ವಿಜಯವಾಣಿ ಸುದ್ದಿಜಾಲ ಹೆಬ್ರಿ
ಹೆಬ್ರಿ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಅಕ್ಷರ ಸಾಹಿತ್ಯ ಸಂಘ ಮತ್ತು ಶರಣ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ವಚನ ಸಾಹಿತ್ಯ ಸಂಭ್ರಮ, ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.
ಉಡುಪಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಿರಂಜನ ಚೋಳಯ್ಯ ಮಾತನಾಡಿ, ವಚನ ಸಾಹಿತ್ಯ ವಿಶಿಷ್ಟ ಸಾಹಿತ್ಯವಾಗಿದ್ದು, ಸರಳ ಕನ್ನಡದಲ್ಲಿ ಜನರಿಗೆ ಮುಟ್ಟುವ ರೀತಿಯಲ್ಲಿ ರಚನೆಯಾದ ಸಾಹಿತ್ಯವಾಗಿದೆ. ಬದುಕಿನ ಸತ್ಯವನ್ನು ವಚನಗಳು ಸರಳವಾಗಿ ಹೇಳುತ್ತವೆ. ವಿದ್ಯಾರ್ಥಿಗಳಿಗೆ ಮೌಲ್ಯ ಶಿಕ್ಷಣಕ್ಕೆ ಪೂರಕವಾಗಿ ಇಂತಹ ಸಹ ಪಠ್ಯ ಚಟುವಟಿಕೆಗಳು ಅಗತ್ಯ ಎಂದರು.
ಸಂಪನ್ಮೂಲ ವ್ಯಕ್ತಿ ಪ್ರೀತಿ ಬಿರಾದಾರ ವಚನ ಸಾಹಿತ್ಯ ಮತ್ತು ಚಳವಳಿಯ ಬಗ್ಗೆ ಮಾತನಾಡಿ, ಸಾಮಾಜಿಕ ಅಂಕು ಡೊಂಕುಗಳನ್ನು ತಿದ್ದುವಲ್ಲಿ ವಚನ ಸಾಹಿತ್ಯ ಮತ್ತು ಚಳವಳಿಯ ಪಾತ್ರ ಬಹು ಮುಖ್ಯವಾದುದು. ಜನಸಾಮಾನ್ಯರಿಂದ ಸೃಷ್ಟಿಯಾದ ಸಾಹಿತ್ಯ ವಚನ. ಕಾಯಕ ತತ್ವವನ್ನು ಸಾರಿದ ಶರಣ ಸಾಹಿತ್ಯ ಇಂದಿಗೂ ಪ್ರಸ್ತುತ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ವಿಜಯೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ದಿವಾಕರ ಮರಕಾಲ ಎಸ್., ಅಕ್ಷರ ಸಾಹಿತ್ಯ ಸಂಘದ ಸಂಚಾಲಕ ಮಂಜುನಾಥ ಕುಲಾಲ್ ಶಿವಪುರ, ಅಕ್ಷರ ಸಾಹಿತ್ಯ ಸಂಘ ಅಧ್ಯಕ್ಷೆ ರಕ್ಷಿತಾ, ಕಾರ್ಯದರ್ಶಿ ಸಂಜನಾ ಉಪಸ್ಥಿತರಿದ್ದರು.
ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ವಿದ್ಯಾರ್ಥಿಗಳಿಗೆ ಪಠ್ಯ ಪೂರಕವಾಗಿ ವಚನ ಗಾಯನ, ಭಾಷಣ, ಪ್ರಬಂಧ, ಚಿತ್ರಕಲೆ ಸ್ಪರ್ಧೆಗಳ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಶರಣ್ಯಾ ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ ಕುಲಾಲ ಸ್ವಾಗತಿಸಿದರು. ಪ್ರವೀಣ ಶೆಟ್ಟಿ ವಂದಿಸಿದರು. ಸಂಗೀತಾ ಶೆಟ್ಟಿ ಬಹುಮಾನ ಪಟ್ಟಿ ವಾಚಿಸಿದರು. ಇಂಚನಾ ಪ್ರಾರ್ಥಿಸಿದರು.