ವಿಜಯವಾಣಿ ಸುದ್ದಿಜಾಲ ಮಂಗಳೂರು
ಬೆಳಕಿನ ಹಬ್ಬ ದೀಪಾವಳಿ ಮತ್ತೆ ಕಳೆಗಟ್ಟಿದೆ. ವಿವಿಧ ವಿನ್ಯಾಸದ ಗೂಡುದೀಪಗಳು, ವೈವಿಧ್ಯಮಯ ಪಟಾಕಿಗಳು, ಬಗೆಬಗೆಯ ಸಿಹಿ ತಿಂಡಿಗಳು, ಬಣ್ಣ ಬಣ್ಣದ ಉಡುಪುಗಳಿಂದ ಮಾರುಕಟ್ಟೆಗಳು ಶೋಭಿಸುತ್ತಿವೆ. ಆದರೆ ಸಂಜೆಯಾಗುತ್ತಿದ್ದಂತೆ ಸಿಡಿಲಿನ ಅರ್ಭಟದೊಂದಿಗೆ ಸುರಿಯುವ ಮಳೆ ಹಬ್ಬ ಆಚರಣೆಗೆ ಅಲ್ಪ ಅಡ್ಡಿಯಾಗಿದೆ.
ಸೋಮವಾರ ನರಕ ಚತುರ್ದಶಿ, ಮಂಗಳವಾರ ಅಮಾವಾಸ್ಯೆ, ಬುಧವಾರ ಅಂಗಡಿಪೂಜೆ, ಗೋಪೂಜೆಗೆ ಸಿದ್ಧತೆ ನಡೆದಿದ್ದು, ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ‘ಪರ್ಬ’ಕ್ಕೆ ಪೂರ್ವ ತಯಾರಿ ನಡೆದಿದೆ. ಉತ್ತರ ಕರ್ನಾಟಕದಿಂದ ಬರುವ ಹೂ ಮಾರಾಟಗಾರರು ದೀಪಾವಳಿಗೂ ಬಂದು ನಗರದ ವಿವಿಧ ಕಡೆ ಬೀಡುಬಿಟ್ಟಿದ್ದಾರೆ.
ಕೃಷಿ ಕುಟುಂಬಗಳು ಕೃಷಿ ಸಲಕರಣೆಗಳು, ಗದ್ದೆ, ತೋಟ ಮತ್ತಿತರ ಕಡೆ ಪೂಜೆ, ಪೊಲಿ ಪೂಜೆ, ಗೋಪೂಜೆ, ಬಲೀಂದ್ರ ಕರೆಯುವುದು, ದೈವಗಳಿಗೆ ವಿಶೇಷ ಪೂಜೆ, ಹಿರಿಯರಿಗೆ ನಮನ ಮತ್ತಿತರ ಕಾರ್ಯಕ್ರಮಗಳಿಗೆ ಸಿದ್ಧತೆ ನಡೆದಿದೆ. ಪ್ರಮುಖವಾಗಿ ಇದು ಬೆಳಕಿನ ಹಬ್ಬ ಆಗಿರುವುದರಿಂದ ಶುಚಿತ್ವ, ಅಲಂಕಾರ ಮತ್ತು ಹಣತೆ ಸಹಿತ ದೀಪಗಳನ್ನು ಬೆಳಗಲು ಪೂರ್ವತಯಾರಿಗೆ ಚಾಲನೆ ದೊರೆತಿದೆ.
ಆವೆಮಣ್ಣಿನಿಂದ ತಯಾರಿಸಿದ ಹಣತೆಗಳಿಗೆ ಉತ್ತಮ ಬೇಡಿಕೆ ಇದೆ. ವಿವಿಧ ಕಡೆ ರಸ್ತೆ ಬದಿ ಮತ್ತು ತಳ್ಳುಗಾಡಿಗಳಲ್ಲಿ ಹಣತೆಗಳ ಮಾರಾಟ ನಡೆಯುತ್ತಿದೆ. ಮಣ್ಣಿನ ಹಣತೆಗೆ ವಿನ್ಯಾಸಕ್ಕೆ ಅನುಗುಣವಾಗಿ 5ರಿಂದ 10 ರೂ.ವರೆಗೆ ಬೆಲೆ ಇದೆ. ಪಿಂಗಾಣಿ ಹಣತೆಗಳೂ ಲಭ್ಯವಿದ್ದು, ಮಣ್ಣಿನ ಹಣತೆಗಳಿಗೆ ಹೋಲಿಸಿದರೆ ದರ ತುಸು ಜಾಸ್ತಿ.
