ಜಿಲ್ಲೆ

ಮೋದಿಯಿಂದ ಪ್ರತಿ ಚುನಾವಣೆಗೂ ಹೊಸ‌ ಕಥೆಯ ಭಾಷಣ: ಸಚಿವ ಸತೀಶ್ ಜಾರಕಿಹೊಳಿ ಟೀಕೆ

ಮಂಜುನಾಥ ಕೋಳಿಗುಡ್ಡ


ಬೆಳಗಾವಿ: ಸಿದ್ದರಾಮಯ್ಯ ನೇತೃತ್ವದ  ಕರ್ನಾಟಕ ಸರ್ಕಾರ ಬಡವರ ಪರ ಕೆಲಸ ಮಾಡುತ್ತಿದ್ದರೆ, ಪ್ರಧಾನಿ ನರೇಂದ್ರ ಮೋದಿ‌ ಚುನಾವಣೆಗೆ ಒಂದು ಭಾಷಣ ಮಾಡುತ್ತಾ ಜನರನ್ನು ವಂಚಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ‌ ಬಿಜೆಪಿ ವಿರುದ್ಧ ಗುಡುಗಿದರು.  ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಬೆಂಬಲಿಸಿ, ಸವದತ್ತಿ ಕ್ಷೇತ್ರದಲ್ಲಿ ಅತಿಹೆಚ್ಚು ಲೀಡ್ ಕೊಡಬೇಕು. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಸರ್ಕಾರಕ್ಕೆ ಶಕ್ತಿ ತುಂಬಬೇಕು ಎಂದು‌ ಸತೀಶ್ ಜಾರಕಿಹೊಳಿ ಮನವಿ ಮಾಡಿದರು.

ಇದೇ ವೇಳೆ ಪ್ರಾಸ್ತಾವಿಕ ಭಾಷಣ ಮಾಡಿದ ಸವದತ್ತಿ ಶಾಸಕ ವಿಶ್ವಾಸ್ ವೈದ್ಯ, ಯಲ್ಲಮ್ಮ ದೇವಿಯ ದೇವಸ್ಥಾನ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದು, ಸವದತ್ತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಸಿಗುವುದು ಗ್ಯಾರಂಟಿ ಎಂದು ಹೇಳಿದರು.

ರಾಮದುರ್ಗ ಶಾಸಕ ಅಶೋಕ್ ಪಟ್ಟಣ್ ಮಾತನಾಡಿ, ಕ್ಷೇತ್ರದಾದ್ಯಂತ ಕಾಂಗ್ರೆಸ್ ವಾತಾವರಣವಿದ್ದು, ಗೆಲ್ಲಲು ಉತ್ತಮ ವಾತಾವರಣವಿದೆ ಎಂದು ಹೇಳಿದರು. ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್ ಅವರನ್ನು ಗೆಲ್ಲಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಬಲಪಡಿಸಬೇಕು ಎಂದರು. ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ವಿನಯ್ ನಾವಲಗಟ್ಟಿ ಮಾತನಾಡಿದರು.

*ಎಲ್ಲೆಲ್ಲೂ ಜನಸಾಗರ*
ಯರಗಟ್ಟಿಯಲ್ಲಿ ಭಾನುವಾರ ಅಕ್ಷರಶಃ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಬಸವೇಶ್ವರ ಪ್ರೌಢ ಶಾಲಾ ಆವರಣದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ-2 ಕಾರ್ಯಕ್ರಮಕ್ಕೆ ಸುಮಾರು 15 ಸಾವಿರಕ್ಕೂ ಅಧಿಕ ಜನರು ಹಾಜರಿದ್ದರು. ಸುಮಾರು ಒಂದೂವರೆ ಗಂಟೆ ತಡವಾಗಿ ಕಾರ್ಯಕ್ರಮ ಆರಂಭಗೊಂಡರೂ ಸಮಾಧಾನಚಿತ್ತದಿಂದ ಕುಳಿತಿದ್ದ ಜನರು, ನೆಚ್ಚಿನ ನಾಯಕ ಸಿದ್ದರಾಮಯ್ಯ ನವರನ್ನು ನೋಡುತ್ತಿದ್ದಂತೆ ಶಿಳ್ಳೆ ಹೊಡೆದು ಸಂಭ್ರಮಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕೂಡ ಹಾಜರಿದ್ದರು. ಸಿದ್ದರಾಮಯ್ಯ ವೇದಿಕೆಗೆ ಆಗಮಿಸಿ ಜನರತ್ತ ಕೈ ಬೀಸಿದರು. ಸುಮಾರು‌ 25 ನಿಮಿಷಗಳ ಕಾಲ ಮಾತನಾಡಿದರು. ಸಿಎಂ ಭಾಷಣದುದ್ದಕ್ಕೂ ಹೌದು.. ಹುಲಿಯಾ..ಎಂದು ಜನರು ಉದ್ಗರಿಸಿದರು.