ಜಿಲ್ಲೆ

ಸೇವಾ ಭದ್ರತೆ ಕಲ್ಪಿಸಲು ನೂತನ ನೀತಿ ಮಂಗಳೂರಿನಲ್ಲಿ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಮಾಹಿತಿ

ಮಂಗಳೂರು: ಕೃಷಿ ಪತ್ತಿನ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಕಾರ್ಯದರ್ಶಿಗಳಿಗೆ ಸೇವಾ ಭದ್ರತೆ ಕಲ್ಪಿಸುವ ಉದ್ದೇಶದಿಂದ ನೂತನ ನೀತಿ ಶೀಘ್ರ ಜಾರಿಯಾಗಲಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ಇಲಾಖೆಯ ಪ್ರಗತಿ ಪರಿಶೀಲನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬಹಳಷ್ಟು ಸಹಕಾರಿ ಸಂಸ್ಥೆಗಳಲ್ಲಿ ರಾಜಕೀಯ ದುರುದ್ದೇಶ ಅಥವಾ ಇನ್ಯಾವುದೋ ಕಾರಣಗಳಿಗೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಮೇಲೆ ಆರೋಪ ಹೊರಿಸಿ ಅವರನ್ನು ಆಡಳಿತ ಮಂಡಳಿ ಕೆಲಸದಿಂದ ವಜಾ ಮಾಡುವ ಪ್ರಕರಣಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಅವರಿಗೆ ಸೇವಾ ಭದ್ರತೆ ಕಲ್ಪಿಸಲು ಕಲಂ 128 ಎ ನಿಯಮಾವಳಿಗೆ ತಿದ್ದುಪಡಿ ತಂದು ವಿಧಾನಮಂಡಲ ಮತ್ತು ರಾಜ್ಯಪಾಲರ ಒಪ್ಪಿಗೆ ಪಡೆಯಲಾಗಿದೆ. ನಿಯಮ ರೂಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.


ನೂತನ ನೀತಿ ಪ್ರಕಾರ ‘ಕಾಮನ್ ಕೇಡರ್ ಅಥಾರಿಟಿ’ ರಚಿಸಿ ಜಿಲ್ಲಾ ಬ್ಯಾಂಕಿನ ಅಧ್ಯಕ್ಷರು ಇದರ ಮುಖ್ಯಸ್ಥರಾಗುತ್ತಾರೆ. ಮಖ್ಯ ಕಾರ್ಯನಿರ್ವಹಣಾಧಿಕಾರಿ ಕಾರ್ಯದರ್ಶಿಯ ಸ್ಥಾನ ಪಡೆಯಲಿದ್ದಾರೆ. ಆಪಾದನೆ, ಗೊಂದಲಗಆಳದರೆ, ಜಿಲ್ಲಾಧ್ಯಕ್ಷರು ಪರಿಶೀಲಿಸಿ ನಿರ್ಧಾರ ಕೈಗೊಳ್ಳುವ ಅಧಿಕಾರ ಇರಲಿದೆ ಎಂದರು.
ಅಲ್ಪಾವಧಿ ಹಾಗೂ ಮಧ್ಯಮಾವಧಿ ಬೆಳೆ ಸಾಲಗಳನ್ನು ಬೆಳೆಗಾರರ ಸಮರ್ಥ್ಯಕ್ಕೆ ಅನುಗುಣವಾಗಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಸಾಲಕ್ಕೆ ಅರ್ಜಿ ಸಲ್ಲಿಸಿದ ಬೆಳೆಗಾರರ ಬೆಳೆ ವ್ಯಾಪ್ತಿ ಹಾಗೂ ಸಾಲ ಮರುಪಾವತಿ ಗಮನದಲ್ಲಿರಿಸಿ ರಾಜ್ಯ ಸಮಿತಿ ತೀರ್ಮಾನ ಕೈಗೊಳ್ಳುತ್ತದೆ. ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ಜಾರಿಯಲ್ಲಿದೆ ಎಂದರು.