ಹಬ್ಬದ ಪ್ರಮುಖ ಆಕರ್ಷಣೆ ಗೂಡುದೀಪಗಳ ಸಂಗ್ರಹ ಅಂಗಡಿಗಳಲ್ಲಿ ರಾರಾಜಿಸುತ್ತಿವೆ. ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಬಟ್ಟೆ, ಪ್ಲಾಸ್ಟಿಕ್ ಮತ್ತು ಬಣ್ಣದ ಕಾಗದಗಳಿಂದ ತಯಾರಿಸಿದ ಗೂಡುದೀಪಗಳಿವೆ. ಬಟ್ಟೆಯಿಂದ ತಯಾರಿಸಿದ ಗೂಡುದೀಪಗಳಲ್ಲಿ 25ಕ್ಕೂ ಅಧಿಕ ವಿಧಗಳಿದ್ದು, 60 ರೂ.ಗಳಿಂದ 400 ರೂ. ತನಕ ದರವಿದೆ. ಪ್ಲಾಸ್ಟಿಕ್ ಗೂಡುದೀಪಗಳಲ್ಲಿ 150ಕ್ಕೂ ಅಧಿಕ ವಿಧಗಳಿವೆ. 50 ರೂ.ನಿಂದ 500 ರೂ.ವರೆಗೆ ದರ ಇದೆ. 40ಕ್ಕೂ ಹೆಚ್ಚು ಬಣ್ಣಗಳ ಕಾಗದದ ಗೂಡುದೀಪಗಳಿದ್ದು 400ರಿಂದ 500 ರೂ. ದರವಿದೆ.
ವಿವಿಧ ವಿನ್ಯಾಸದ ಗೂಡುದೀಪಗಳು, ವೈವಿಧ್ಯಮಯ ಪಟಾಕಿಗಳು, ಬಗೆಬಗೆಯ ಸಿಹಿತಿಂಡಿಗಳು, ಬಣ್ಣ ಬಣ್ಣದ ಉಡುಪುಗಳಿಂದ ಮಾರುಕಟ್ಟೆಗಳು ಶೋಭಿಸುತ್ತಿವೆ. ಶನಿವಾರದಿಂದಲೇ ಖರೀದಿಗೆ ಗ್ರಾಹಕರು ಮಳಿಗೆಗಳತ್ತ ಬರಲಾರಂಭಿಸಿದ್ದಾರೆ. ಸಾಧಾರಣವಾಗಿ ನರಕ ಚತುರ್ದಶಿಯ ಮುನ್ನಾ ದಿನ ಖರೀದಿ ಭರಾಟೆ ಜೋರಾಗಿರುತ್ತದೆ. ಬಟ್ಟೆ, ಇಲೆಕ್ಟ್ರಾನಿಕ್ಸ್, ಫರ್ನಿಚರ್ ಸೇರಿದಂತೆ ಎಲ್ಲ ವಿಭಾಗದಲ್ಲೂ ಗ್ರಾಹಕರ ಆಯ್ಕೆಗೆ ಅನುಗುಣವಾಗಿ ವಸ್ತುಗಳ ಸಂಗ್ರಹ ಮಾಡಿಕೊಳ್ಳಲಾಗಿದೆ. ಭಾನುವಾರ ವ್ಯಾಪಾರ ಭರಾಟೆ ಜೋರಾಗಿತ್ತು. ಮಂಗಳೂರಿನಲ್ಲಿ ಮಾರುಕಟ್ಟೆಗಳಲ್ಲಿ ತರಕಾರಿ, ಹಣ್ಣುಹಂಪಲು ದರ ಸ್ಥಿರವಾಗಿದೆ. ಎರಡು ದಿನಗಳಲ್ಲಿ ಒಂದಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಹೂವಿಗೂ ಬೇಡಿಕೆ ಇರುವುದರಿಂದ ದರ ತುಸು ಹೆಚ್ಚಾಗಲಿದೆ ಎಂದು ಮಾರಾಟಗಾರರು ತಿಳಿಸಿದ್ದಾರೆ.