ಜಿಲ್ಲೆ

ವಿದ್ಯಾರ್ಥಿಗಳ ಸಹ ಕಲಿಕೆಯಿಂದ ಪ್ರತಿಭೆ ಹೊರಹೊಮ್ಮಲು ಸಾಧ್ಯ: ಪಾರ್ವತಿ ಅಪ್ಪಯ್ಯ

ಆದರ್ಶ್. ಎಂ.ಕೆ.

ಮಡಿಕೇರಿ: ಕಾಲೇಜಿನಲ್ಲಿ ನಡೆಸಲಾಗುವ ವಿವಿಧ ಉತ್ಸವಗಳು ಕೇವಲ ಮನರಂಜನೆಗಾಗಿ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ವಿದ್ಯಾರ್ಥಿಗಳು ಪಾಠ ಪ್ರವಚನದಲ್ಲಿ ಗಳಿಸುವ ಅಂಕದೊಂದಿಗೆ ಬೆಸ್ಟ್ ಮ್ಯಾನೇಜರ್ ನಂತ ವಿವಿಧ ಚಟುವಟಿಕೆಗಳಲ್ಲಿ ಜಯಶೀಲರಾಗುವುದನ್ನು ಕೂಡ ಇಂದು ಕಂಪನಿಗಳು ಉದ್ಯೋಗಕ್ಕೆ ಪ್ರಮುಖವಾಗಿ ಮಾನ್ಯ ಮಾಡುತ್ತವೆ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಹಾಗೂ ಮಾಜಿ ಪ್ರಾಂಶುಪಾಲೆ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ತಿಳಿಸಿದರು.


ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ವಾಣಿಜ್ಯ ಹಾಗೂ ವ್ಯವಹಾರ ನಿರ್ವಹಣೆ ವಿಭಾಗದ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಉತ್ಸವ ಸಂಕಲ್ಪ-೨೦೨೩ನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಸಹ ಕಲಿಕೆಯಿಂದ ಅವರಲ್ಲಿರುವ ಬಹುಮುಖ ಪ್ರತಿಭೆ ಹೊರಹೊಮ್ಮಿ ಮತ್ತಷ್ಟು ಸೃಜನಶೀಲಾತ್ಮಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯ. ವಿವಿಧ ಕಾಲೇಜಿನಿಂದ ಆಗಮಿಸಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರೆ ವಿದ್ಯಾರ್ಥಿಗಳಲ್ಲಿ ಗೆಳೆತನದ ಸಂಪರ್ಕ ಹೆಚ್ಚಾಗುತ್ತದೆಯಲ್ಲದೆ, ಸ್ನೇಹಮಯ ಗುಣ ಜೀವನದ ಪ್ರಗತಿಗೆ ಮತ್ತಷ್ಟು ಮೆರುಗು ಕಲ್ಪಿಸುತ್ತದೆ ಎಂದು ಕಿವಿಮಾತು ಹೇಳಿದರು.


ಕಾರ್ಯಕ್ರಮದ ಮತ್ತೋರ್ವ ಅತಿಥಿ ಕ್ಯಾಪಿಟಲ್ ವಿಲೇಜ್ ಮಾಲೀಕ ದೇವಯ್ಯ ಮಾತನಾಡಿ, ಈ ರೀತಿಯ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾದ ಚೀನಾ, ಜಪಾನ್, ಯುರೋಪ್ ಒಕ್ಕೂಟದ ರಾಷ್ಟ್ರಗಳು ಹೆಚ್ಚು ವಯಸ್ಕ ನಾಗರಿಕರನ್ನು ಹೊಂದಿದ್ದು, ಭಾರತ ಹೆಚ್ಚಿನ ಯುವ ಜನಾಂಗವನ್ನು ಹೊಂದಿದೆ. ಹೀಗಾಗಿ, ನಿಮ್ಮಂತಾ ಯುವ ಜನಾಂಗ ಉತ್ತಮ ಶಿಕ್ಷಣ ಹೊಂದಿ ಮತ್ತಷ್ಟು ಕ್ರಿಯಾಶೀಲರಾದರೆ ಅದು ವಿಶ್ವಮಟ್ಟದಲ್ಲಿ ಭಾರತದ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ವಿದ್ಯಾರ್ಥಿಗಳನ್ನು ಉತ್ತೇಜಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಮೇಜರ್.ಪ್ರೊ.ರಾಘವ. ಬಿ, ವಿದ್ಯಾರ್ಥಿಗಳಲ್ಲಿನ ಬಹುಮುಖ ಪ್ರತಿಭೆ ಹೊರಹೊಮ್ಮಲು ಇಂತಹಾ ಉತ್ಸವಗಳನ್ನು ವಿವಿಧ ವಿಭಾಗಗಳ ವತಿಯಿಂದ ಆಯೋಜಿಸಲಾಗುತ್ತಿದೆ. ಯಾವುದೇ ಅಂಜಿಕೆಯಿಲ್ಲದೆ ಎಲ್ಲಾ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಕೌಶಲ್ಯ, ನಾಯಕತ್ವ ಗುಣವನ್ನು ಬೆಳೆಸಿಕೊಂಡು ಜೀವನದಲ್ಲಿ ಯಶಸ್ಸು ಗಳಿಸುವಂತೆ ತಿಳಿಸಿದರು.


ಕಾರ್ಯಕ್ರಮ ಸಂಯೋಜಕರು ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಕೆ.ಶೈಲಶ್ರಿ, ವಿದ್ಯಾರ್ಥಿ ಸಂಯೋಜಕರಾದ ಅಂತಿಮ ಬಿ.ಕಾಂ ವಿದ್ಯಾರ್ಥಿನಿ ಅಪೂರ್ವ, ಮಂದಣ್ಣ, ವಾಣಿಜ್ಯ ವಿಭಾಗದ ಉಪನ್ಯಾಸಕ ನಿಖಿಲ್ ನಾಚಪ್ಪ ಇತರರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು, ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂಧಿಗಳು ಭಾಗವಹಿಸಿದರು.


ಬಹುಮಾನ: ವಾಣಿಜ್ಯ ಉತ್ಸವ ಸಂಕಲ್ಪ-೨೦೨೩ರಲ್ಲಿ ಮೈಸೂರಿನ ಶೇಷಾದ್ರಿ ಪುರಂ ಕಾಲೇಜು ಓವರ್ ಆಲ್ ವಿನ್ನರ್ ಆಗಿ ಹೊರಹೊಮ್ಮಿದರೆ, ಓವರ್ ಆಲ್ ರನ್ನರ್ಸ್ ಟ್ರೋಫಿಯನ್ನು ಮೈಸೂರಿನ ಕಾವೇರಿ ಕಾಲೇಜು ಪಡೆದುಕೊಂಡಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಉತ್ಸವದ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.