ಬಾಕಿ ಮೊತ್ತ ಹಂತಗಳಲ್ಲಿ ಬಿಡುಗಡೆ: ಈ ಹಿಂದಿನ ಸರ್ಕಾರ ಜಾರಿಗೊಳಿಸಿದ ಸಾಲ ಮನ್ನಾ ಯೋಜನೆಯಲ್ಲಿ ರಾಜ್ಯದಲ್ಲಿ ಡಿಸಿಸಿ ಬ್ಯಾಂಕ್‌ಗಳಿಗೆ ಸರ್ಕಾರ 351 ಕೋಟಿ ರೂ.ಪಾವತಿಸಲು ಬಾಕಿ ಇದೆ. ಇದರಲ್ಲಿ ದ.ಕ.ಗೆ 14 ಕೋಟಿ ಹಾಗೂ ಉಡುಪಿಗೆ 4 ಕೋಟಿ ರೂ. ಸೇರಿ ಒಟ್ಟು 18 ಕೋಟಿ ರೂ. ಪಾವತಿಯಾಗಬೇಕು. ಈ ಬಾಕಿ ಮೊತ್ತಗಳನ್ನು ಸರ್ಕಾರ ಪಾವತಿಸದಿದ್ದರೆ, ಡಿಸಿಸಿ ಬ್ಯಾಂಕ್‌ಗಳು ಹಾಗೂ ಸಾಲ ಪಡೆಯಲು ಸದಸ್ಯರಿಗೆ ತೊಂದರೆಯಾಗುತ್ತದೆ. ಹೀಗಾಗಿ ಎಲ್ಲ ಬ್ಯಾಂಕ್‌ಗಳ ಮುಖ್ಯಸ್ಥರು ಹಾಗೂ ಅಧಿಕಾರಿಗಳ ಸಭೆಯನ್ನು ಒಂದು ವಾರದಲ್ಲಿ ಬೆಂಗಳೂರಿನಲ್ಲಿ ನಡೆಸಲಾಗುವುದು. ಬಾಕಿ ಮೊತ್ತವನ್ನು ಹಂತ ಹಂತವಾಗಿ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.


ಸಹಕಾರಿ ಬ್ಯಾಂಕ್‌ಗಳನ್ನು ಕೇಂದ್ರೀಕೃತ ವ್ಯವಸ್ಥೆಗೆ ತರುವುದಾಗಿ ಕೇಂದ್ರ ಸಹಕಾರಿ ಸಚಿವ ಅಮಿತ್ ಷಾ ನೀಡಿರುವ ಹೇಳಿಕೆಯನ್ನು ಸ್ವಾಗತಿಸಿದ್ದೆ. ಆದರೆ ರಾಜ್ಯದ ಕಾಯ್ದೆಗಳನ್ನು ಬದಲಾಯಿಸಲು ಕೇಂದ್ರಕ್ಕೆ ಆಗುವುದಿಲ್ಲ. ಸರ್ಕಾರಕ್ಕೆ ಸಲಹೆ ನೀಡಲು ಅವಕಾಶವಿದೆ ಎಂದರು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳಪು, ಜೈರಾಜ್ ಬಿ. ರೈ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಸಹಕಾರಿ ಸಂಘಗಳ ಅಪರ ನಿಬಂಧಕ ಲಿಂಗರಾಜು, ಉಪನಿಬಂಧಕ ರಮೇಶ್ ಇದ್ದರು.

