ಆಲೂರು: ರೈತ ಸಮುದಾಯದ ಆರ್ಥಿಕ ಭದ್ರತೆಗೆ ಹೊಂದಲು ಸಹಕಾರ ಸಂಘಗಳ ಸ್ವಯಂ ಶಕ್ತಿ ಮತ್ತು ಸಾಧನೆ ಮುಖ್ಯ ಎಂದು ಜಿಲ್ಲಾ ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್ ಹೇಳಿದರು.
ತಾಲೂಕಿನ ಪಾಳ್ಯ ಹೋಬಳಿ ತಾಳೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸಹಕಾರ ಸಂಘಗಳು ರೈತ ಸಮುದಾಯದ ಜೀವನಾಡಿ, ಸಹಕಾರಿ ಕ್ಷೇತ್ರವು ಬಹಳಷ್ಟು ವಿಸ್ತಾರವಾಗಿ ಬೆಳೆದಿದ್ದು ರೈತರ, ಕೂಲಿ ಕಾರ್ಮಿಕರ ಆರ್ಥಿಕ ಸ್ಥಿತಿ ಸುಧಾರಣೆಗೆ ಬೆನ್ನೆಲುಬಾಗಿ ನಿಂತಿದೆ. ತಾಳೂರು ಪ್ರಾಥಮಿಕ ಕೃಷಿ ಪತ್ತಿ ಸಹಕಾರಿ ಸಂಘವು ಪ್ರಾರಂಭದಿಂದಲೂ ರೈತರೊಂದಿಗೆ ಉತ್ತಮ ವ್ಯವಹಾರವನ್ನು ನಡೆಸಿಕೊಂಡು ಬಂದಿದ್ದು, ತಾಲೂಕಿನ ಇತರ ಸಹಕಾರಿ ಬ್ಯಾಂಕುಗಳಿಗೆ ಮಾದರಿಯಾಗಿದೆ. ಸಂಘವು ಬ್ಯಾಂಕಿಂಗ್ ವ್ಯವಹಾರ, ರಾಸಾಯನಿಕ ಗೊಬ್ಬರ ಹಾಗೂ ಪಡಿತರ ಸಾಮಗ್ರಿ ವಿತರಣೆಗೆ ಸೀಮಿತವಾಗಿರದೇ ಇತರ ಆರ್ಥಿಕ ಕ್ರೋಡೀಕರಣದಲ್ಲಿ ತೊಡಗಿಸಿಕೊಂಡು ಅಭಿವೃದ್ಧಿ ಪಥದತ್ತ ನಡೆಯುತ್ತಿರುವುದು ಹೆಮ್ಮೆಪಡುವ ವಿಚಾರ ಎಂದು ತಿಳಿಸಿದರು.
ತಾಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ತಾಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 19 ಗ್ರಾಮಗಳನ್ನು ಒಳಗೊಂಡು 1122 ಸದಸ್ಯರನ್ನು ಹೊಂದಿದೆ. 2023-24ನೇ ಸಾಲಿನಲ್ಲಿ 1070 ಸದಸ್ಯರಿಗೆ 6.05 ಕೋಟಿ ರೂ. ವಿತರಿಸಲಾಗಿತ್ತು. ರೈತರಿಗೆ ಕೊಟ್ಟ ಸಾಲದಲ್ಲಿ ಶೇ. 97 ಸಾಲ ವಸೂಲಾಗಿದೆ. ಇದರಿಂದ ಬ್ಯಾಂಕಿಗೆ ಶೇ.100 ಸಾಲವನ್ನು ಸಂಘದಿಂದ ಕಟ್ಟಿದ್ದೇವೆ. ಇದರಿಂದ ಸುಮಾರು 2,23,000 ರೂ. ಆದಾಯವನ್ನು ಗಳಿಸಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಸಂಘದ ಕಾರ್ಯದರ್ಶಿ ಸುರೇಶ್ 2023-24 ನೇ ಸಾಲಿನ ಆಯವ್ಯಯವನ್ನು ಮಂಡಿಸಿದರು. ಸಂಘದ ಉಪಾಧ್ಯಕ್ಷ ಮಂಜೇಗೌಡ, ನಿರ್ದೇಶಕರಾದ ಮಲ್ಲೇಶ್ ಗೌಡ, ನಿಂಗೇಗೌಡ, ವಿಶ್ವನಾಥ್, ಮಂಜುನಾಥ್, ಲೋಕೇಶ್, ಕೇಶವೇಗೌಡ, ಸರೋಜಮ್ಮ, ವಸಂತಮ್ಮ, ತಾಳೂರು ಗ್ರಾಮ ಪಂಚಾಯಿತಿ ಸದಸ್ಯ ಷಡಕ್ಷರಿ, ಡಿಸಿಸಿ ಬ್ಯಾಂಕಿನ ಕ್ಷೇತ್ರ ಅಧಿಕಾರಿ ರಾಘವೇಂದ್ರ ಸೇರಿದಂತೆ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.