ಜಿಲ್ಲೆ

ಕೆಎಎಸ್ ಪೂರ್ವಭಾವಿ ಪರೀಕ್ಷೆಗೆ ತರಬೇತಿ: ಕೃಷಿಕ್ ಸರ್ವೋದಯ ಟ್ರಸ್ಟ್ ಖಜಾಂಚಿ ಡಾ.ಕೆ.ಬಿ.ಬೋರಯ್ಯ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ನಗರದ ಕೃಷಿಕ್ ಸರ್ವೋದಯ ಟ್ರಸ್ಟ್‌ನ ವೃತ್ತಿ ಮಾರ್ಗದರ್ಶನ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದಿಂದ ಉದ್ಯೋಗ ಆಕಾಂಕ್ಷಿ ಅಭ್ಯರ್ಥಿಗಳಿಗೆ ಕೆಎಎಸ್ ಪೂರ್ವಭಾವಿ ಪರೀಕ್ಷೆಗೆ ತರಬೇತಿ ನಡೆಸಲಾಗುತ್ತಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು ಎಂದು ಟ್ರಸ್ಟ್‌ನ ಖಜಾಂಚಿ ಡಾ.ಕೆ.ಬಿ.ಬೋರಯ್ಯ ತಿಳಿಸಿದರು.

ಟ್ರಸ್ಟ್ ಕಳೆದ 25 ವರ್ಷದಿಂದ ಜಿಲ್ಲೆಯ ಉದ್ಯೋಗ ಆಕಾಂಕ್ಷಿ ಅಭ್ಯರ್ಥಿಗಳಿಗೆ ಕೇಂದ್ರ ಮತ್ತು ರಾಜ್ಯದ ವಿವಿಧ ಸರ್ಕಾರಿ ಹುದ್ದೆಗಳ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಅತಿ ಕಡಿಮೆ ಶುಲ್ಕದಲ್ಲಿ ಮಾರ್ಗದರ್ಶನ ಮತ್ತು ತರಬೇತಿ ನೀಡಲಾಗುತ್ತಿದೆ. ಇದುವರೆವಿಗೂ ಹನ್ನೆರಡು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದ್ದು, 500ಕ್ಕೂ ಹೆಚ್ಚು ಅಭ್ಯರ್ಥಿಗಳು ವಿವಿಧ ಸರ್ಕಾರಿ ಹುದ್ದೆ ಪಡೆದುಕೊಂಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಕೆಎಎಸ್ ಪೂರ್ವಭಾವಿ ಪರೀಕ್ಷೆಗೆ ಮಾ.10ರಿಂದ ತರಬೇತಿ ಪ್ರಾರಂಭಿಸಲಾಗುವುದು. ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ,

ಪ್ರವರ್ಗ 2ಎ/2 ಬಿ/3ಎ/3ಬಿ ಸಮುದಾಯದ ಅಭ್ಯರ್ಥಿಗಳಿಗೆ 300 ರೂ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ. ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ದರ್ಜೆಯ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದರು.

ಟ್ರಸ್ಟ್‌ನ ಸಂಚಾಲಕ ಎಸ್.ಲೋಕೇಶ್ ಮಾತನಾಡಿ, 10ನೇ ತರಗತಿವರೆಗಿನ ಸಾಮಾನ್ಯ ಶಾಲಾ ಶಿಕ್ಷಣ ಪಡೆದು ಪದವಿ ಪಡೆದವರು ಈ ಪರೀಕ್ಷೆಗಳಿಗೆ ತಯಾರಾಗಬಹುದು. ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಗೆ ಪ್ರತ್ಯೇಕ ವಸತಿ ನಿಲಯ ಸೌಲಭ್ಯ ಹಾಗೂ 24*7 ಸ್ಟಡಿ ಸೆಂಟರ್, ಗ್ರಂಥಾಲಯದ ವ್ಯವಸ್ಥೆ ಇದೆ ಎಂದರು.