ಉಡುಪಿ: ಮಂಗಳೂರಿನಿಂದ ಕಾರವಾರದವರೆಗೆ ವಿಶಾಲ ಸಮುದ್ರ ತಟವನ್ನು ಕಾಯುವ ಕರಾವಳಿ ಕಾವಲು ಪೊಲೀಸ್ ಪಡೆಯ ಇಲಾಖಾ ವಾಹನಗಳಿಗೆ ನಿಗದಿಪಡಿಸಿದ್ದ ಮಾಸಿಕ ಇಂಧನ ಖೋಟಾವನ್ನು ರಾಜ್ಯ ಸರ್ಕಾರ ಆರ್ಥಿಕ ಮಿತವ್ಯಯ ಸಾಧಿಸುವ ದೃಷ್ಟಿಯಿಂದ ಕಡಿತಗೊಳಿಸಿದೆ. ಇದರಿಂದ ಕರ್ನಾಟಕ ಕರಾವಳಿಯ ಉದ್ದಗಲಕ್ಕೂ ಗಸ್ತು ತಿರುಗುತ್ತಿದ್ದ ಪೊಲೀಸರ ಕೆಲಸಕ್ಕೆ ಹಿನ್ನಡೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1, ಉಡುಪಿಯಲ್ಲಿ 3, ಕಾರವಾರದಲ್ಲಿ 5 ಸೇರಿದಂತೆ ಒಟ್ಟು 9 ಕರಾವಳಿ ಕಾವಲು ಪೊಲೀಸ್ ಠಾಣೆಗಳಿವೆ. ಜೊತೆಗೆ ಮಲ್ಪೆಯಲ್ಲಿರುವ ಮುಖ್ಯ ಕಚೇರಿಯಲ್ಲಿ 3 ವಾಹನಗಳಿವೆ. ಪ್ರತಿ ಗಸ್ತುವಾಹನಗಳಿಗೆ ಈ ಹಿಂದೆ ಮಾಸಿಕ 200 ಲೀ. ಇಂಧನ ನಿಗದಿಮಾಡಲಾಗಿತ್ತು. ಮಂಗಳೂರು, ಮಲ್ಪೆ, ಗಂಗೊಳ್ಳಿ, ಭಟ್ಕಳ, ಕುಮುಟಾ, ಬೇಲಿಕೇರಿ, ಕಾರವಾರದ ಗಸ್ತುವಾಹನಗಳಿಗೆ 150 ಲೀ.ಗೆ ಕಡಿತಗೊಳಿಸಲಾಗಿದೆ. ಹೆಜಮಾಡಿ, ಮತ್ತು ಹೊನ್ನಾವರ ಠಾಣೆ ವಾಹನಗಳಿಗೆ 250 ಲೀ. ಇಂಧನದಿಂದ 175 ಲೀ.ಗೆ ಇಳಿಕೆ ಮಾಡಲಾಗಿದೆ. ಇದರಿಂದಾಗಿ ದಿನಕ್ಕೆ 1 ಗಂಟೆ ಗಸ್ತು ತಿರುಗಲು ಮಾತ್ರ ಸಾಧ್ಯವಾಗಿದೆ.
ಸಮುದ್ರ ಗಸ್ತು ಕಾರ್ಯಾಚರಣೆಗೆ ಹೊಡೆತ
ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ಕರಾವಳಿ ಕಾವಲು ಪೊಲೀಸ್ ಬೋಟ್ಗಳಿಗೆ ಮಾಸಿಕ 600 ಲೀಟರ್ ಇಂಧನ ಪೂರೈಕೆ ಮಾಡಲಾಗುತ್ತಿತ್ತು. ಪ್ರಸ್ತುತ ಕೇವಲ 250 ಲೀಟರ್ ನೀಡಲಾಗುತ್ತಿದ್ದು, ಇದರಿಂದ ದಿನಕ್ಕೆ 10 ತಾಸು ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ಕರಾವಳಿ ಕಾವಲು ಪೊಲೀಸ್ ಪಡೆ ಬೋಟ್ಗಳು ಕೇವಲ ಒಂದು ಗಂಟೆ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 15 ಗಸ್ತು ಬೋಟ್ಗಳಿದ್ದು, ಇದೀಗ 9 ಬೋಟ್ಗಳು ಮಾತ್ರ ಸುಸ್ಥಿತಿಯಲ್ಲಿವೆ.
ದೇಶದ ಭದ್ರತೆಗೆ ಅಪಾಯ ಹವಾಮಾನ ವೈಪರೀತ್ಯ ಸಂದರ್ಭದಲ್ಲಿ ಮೀನುಗಾರರಿಗೆ ನೆರವು, ಕಡಲಿನ ಚಟುವಟಿಕೆ ಮೇಲೆ ನಿಗಾವಹಿಸುವುದು, ಡ್ರಗ್ಸ್ ಸಾಗಾಟ ತಡೆ, ಭಯೋತ್ಪಾದನೆಯನ್ನ ತಡೆಗಟ್ಟುವ ನಿಟ್ಟಿನಲ್ಲಿ ಕರಾವಳಿ ಕಾವಲು ಪೊಲೀಸ್ ಪಾತ್ರ ಬಹಳ ಮುಖ್ಯ. ಅದರೆ ರಾಜ್ಯ ಸರ್ಕಾರದ ಇಂಧನ ಕಡಿತಗೊಳಿಸಿರುವುದು ಕರಾವಳಿ ಕಾವಲು ಪಡೆಯನ್ನು ಕಟ್ಟಿಹಾಕಿದಂತಿದೆ.
ಕರಾವಳಿ ಕಾವಲು ಪಡೆ ಗಸ್ತುವಾಹನಗಳಿಗೆ ಇಂಧನ ಕೊರತೆ ಇಲ್ಲ. ಅಗತ್ಯಕ್ಕೆ ತಕ್ಕಂತೆ ಸರ್ಕಾರ ಪೂರೈಕೆ ಮಾಡುತ್ತಿದೆ. ಆದರೆ ಅನಗತ್ಯ ಮಾರ್ಗಗಳಲ್ಲಿ ಗಸ್ತು ತಿರುಗುವುದನ್ನು ಸ್ಥಗಿತಗೊಳಿಸಲಾಗಿದೆ. -ಮಿಥುನ್ ಎಚ್.ಎನ್., ಪೊಲೀಸ್ ಅಧೀಕ್ಷಕ, ಕರಾವಳಿ ಕಾವಲು ಪೊಲೀಸ್