ಬೆಳಗಾವಿ: ನಗರದಲ್ಲಿ ಗಾಂಧಿ ಭಾರತ ಸಮಾವೇಶದ ಸಿದ್ಧತೆ ಕುರಿತಾಗಿ ಚರ್ಚಿಸಲು ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲೂ ಬೆಳಗಾವಿಯ ಕಾಂಗ್ರೆಸ್ ಕಚೇರಿ ನಿರ್ಮಾಣ ವಿಚಾರ ವಾದ ವಿವಾದಕ್ಕೆ ಎಡೆಮಾಡಿಕೊಟ್ಟಿತು.
ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಭಾಷಣ ಮಾಡುತ್ತಿದ್ದಾಗಲೇ ಎದ್ದುನಿಂತ ಪಕ್ಷದ ಮುಖಂಡ ಬಾಬುಲಾಲ ಬಾಗವಾನ್, ‘ಬೆಳಗಾವಿಯಲ್ಲಿ ಕಾಂಗ್ರೆಸ್ ಭವನ ನಿರ್ಮಿಸಿದ್ದು ಸಚಿವ ಸತೀಶ ಜಾರಕಿಹೊಳಿ. ವಿದ್ಯುತ್ ಶುಲ್ಕ ಸೇರಿದಂತೆ ಎಲ್ಲ ರೀತಿಯ ಖರ್ಚು–ವೆಚ್ಚ ನಿರ್ವಹಿಸುವುದು ಅವರೇ. ಇದಕ್ಕೆ ಕಾಂಗ್ರೆಸ್‌ನ ಉಳಿದ ಘಟಾನುಘಟಿ ನಾಯಕರ ಕೊಡುಗೆ ಏನು?’ ಎಂದು ಪ್ರಶ್ನಿಸಿದರು.
‘ಜಿಲ್ಲೆಯಲ್ಲಿ ಸತೀಶ ಜಾರಕಿಹೊಳಿ ಬಿಟ್ಟರೆ, ಪಕ್ಷಕ್ಕಾಗಿ ಯಾವ ನಾಯಕರೂ ಹಣ ಖರ್ಚು ಮಾಡುವುದಿಲ್ಲ. ಈ ಸಭೆಗೆ ಜಿಲ್ಲೆಯ ಶಾಸಕರು ಏಕೆ ಬಂದಿಲ್ಲ’ ಎಂದು ಕೇಳಿದರು.
'ಸತೀಶ ಜಾರಕಿಹೊಳಿ ಅವರೇ ಕಾಂಗ್ರೆಸ್ ಭವನದ ಖರ್ಚು–ವೆಚ್ಚ ನೋಡಿಕೊಳ್ಳುತ್ತಿದ್ದಾರೆ’ ಎಂದು ಸತೀಶ ಬೆಂಬಲಿಗರು ಹೇಳಿದಾಗ, ‘ಸತೀಶ ಖುಷಿಪಡಿಸಲು ನೀವು ಹೀಗೆ ಮಾತನಾಡುತ್ತಿದ್ದೀರಿ’ ಎಂದು ಸುರ್ಜೇವಾಲ ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಪಿಸಿಸಿ ಸದಸ್ಯೆ ಆಯೇಷಾ ಸನದಿ, ‘ಸತೀಶ ಜಾರಕಿಹೊಳಿ ಅವರ ಸಲುವಾಗಿ ನಾವು ಜೀವ ಬೇಕಾದರೂ ಕೊಡುತ್ತೇವೆ. ಇಷ್ಟೆಲ್ಲ ಜನರು ಅವರ ಸಲುವಾಗಿ ಬಂದಿದ್ದಾರೆ’ ಎಂದು ಟಾಂಗ್ ಕೊಟ್ಟರು. ಇಷ್ಟೆಲ್ಲ ಬೆಳವಣಿಗೆ ನಡೆದರೂ ಸತೀಶ ಜಾರಕಿಹೊಳಿ ಸುಮ್ಮನೇ ಕುಳಿತಿದ್ದರು.