ಜಿಲ್ಲೆ

ಸಾಹಿತ್ಯಕ್ಕೆ ಕೋ. ಚೆನ್ನಬಸಪ್ಪ ಕೊಡುಗೆ ಅಪಾರ

ಜಗದೀಶ ಹೊಂಬಳಿ

ಬೆಳಗಾವಿ: ಕೋ.ಚೆನ್ನಬಸಪ್ಪ ಅವರು ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. 89 ಕೃತಿಗಳನ್ನು ರಚಿಸಿದ್ದು ಇವರ ಸಾಹಿತ್ಯ ಕುರಿತಂತೆ ಸಂಶೋಧನಾ ಗ್ರಂಥಗಳು ಬಂದಿವೆ. ಇವರ ಸಮಗ್ರ ಸಾಹಿತ್ಯ ಗ್ರಂಥವನ್ನು ಕರ್ನಾಟಕ ಸರ್ಕಾರದ ಪುಸ್ತಕ ಪ್ರಾಧಿಕಾರದವರು ಹೊರತಂದಿದ್ದಾರೆ. ಸಾಹಿತ್ಯ, ಶರಣ ಸಾಹಿತ್ಯ, ಕಾನೂನುಗಳ ಕುರಿತಂತೆ ಕೋ. ಚೆನ್ನಬಸಪ್ಪನವರು ದೇಶ ವಿದೇಶಗಳಲ್ಲಿ ಉಪನ್ಯಾಸ ನೀಡಿದ್ದಾರೆ ಎಂದು ನಿವೃತ್ತ ಪ್ರಾಚಾರ್ಯ, ಸಾಹಿತಿ ಡಾ. ಬಸವರಾಜ ಜಗಜಂಪಿ ಹೇಳಿದರು.

ತಿಳಕವಾಡಿಯ ರಾ.ಲ. ಕಾನೂನು ಮಹಾವಿದ್ಯಾಲಯದ ಸಭಾಭವನದಲ್ಲಿ ಶುಕ್ರವಾರ ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಬೆಳಗಾವಿಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ಕೋ.ಚನ್ನಬಸ್ಸಪ್ಪ ಅವರ ಬದುಕು ಮತ್ತು ಸಾಹಿತ್ಯ’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೋ.ಚನ್ನಬಸಪ್ಪನವರಿಗೆ ಬೆಳಗಾವಿಯಲ್ಲಿಯ ಸಮಾನ ಮನಸ್ಕರ ಸ್ನೇಹಿತರು, ಸಾಹಿತ್ಯಿಕ ಸಮಾರಂಭಗಳು, ಗಡಿವಿವಾದ ಹೋರಾಟಗಳು ಅವರಿಗೆ ಬಹಳಷ್ಟು ಅನುಭವಗಳನ್ನು ನೀಡಿವೆ. ಇಲ್ಲಿಯ ಪರಿಸರ ಅವರ ವ್ಯಕ್ತಿತ್ವ ರೂಪಿಸಿಕೊಳ್ಳುವುದಕ್ಕೆ ಸಹಾಯ ಮಾಡಿವೆ ಎಂದರು.

ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯ ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್. ಕುಲಕರ್ಣಿ ಮಾತನಾಡಿ, ಕೋ.ಚನ್ನಬಸಪ್ಪ ಅವರು ರಾ.ಲ. ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಯೆಂಬುದು ನಮಗೆಲ್ಲ ಅಭಿಮಾನ, ಹೆಮ್ಮೆ ಪಡುವಂತಹ ಸಂಗತಿ ಎಂದು ಹೇಳಿದರು.

ಪ್ರೊ.ಪಿ.ಜಿ. ಕೆಂಪಣ್ಣವರ ಮಾತನಾಡಿ, ಕೋ.ಚೆ.ಅವರ ಸೃಜನೇತರ ಸಾಹಿತ್ಯವೂ ಗಮನಿಸುವಂತಹದ್ದು. ಸಾವಿತ್ರಿಯಂತಹ ಅಮೂಲ್ಯ ಗ್ರಂಥವನ್ನು ಕನ್ನಡಕ್ಕೆ ಅನುವಾದಿಸಿದ ಅವರ ಪ್ರತಿಭೆಗೆ ಸಾಕ್ಷಿಯಾಗಿದೆ ಎಂದರು.

ಡಾ. ಗುರುದೇವಿ ಹುಲೆಪ್ಪನವರಮಠ ಮಾತನಾಡಿದರು. ರಾ.ಲ. ಕಾನೂನು ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಡಿ. ಪ್ರಸನ್ನಕುಮಾರ, ಕೊ.ಚೆ.ನ್ಯಾಯಿಕ ಸಾಹಿತ್ಯ ವಿಷಯ ಕುರಿತು ಮಾತನಾಡಿದರು. ಕೊ.ಚೆ. ಒಡನಾಡ ಕುರಿತಂತೆ ಸಂಗಮದೇವ ಗುಡಗಿ ಮಾತನಾಡಿದರು. ರಾ.ಲ. ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅನಿಲಕುಮಾರ ಹವಾಲ್ದಾರ್ ಅಧ್ಯಕ್ಷತೆ ವಹಿಸಿದ್ದರು. ಅನನ್ಯಾ ಸಾವಳಗಿ ಮತ್ತು ಶೃಂಖಲಾ ಜೋಶಿ ಸ್ವಾಗತಿಸಿದರು. ಡಾ. ಬಸವರಾಜ ಸಾದರ ನಿರೂಪಿಸಿದರು. ರಾ.ಲ. ಕಾನೂನು ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಎಸ್.ಎಸ್. ಹೆಗಡೆ ವಂದಿಸಿದರು.