ಜಿಲ್ಲೆ

ಚಿಕ್ಕನಾಯಕನಹಳ್ಳಿ ಪುರಸಭೆ ಆದಾಯಕ್ಕೆ ಕತ್ತರಿ ; 2 ವರ್ಷ ಕಳೆದರೂ ಹರಾಜಾಗದ ಸಂತೆ, ಮಾರುಕಟ್ಟೆ ಸುಂಕ ವಸೂಲಿ

Tumakuru

ಚಿಕ್ಕನಾಯಕನಹಳ್ಳಿ : ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಅಧಿಕಾರಿಗಳ ಬೇಜಾವಾಬ್ದಾರಿಯಿಂದಾಗಿ ಪುರಸಭೆಗೆ ಬರಬೇಕಾಗಿದ್ದ ಲಕ್ಷಾಂತರ ರೂಪಾಯಿ ಆದಾಯಕ್ಕೆ ಕತ್ತರಿ ಬಿದ್ದಿದೆ. ಕಳೆದ ಎರಡು ವರ್ಷಗಳಿಂದ ವಾರದ ಸಂತೆ ಹಾಗೂ ಪ್ರತಿದಿನದ ಮಾರುಕಟ್ಟೆಯ ಸುಂಕ ವಸೂಲಿ ಹರಾಜು ನಡೆದೇ ಇಲ್ಲ.

ಪಟ್ಟಣದಲ್ಲಿ ಪ್ರತಿದಿನ ಲಕ್ಷಾಂತರ ರೂಪಾಯಿ ವಹಿವಾಟು ನಡೆಯುವ ಮಾರುಕಟ್ಟೆಯಲ್ಲಿ ಪುರಸಭೆ ಸುಂಕ ವಸೂಲಿ ಮಾಡುತ್ತಿತ್ತು. ಆದರೆ, ಎರಡು ವರ್ಷಗಳಿಂದ ಸುಂಕವಸೂಲಿ ನಡೆಯದೆ ಪುರಸಭೆಗೆ ಆದಾಯವಿಲ್ಲದಂತಾಗಿದೆ. ಪ್ರತಿವರ್ಷ ಹರಾಜಿನ ಮೂಲಕ 2-3 ಲಕ್ಷ ರೂಪಾಯಿ ಆದಾಯ ಬರುತ್ತಿತ್ತು. ಆದರೆ ಯಾವ ಕಾರಣಕ್ಕೆ ಇದನ್ನು ನಿಲ್ಲಿಸಿದ್ದಾರೆ ಎಂಬುದು ತಿಳಿದಿಲ್ಲ. ಇದೇ ರೀತಿ ವಾರದ ಸಂತೆಯು ಪಟ್ಟಣದ ತೀನಂಶ್ರೀ ಭವನದ ಆವರಣದಲ್ಲಿ ನಡೆಯುತ್ತಿತ್ತು. ಇದು ಹರಾಜಿನ ಮೂಲಕ ಸುಂಕ ವಸೂಲಿ ನಡೆಯುತ್ತಿದ್ದು, ಇಲ್ಲಿಯೂ ಪುರಸಭೆಗೆ ಮೂರರಿಂದ ನಾಲ್ಕು ಲಕ್ಷದವರೆಗೆ ಆದಾಯ ಬರುತ್ತಿತ್ತು. ಆದರೆ ಸಂತೆಯನ್ನು ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರಿಸಿದ್ದು, ಸುಂಕವಸೂಲಿ ಬಗ್ಗೆ ಸರಿಯಾದ ತೀರ್ಮಾನವಾಗದೆ ಇಲ್ಲಿನ ಆದಾಯಕ್ಕೂ ಕತ್ತರಿ ಬಿದ್ದಿದೆ.

ಪ್ರತಿದಿನ ನಡೆಯುವ ಮಾರುಕಟ್ಟೆಯ ಭಾಗದ ಸ್ವಚ್ಛತೆ, ಸಂತೆ ನಡೆಯುವ ಜಾಗದ ಸ್ವಚ್ಛತೆ ಮಾಡುತ್ತಿರುವ ಪುರಸಭೆಯೇ ಒಬ್ಬರನ್ನು ನೇಮಕ ಮಾಡಿ ನೇರವಾಗಿ ಸುಂಕ ವಸೂಲಿ ಮಾಡುವ ಕೆಲಸ ಮಾಡಿದ್ದರೆ ಪುರಸಭೆಗೆ ಆದಾಯ ಬರುತ್ತಿತ್ತು ಎನ್ನುತ್ತಾರೆ ಸಾರ್ವಜನಿಕರು.

ಸಂತೆಯನ್ನು ಎಪಿಎಂಸಿಗೆ ಸ್ಥಳಾಂತರಿಸುವಾಗ ಅದರ ಸುಂಕ ವಸೂಲಿಯು ಪುರಸಭೆಗೆ ಸೇರುತ್ತದೆ. ಈ ಬಗ್ಗೆ ಕ್ರಮವಹಿಸಲು ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ, ಎಪಿಎಂಸಿಯವರು ಒಪ್ಪದಿದ್ದಾಗ ಈ ಬಗ್ಗೆ ಆದೇಶ ಮಾಡಿಸಲು ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಕರೊನಾ ಹಿನ್ನೆಲೆಯಲ್ಲಿ ದಿನದ ಮಾರುಕಟ್ಟೆ ನಡೆಯುತ್ತಿರಲಿಲ್ಲ. ಆದ್ದರಿಂದ ಅದರತ್ತ ಗಮನಹರಿಸಿಲ್ಲ. ಮುಂದಿನ ದಿನಗಳಲ್ಲಿ ಅಧಿಕಾರಿಗಳಿಗೆ ತಿಳಿಸಿ ಪುರಸಭೆಗೆ ಆದಾಯ ಬರುವಂತೆ ಮಾಡಲಾಗುವುದು. ಕೆ.ಮಲ್ಲಿಕಾರ್ಜುನ ಸ್ವಾಮಿ, ಸ್ಥಾಯಿ ಸಮಿತಿ ಅಧ್ಯಕ್ಷ ವಾರದ ಸಂತೆ ಜಾಗ ಬದಲಾಯಿಸಿದ್ದು, ಈ ಬಗ್ಗೆ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅದು ತೀರ್ಮಾನವಾದ ನಂತರ ಕ್ರಮ ಕೈಗೊಳ್ಳಲಾಗುವುದು. ಪ್ರತಿದಿನದ ಮಾರುಕಟ್ಟೆ ಸುಂಕ ಹರಾಜನ್ನು ಕರೊನಾ ಹಿನ್ನೆಲೆಯಲ್ಲಿ ಮಾರುಕಟ್ಟೆಯು ಸರಿಯಾಗಿ ನಡೆಯದ ಕಾರಣ ಮಾಡಲಾಗಿರಲಿಲ್ಲ. ಈ ತಿಂಗಳಲ್ಲೇ ಮಾಡಲಾಗುವುದು. ಶ್ರೀನಿವಾಸ್, ಮುಖ್ಯಾಧಿಕಾರಿ