ಜಿಲ್ಲೆ

ತಾಂತ್ರಿಕ ತೊಂದರೆಗೆ ಸಿಲುಕಿದ್ದ ತಮಿಳುನಾಡಿನ ದೋಣಿ ರಕ್ಷಿಸಿದ ಕೋಸ್ಟ್‌ಗಾರ್ಡ್

ಮಂಗಳೂರು: ಹಳೇ ಬಂದರು ಧಕ್ಕೆಯಿಂದ 39 ನಾಟಿಕಲ್ ಮೈಲ್ ದೂರದ ಸಮುದ್ರ ಮಧ್ಯೆ ಸೆ.24ರಿಂದ ಎಂಜಿನ್‌ನ ತಾಂತ್ರಿಕ ತೊಂದರೆಗೆ ಸಿಲುಕಿದ್ದ ಮೀನುಗಾರಿಕಾ ಬೋಟ್‌ನ್ನು ಭಾರತೀಯ ಕೋಸ್ಟ್‌ಗಾರ್ಡ್ ನೌಕೆ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ.


ತಮಿಳುನಾಡಿನ ತಿರುಚೆಂದೂರ್ ಮುರುಗನ್ ಹೆಸರಿನ ಬೋಟ್ ಸಮುದ್ರ ಮಧ್ಯೆ ತಾಂತ್ರಿಕ ಅಡಚಣೆಗೆ ಸಿಲುಕಿತ್ತು. ವಾತಾವರಣ ಹದಗೆಟ್ಟ ಸ್ಥಿತಿಯಲ್ಲಿ ಬೋಟಿನಲ್ಲಿದ್ದವರನ್ನು ರಕ್ಷಿಸುವುದು ಅನಿವಾರ್ಯವಾಗಿತ್ತು. ಈ ಬಗ್ಗೆ ಬೋಟ್‌ನಿಂದ ಮುಂಬೈನ ತಟರಕ್ಷಣಾ ಕೇಂದ್ರಕ್ಕೆ ತುರ್ತು ಸಂದೇಶ ರವಾನಿಸಲಾಗಿತ್ತು. ಈ ಸಂದೇಶ ಸ್ವೀಕರಿಸಿದ ಮುಂಬೈನ ಎಂಆರ್‌ಸಿಸಿ ಕೇಂದ್ರದ ಅಧಿಕಾರಿಗಳು ಕೂಡಲೇ ಕೋಸ್ಟ್‌ಗಾರ್ಡ್‌ಗೆ ಮಾಹಿತಿ ನೀಡಿದ್ದರು. ಕೋಸ್ಟ್‌ಗಾರ್ಡ್, ಮೀನುಗಾರಿಕಾ ಇಲಾಖೆ ಹಾಗೂ ಬೋಟ್ ಮಾಲೀಕರ ಸಹಕಾರದಲ್ಲಿ ಕೋಸ್ಟ್‌ಗಾರ್ಡ್‌ನ ಎರಡು ಇಂಟರ್ ಸೆಪ್ಟರ್ ಬೋಟ್‌ಗಳು ತಾಂತ್ರಿಕ ತೊಂದರೆಗೆ ಸಿಲುಕಿದ ಬೋಟ್‌ನ್ನು ಬುಧವಾರ ನವಮಂಗಳೂರು ಬಂದರು ತೀರಕ್ಕೆ ಎಳೆದು ತರುವಲ್ಲಿ ಸಾಥ್ ನೀಡಿದೆ ಎಂದು ಕೋಸ್ಟ್‌ಗಾರ್ಡ್ ಪ್ರಕಟಣೆ ತಿಳಿಸಿದೆ.