ಎಸ್‌ಸಿಡಿಸಿಸಿ ಬ್ಯಾಂಕ್ ಮಾದರಿ
ಬೇರೆ ಜಿಲ್ಲೆಗಳಿಗೆ ಹೋಲಿಸಿದಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ತತ್ವಗಳು ಸರಿಯಾದ ರೀತಿಯಲ್ಲಿ ಪಾಲನೆಯಾಗುತ್ತಿವೆ ಎಂದು
ಸಚಿವ ಕೆ.ಎನ್.ರಾಜಣ್ಣ ಹೇಳಿದರು. ಸಹಕಾರಿ ಆಂದೋಲನದ ಬೇಡಿಕೆ ಈಡೇರಿಸುವುದು ನಮ್ಮ ಜವಾಬ್ದಾರಿ. ರೈತರಿಗೆ ಸಾಲ ನೀಡಿಕೆಯಲ್ಲಿ ಬ್ಯಾಂಕ್‌ಗಳಿಗೆ ಹೆಚ್ಚಿನ ಲಾಭ ಇರದಿದ್ದರೂ, ವ್ಯವಸಾಯೇತರ ಸಾಲ ನೀಡಿಕೆಯಲ್ಲಿ ಅದನ್ನು ಸರಿದೂಗಿಸುವ ಕೆಲಸವನ್ನು ಎಸ್‌ಸಿಡಿಸಿಸಿ ಬ್ಯಾಂಕ್ ಮಾಡುತ್ತಿದೆ. ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ಸಮರ್ಥ ನಾಯಕತ್ವದಲ್ಲಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದ್ದು ಇತರ ಬ್ಯಾಂಕ್‌ಗಳಿಗೆ ಮಾದರಿಯಾಗಿದೆ ಎಂದರು.

ಯಶಸ್ವಿನಿ ದರ ಪರಿಷ್ಕರಣೆ
ಯಶಸ್ವಿನಿ ವಿಮಾ ಯೋಜನೆಯಡಿ ಚಿಕಿತ್ಸೆ ನೀಡಲು ವೈದ್ಯರು ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿ ಸಭೆ ನಡೆಸಿ ಮನವರಿಕೆ ಮಾಡಿದ್ದಾರೆ. ಅವರ ಬೇಡಿಕೆಯಂತೆ ದರ ಹೆಚ್ಚಳ ಮಾಡಲಾಗಿದೆ. ಯಶಸ್ವಿನಿ ಯೋಜನೆಗೆ ಸೇರ್ಪಡೆಗೊಂಡ ಸದಸ್ಯರಿಗೆ ಎಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ವೈದ್ಯರು ಒಪ್ಪಿಗೆ ಸೂಚಿಸಿದ್ದಾರೆ. ಶೀಘ್ರದಲ್ಲೆ ಮತ್ತೆ ಜಾರಿಗೆ ಬರಲಿದೆ ಎಂದು ಸಚಿವರು ತಿಳಿಸಿದರು. ಹಾಲಿನ ದರವನ್ನು 3 ರೂ. ಹೆಚ್ಚಿಸಲಾಗಿದೆ. ಮತ್ತೆ ದರ ಏರಿಕೆ ಇಲ್ಲ. ಪಶು ಆಹಾರಕ್ಕೆ ಸಬ್ಸಿಡಿ ಸೇರಿದಂತೆ ಬೇರೆ ರೀತಿಯಲ್ಲಿ ರೈತರಿಗೆ ಉಪಯುಕ್ತ ಯೋಜನೆಗಳನ್ನು ಕಲ್ಪಿಸಲು ಚಿಂತನೆ ನಡೆಸಲಾಗುತ್ತಿದೆ ಎಂದರು.

ಸಹಕಾರಿ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ-ಪಂಗಡದ ಸದಸ್ಯರ ಬಾಕಿಯಾಗಿರುವ ಷೇರು ಹಣ ಸರ್ಕಾರ ಭರಿಸಲಿದೆ. 4 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಅವಶ್ಯಕತೆ ಇರುವಷ್ಟು ಹಣ ನೀಡಲು ಸರ್ಕಾರ ಬದ್ಧವಾಗಿದೆ. ವಿದ್ಯಾವಂತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನಾಗಿ ಮಾಡಬೇಕು.
ಕೆ.ಎನ್.ರಾಜಣ್ಣ
ಸಹಕಾರ ಸಚಿವ