, ನುಡಿ, ಸಂಸ್ಕೃತಿ ಬಿಂಬಿಸುವ ಸಾಂಸೃ್ಕಕ ಕಾರ್ಯಕ್ರಮಗಳ ಜತೆಗೆ ಅಲ್ಲಿನ ತಿಂಡಿ, ತಿನಿಸು, ವಸ್ತ್ರ- ವೈಭೋಗಗಳನ್ನು ಪ್ರದರ್ಶಿಸಲಾಗುವುದು ಎಂದು ಹೇಳಿದರು.
ಈ ಉತ್ಸವವು ಬೆಳಗ್ಗೆ 10 ರಿಂದ ರಾತ್ರಿ 10 ಗಂಟೆಯವರೆಗೆ ಇರಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು ತಿಳಿಸಿದರು.
ಇನ್ನರ್ವೀಲ್ ಕ್ಲಬ್ ಮಿಡ್ಟೌನ್ ಅಧ್ಯಕ್ಷೆ ಶಿಲ್ಪಾ ಶೆಟ್ಟಿ, ಶೈಲಜಾ ಬಾಂಡಗೆ, ಸುಗ್ಗಿ ಸುಧಾಕರ ಶೆಟ್ಟಿ, ಕೌಸ್ತುಭ ಸಂಶಿಕರ, ಪ್ರವೀಣ ಬನ್ಸಾಲಿ ಸುದ್ದಿಗೋಷ್ಠಿಯಲ್ಲಿ ಇದ್ದರು.