ರಕ್ಷಣಾ ಕಾರ್ಯದಲ್ಲಿ ಭಾಗಿಯಾದ ಕೋಸ್ಟ್‌ಗಾರ್ಡ್ ಸಿಬಂದಿ ಜತೆ ರಕ್ಷಿಸಲ್ಪಟ್ಟ ಮೀನುಗಾರರು.
ಮಂಗಳೂರು: ಕರಾವಳಿಯಲ್ಲಿ ತೀವ್ರ ಪ್ರಕ್ಷುಬ್ಧ ಹವಾಮಾನದ ನಡುವೆ ಭಾರತೀಯ ಕರಾವಳಿ ಕಾವಲು ಪಡೆಯು (ಐಸಿಜಿ) ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿ ನೋಂದಣಿಯ ‘ಮಂಜು ಮಾತಾ’ ಹೆಸರಿನ ಮೀನುಗಾರಿಕಾ ದೋಣಿಯಲ್ಲಿದ್ದ ಆರು ಮೀನುಗಾರರನ್ನು ರಕ್ಷಿಸಿದೆ.
ಸುರತ್ಕಲ್ ಕರಾವಳಿಯಿಂದ ಸುಮಾರು 33 ನಾಟಿಕಲ್ ಮೈಲಿ ದೂರದಲ್ಲಿ ಜೂ.29ರಂದು ಸಂಜೆ ಈ ರೋಮಾಂಚಕ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಸಂಜೆ ಸುಮಾರು 4 ಗಂಟೆಗೆ ಭೀಕರ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೀನುಗಾರಿಕಾ ದೋಣಿಯ ತಳಭಾಗ ಹಾನಿಗೊಳಗಾಗಿ, ದೋಣಿಯೊಳಗೆ ಭಾರಿ ಪ್ರಮಾಣದಲ್ಲಿ ನೀರು ನುಗ್ಗಲಾರಂಭಿಸಿತ್ತು. ಇದರಿಂದಾಗಿ ದೋಣಿಯಲ್ಲಿದ್ದ ಆರು ಜನ ಸಿಬ್ಬಂದಿಯ ಜೀವಕ್ಕೆ ತಕ್ಷಣದ ಅಪಾಯ ಎದುರಾಗಿತ್ತು. ಈ ವೇಳೆ ದೋಣಿಯಿಂದ ಬಂದ ವಿಹೆಚ್‌ಎಫ್ ಆರ್‌ಟಿ ತುರ್ತು ಸಂಕೇತವನ್ನು ಕರಾವಳಿ ಕಾವಲು ಪಡೆಯ ‘ಐಸಿಜಿಎಸ್ ಸಚೇತ್’ ಹಡಗು ಸ್ವೀಕರಿಸಿತು.
ತಂತ್ರಜ್ಞಾನದ ನೆರವಿನೊಂದಿಗೆ ರಕ್ಷಣೆ: ತುರ್ತು ಕರೆಗೆ ತಕ್ಷಣವೇ ಸ್ಪಂದಿಸಿದ ಐಸಿಜಿಎಸ್ ಸಚೇತ್ ಸಿಬ್ಬಂದಿ, ಕೇವಲ 90 ನಿಮಿಷಗಳ ಒಳಗೆ ಸಂಕಷ್ಟದಲ್ಲಿದ್ದ ದೋಣಿಯ ಬಳಿಗೆ ತಲುಪಿದರು. ಆದರೆ ಪ್ರಕ್ಷುಬ್ಧ ಸಮುದ್ರ, ಬಲವಾದ ಗಾಳಿ, ಕಡಿಮೆ ದೃಷ್ಟಿಗೋಚರತೆ ಮತ್ತು ಆವರಿಸುತ್ತಿದ್ದ ಕತ್ತಲೆಯಿಂದಾಗಿ ಕಾರ್ಯಾಚರಣೆ ಅತ್ಯಂತ ಕಠಿಣವಾಗಿತ್ತು. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಕರಾವಳಿ ಕಾವಲು ಪಡೆಯು ಆಧುನಿಕ ತಂತ್ರಜ್ಞಾನದ ‘ರಿಮೋಟ್-ಆಪರೇಟೆಡ್ ಲೈಫ್‌ಬಾಯ್ಸ’ (ದೂರದಿಂದ ನಿಯಂತ್ರಿಸಬಹುದಾದ ಜೀವರಕ್ಷಕ ಸಾಧನಗಳು) ಅನ್ನು ಬಳಸಿ, ಸಿಲುಕಿಕೊಂಡಿದ್ದ ಮೀನುಗಾರರನ್ನು ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಸಂಜೆ 6 ಗಂಟೆಯ ವೇಳೆಗೆ ಎಲ್ಲಾ ಆರು ಮೀನುಗಾರರನ್ನು ಸುರಕ್ಷಿತವಾಗಿ ಹಡಗಿಗೆ ಹತ್ತಿಸಿಕೊಳ್ಳಲಾಯಿತು. ರಕ್ಷಿಸಲ್ಪಟ್ಟ ಮೀನುಗಾರರನ್ನು ಸುರಕ್ಷಿತವಾಗಿ ದಡಕ್ಕೆ ಕರೆ ತಂದು ಮುಂದಿನ ಪ್ರಕ್ರಿಯೆಗಳನ್ನು ನಡೆಸಲಾಗಿದೆ.