ಇಳಕಲ್ಲ ತಾಲೂಕಿನ ನಂದವಾಡಗಿ ಮಠದಲ್ಲಿ ಹಮ್ಮಿಕೊಂಡ ಸಮಾರಂಭವನ್ನು ಶಾಸಕ ವಿಜಯಾನಂದ ಕಾಶಪ್ಪವನರ ಉದ್ಘಾಟಿಸಿ ಮಾತನಾಡಿದರು. ಮಹಾಂತಲಿಂಗ ಶಿವಾಚಾರ್ಯರು , ಗುರುಬಸವ ಸ್ವಾಮಿಗಳು, ಮಹಾಂತಲಿಂಗ ಶಿವಾಚಾರ್ಯರು, ಸಿದ್ದಲಿಂಗ ಸ್ವಾಮಿಗಳು, ವರರುದ್ರಮುನಿ ಶಿವಾಚಾರ್ಯರು, ಶಾಂತಮಲ್ಲ ಸ್ವಾಮಿಗಳು ಇದ್ದಾರೆ. 
ಜಿಲ್ಲೆ

ಮಠದ ಕಾರ್ಯಗಳಿಗೆ ಸಹಕಾರ

ದತ್ತಾತ್ರೇಯ ಪಿ ಕುಲಕರ್ಣಿ

ಇಳಕಲ್ಲ: ಸಂಸ್ಕಾರ ಉಳಿಸುವಲ್ಲಿ ಮಠಗಳ ಕೊಡುಗೆ ಅಪಾರ. ಭಕ್ತಿ ಭಾವದ ಜತೆಗೆ ಧಾರ್ಮಿಕ ಆಚರಣೆಗಳು ನಡೆಯುವುದು ಮಠಗಳಿಂದಲೇ ಹೆಚ್ಚು. ಇಂತಹ ಮಠಗಳಲ್ಲಿ ನಮ್ಮ ನಂದವಾಡಗಿ ಮಠ ಯಾವಾಗಲೂ ಮುಂಚೂಣಿಯಲ್ಲಿದೆ ಎಂದು ಕರ್ನಾಟಕ ವೀರಶೈವ ಲಿಂಗಾಯತ ಅಭಿವದ್ಧಿ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಗೌರಿ ಹುಣ್ಣಿಮೆ ನಿಮಿತ್ತ ಮಠದಲ್ಲಿ ಹಮ್ಮಿಕೊಂಡ ಪೂಜ್ಯ ಗುರುದ್ವಯರ ಗದ್ದುಗೆಗಳಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಪೂಜ್ಯರಿಂದ ವಟುಗಳಿಗೆ ಅಯ್ಯಚಾರ ದೀಕ್ಷೆ, ಹಿರಿಯ ಶ್ರೀಗಳ ಭಾವಚಿತ್ರ ಮೆರವಣಿಗೆ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಮಠದಲ್ಲಿ ಭಕ್ತಿಯೊಂದಿಗೆ ಧಾರ್ಮಿಕವಾಗಿ ಎಲ್ಲ ಕಾರ್ಯಕ್ರಮಗಳು ಜರುಗುತ್ತಿವೆ. ಇದರ ಜತೆಗೆ ರಥೋತ್ಸವ ಮಾಡಿದರೆ ಭಕ್ತರಲ್ಲಿ ಸಂತಸ ಉಂಟಾಗುತ್ತದೆ. ಇಂದಿನಿಂದ ಪೂಜ್ಯ ಶ್ರೀಗಳ ಆಶೀರ್ವಾದದೊಂದಿಗೆ ನೂತನ ರಥ ನಿರ್ಮಿಸಲು ಪ್ರತಿಯೊಬ್ಬರೂ ತನು ಮನ ಧನದೊಂದಿಗೆ ಕೈಜೋಡಿಸಬೇಕು. ನಾನೂ ಕೂಡ ಇದಕ್ಕೆ ಬೇಕಾದ ಎಲ್ಲ ಸಹಾಯ, ಸಹಕಾರ ಒದಗಿಸಲು ಸಿದ್ಧನಿದ್ದೇನೆ ಎಂದು ಕಾಶಪ್ಪನವರ ಸಲಹೆ ನೀಡಿದರು.

ನಂದವಾಡಗಿ ಮಠದ ಡಾ. ಅಭಿನವ ಚನ್ನಬಸವ ಶಿವಾಚಾರ್ಯರು ಮಾತನಾಡಿ, ಪ್ರತಿಯೊಂದು ಕಾರ್ಯಕ್ರಮಕ್ಕೆ ಭಕ್ತರ ಪಾತ್ರ ಪ್ರಮುಖವಾದುದು. ಅದು ಸದಾಕಾಲ ಮುಂದುವರಿಯಲಿ ಎಂದು ಹೇಳಿದರು.

ಶಾಸಕ ವಿಜಯಾನಂದ ಕಾಶಪ್ಪನವರನ್ನು ಶ್ರೀಗಳು ಸತ್ಕರಿಸಿದರು. ಮಹಾಂತಲಿಂಗ ಶಿವಾಚಾರ್ಯರು, ಸಂತೆಕಲ್ಲೂರದ ಗುರುಬಸವ ಸ್ವಾಮಿಗಳು, ಮಹಾಂತಲಿಂಗ ಶಿವಾಚಾರ್ಯರು, ಒಳಬಳ್ಳಾರಿಯ ಸಿದ್ದಲಿಂಗ ಸ್ವಾಮಿಗಳು, ಮಸ್ಕಿ ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯರು, ಅಡವಿ - ಅಮರೇಶ್ವರ ಶಾಂತಮಲ್ಲ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ವಿಜಯ ಮಹಾಂತೇಶ ಗದ್ದನಕೇರಿ, ಸರಸ್ವತಿ ಈಟಿ, ಇತರರು ಉಪಸ್ಥಿತರಿದ್ದರು. ಬಸಯ್ಯ ಹಿರೇಮಠ, ಪ್ರಭು ಹಿರೇಮಠ ನಿರೂಪಿಸಿದರು.