ಜಿಲ್ಲೆ

ಸೌಹಾರ್ದ ಸಹಕಾರಿಗಳ ಸಭೆ

Dharwada - Basavaraj Idli

ಹುಬ್ಬಳ್ಳಿ: ಬೆಂಗಳೂರಿನಲ್ಲಿ ಆಯೋಜನೆಗೊಂಡಿರುವ ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿಯ 22ನೇ ವಾರ್ಷಿಕ ಸಾಮಾನ್ಯ ಸಭೆಯ ಹಿನ್ನೆಲೆಯಲ್ಲಿ ಆ. 12ರಂದು ಬೆಳಗ್ಗೆ 10ಕ್ಕೆ ನಗರದ ಮಂತ್ರ ರೆಸಿಡೆನ್ಸಿಯಲ್ಲಿ ಸೌಹಾರ್ದ ಸಹಕಾರಿಗಳ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ ಎಂದು ಸಹಕಾರಿಯ ಅಧ್ಯಕ್ಷ ಜಿ. ನಂಜನಗೌಡ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ, ಹಾವೇರಿ, ಗದಗ ಜಿಲ್ಲೆಗಳ ಸಹಕಾರಿಗಳು ಇದರಲ್ಲಿ ಪಾಲ್ಗೊಂಡು ಸಲಹೆ ಸೂಚನೆ ನೀಡಬಹುದು. ಆ. 29ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಏರ್ಪಡಿಸಿರುವ ಸಾಮಾನ್ಯ ಸಭೆಯಲ್ಲೂ ಸೌಹಾರ್ದ ಸಹಕಾರಿಗಳ ಪ್ರತಿನಿಧಿಗಳು ಭಾಗವಹಿಸಲು ಮುಕ್ತ ಅವಕಾಶ ಇದೆ. ಸಹಕಾರಿ ಕ್ಷೇತ್ರದ ಪರಿಚಯ, ಸಾಧನೆಗಳ ಬಗ್ಗೆ ಅಲ್ಲಿ ತಿಳಿಸಲಾಗುವುದು ಎಂದರು.

ಸದಸ್ಯ ಸಹಕಾರಿಗಳಿಗೆ ಕಾನೂನು ನೆರವು, ಸಲಹೆ ಹಾಗೂ ಮಾರ್ಗದರ್ಶನ, ಜಿಲ್ಲಾ ಒಕ್ಕೂಟಗಳ ಸ್ಥಾಪನೆ, ತರಬೇತಿ ಕಾರ್ಯಕ್ರಮ ಸೇರಿ ವಿವಿಧ ಕಾರ್ಯಕ್ರಮಗಳ ಮೂಲಕ ಸಹಕಾರ ತತ್ವದ ಪ್ರಸಾರಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಸಂಯುಕ್ತ ಸಹಕಾರಿ ಹಾಗೂ ಗದಗನಲ್ಲಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಡಿಸಿಬಿಎಂ ಕೋರ್ಸ್ ಆರಂಭಿಸಲಾಗಿದೆ. ಸಹಕಾರಿಗಳ ಸಿಬ್ಬಂದಿಗೆ 6 ತಿಂಗಳ ಡಿಪ್ಲೋಮಾ ಕೋರ್ಸ್ ಇದಾಗಿದೆ ಎಂದರು.

ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ರಾಜ್ಯ ಸಹಕಾರಿ ನಿರ್ದೇಶಕ ಮಲ್ಲಿಕಾರ್ಜುನ ಹೊರಕೇರಿ ಮಾತನಾಡಿ, ಧಾರವಾಡದಲ್ಲಿ 122 ಸೌಹಾರ್ದ ಸಹಕಾರಿಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಕೆಸಿಸಿ ಬ್ಯಾಂಕ್ ಈ ವರ್ಷ ಸುಮಾರು 14 ಕೋಟಿ ರೂ. ಲಾಭ ಗಳಿಸಿದ್ದು, ಶೇ. 2ರಷ್ಟು ಡಿವಿಡೆಂಡ್ ಹಂಚಿಕೆ ಮಾಡಿ ಯಶಸ್ಸಿನ ಹಾದಿಯಲ್ಲಿದೆ ಎಂದರು.