ಜಿಲ್ಲೆ

ಕರಾವಳಿಯಲ್ಲಿ ಸಿಎನ್‌ಜಿ ಬಂಕ್ ಆರಂಭ

Dakshina Kannada

ಮಂಗಳೂರು: ಕಡಿಮೆ ವಾಯು ಮಾಲಿನ್ಯ ಮತ್ತು ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಬಹುದಾದ ಇಂಧನ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ) ವಿತರಿಸುವ ಕರಾವಳಿಯ ಮೊದಲ ಸ್ಟೇಷನ್ ಮಂಗಳೂರಿನಲ್ಲಿ ಮಂಗಳವಾರ ಕಾರ್ಯಾರಂಭಿಸಿದೆ. ನಗರ ಹೊರವಲಯದ ಅಡ್ಯಾರ್‌ಕಟ್ಟೆ ಬಳಿಯ ಇಂಡಿಯನ್ ಆಯಿಲ್‌ನ ನೇತ್ರಾವತಿ ಸರ್ವಿಸ್ ಸ್ಟೇಷನ್‌ನಲ್ಲಿ ಇಂಡಿಯನ್ ಆಯಿಲ್ ಸಂಸ್ಥೆಯ ಚೀಫ್ ಡಿವಿಷನಲ್ ರಿಟೈಲ್ ಸೇಲ್ಸ್ ಮ್ಯಾನೇಜರ್(ಸಿಡಿಆರ್‌ಎಸ್‌ಎಂ) ಅನೂಪ್ ಕುಶ್ವಾಹ್ ಸಿಎನ್‌ಜಿ ಬಂಕ್ ಉದ್ಘಾಟಿಸಿದರು.

ಮೊದಲ ದಿನ ಸಿಎನ್‌ಜಿಗೆ 1 ಕೆ.ಜಿ.ಗೆ 55 ರೂ. ದರವಿತ್ತು. ಶಂಕರ ಭಟ್ ಎಂಬುವವರು ಮೊದಲ ಗ್ರಾಹಕರಾಗಿ ಕಾರಿಗೆ ಸಿಎನ್‌ಜಿ ಹಾಕಿಸಿದರು. ಬುಧವಾರ ಎರಡನೇ ಸಿಎನ್‌ಜಿ ಬಂಕ್ ಕಾವೂರಿನಲ್ಲಿ ಆರಂಭವಾಗಲಿದೆ. ಪ್ರಸ್ತುತ ಟ್ಯಾಂಕರ್ ಮೂಲಕ ಸಿಎನ್‌ಜಿ ಪೂರೈಸಲಾಗುವುದು, ಪೈಪ್‌ಲೈನ್ ಕೆಲಸ ಪೂರ್ಣಗೊಂಡ ಬಳಿಕ ಸಂಪರ್ಕ ನೀಡಲಾಗುವುದು. ಪ್ರಸ್ತುತ ಸುರತ್ಕಲ್‌ನ ಆಟೋ ಫ್ಯೂಯೆಲ್ ಸೊಲ್ಯೂಷನ್ಸ್ ಸಂಸ್ಥೆಯಲ್ಲಿ ಸಿಎನ್‌ಜಿ ಕನ್ವರ್ಟರ್ ಕಿಟ್‌ಗಳು ಲಭ್ಯವಿವೆ ಎಂದು ಗೈಲ್ ಗ್ಯಾಸ್ ಡಿಜಿಎಂ ವಿಲೀನ್ ಝುಂಕೆ ಮಾಹಿತಿ ನೀಡಿದರು.

ಐಒಸಿ ಸೀನಿಯರ್ ಮ್ಯಾನೇಜರ್ ರೀಟೈಲ್ ಸೇಲ್ಸ್ ಸಿ.ಎನ್.ಶ್ರೀನಿವಾಸ್, ಅಸಿಸ್ಟೆಂಟ್ ಮ್ಯಾನೇಜರ್ ರೀಟೈಲ್ ಸೇಲ್ಸ್ ಪ್ರತಿಭಾ, ಬಂಕ್ ಮಾಲೀಕ ಬಾಬು ಮತ್ತಿತರರಿದ್ದರು. ಮಾಂಡೋವಿ ಮೋಟರ್ಸ್‌ ಸಹಾಯಕ ಮಾರಾಟ ಪ್ರಬಂಧಕ ಮುರಳೀಧರ್ ಬಿ.ಜೆ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

10 ಸ್ಟೇಷನ್ ಶೀಘ್ರ: ಮಾರ್ಚ್ ಅಂತ್ಯದ ವೇಳೆಗೆ 10 ಸ್ಟೇಷನ್‌ಗಳು ಮಂಗಳೂರು ಮತ್ತು ಜಿಲ್ಲೆಯ ವಿವಿಧೆಡೆ ಕಾರ್ಯಾರಂಭಿಸಲಿವೆ. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ 80-100 ಸ್ಟೇಷನ್‌ಗಳು ನಿರ್ಮಾಣ ಮಾಡಲಾಗುವುದು ಎಂದು ಗೈಲ್ ಗ್ಯಾಸ್‌ನ ಚೀಫ್ ಜನರಲ್ ಮ್ಯಾನೇಜರ್(ಸಿಜಿಡಿ ಪ್ರಾಜೆಕ್ಟ್ಸ್) ಕಪಿಲ್ ಕುಮಾರ್ ಜೈನ್ ತಿಳಿಸಿದರು.