ಮಡಿಕೇರಿ: ಕಾವೇರಿ ತುಲಾ ಸಂಕ್ರಮಣದ ಹಿನ್ನೆಲೆ ಕಾವೇರಿ ತೀರ್ಥೋದ್ಭವದ ಮರುದಿನವಾದ ಶುಕ್ರವಾರ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ದೇವಟ್ ಪರಂಬುವಿನ ದುರಂತ ಸ್ಥಳದಲ್ಲಿ ದೋಸೆ ಮತ್ತು ಪುಟ್ಟ್ ಭಕ್ಷ್ಯಗಳನ್ನಿಟ್ಟು ವಿಶೇಷ ಪ್ರಾರ್ಥನೆ ಸಲ್ಲಿಸಿತು.
ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಕೊಡವ ಸಾಂಪ್ರದಾಯಿಕ ಉಡುಪಿನೊಂದಿಗೆ ದೇವಟ್ ಪರಂಬುವಿಗೆ ತೆರಳಿದ ಪ್ರಮುಖರು ಬೊತ್ತ್ ಬಳ್ಳಿ ಎಂದು ಕರೆಯಲಾಗುವ ಗಿಡಮೂಲಿಕೆಗಳಿಂದ ಹೆಣೆದಿರುವ ಬೊತ್ತ್ ಕಂಬದಲ್ಲಿ ದೋಸೆ ಮತ್ತು ಪುಟ್ಟ್ ಶಾಸ್ತ್ರೋಕ್ತವಾಗಿ ಇರಿಸಿ ಪ್ರಾರ್ಥಿಸಿದರು.
ಈ ಸಂದರ್ಭ ಮಾತನಾಡಿದ ಎನ್.ಯು.ನಾಚಪ್ಪ ಅವರು, ಕಾವೇರಿ ತೀರ್ಥೋದ್ಭವದ ಮರುದಿನ ಹಿರಿಯರಿಗೆ ದೋಸೆ ಮತ್ತು ಪುಟ್ಟ್ ಇಡುವ ಕ್ರಮ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಇದೊಂದು ಜಾನಪದ ಪದ್ಧತಿ. ಪ್ರತಿ ವರ್ಷ ಕಾವೇರಿ ತೊಲೆಯಾರ್ ಚಂಗ್ರಾಂದಿ ಆಚರಣೆಗೆ ಸಂಬಂಧಿಸಿದಂತೆ ಕೊಡವರು ತಮ್ಮ ಜೌಗು ಪ್ರದೇಶಗಳು, ಭತ್ತದ ಗದ್ದೆಗಳು, ಭತ್ತದ ಖಣಜ, ದನದ ಸಗಣಿ ಗುಂಡಿ, ದನದ ಕೊಟ್ಟಿಗೆ, ಕುಡಿಯುವ ನೀರಿನ ಬಾವಿ, ಗೇಟ್‌ಗಳು ಮತ್ತು ಅವರ ವಸತಿ ಗೃಹಗಳ ಮುಂಭಾಗದ ಪ್ರದೇಶದಲ್ಲಿ ೨ ಅಥವಾ ೩ ದಿನಗಳ ಮೊದಲು ಬೊತ್ತ್ ಕುತ್ತುವುದು ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿದೆ ಎಂದರು.
ತಲಕಾವೇರಿ ತೀರ್ಥಯಾತ್ರೆಗೆ ಭೇಟಿ ನೀಡುವ ಪ್ರತಿಯೊಬ್ಬ ಕೊಡವ ಪುರುಷರು ಹಾಗೂ ಮಹಿಳೆಯರು ದೇವಟ್ ಪರಂಬು ನರಮೇಧದ ಸ್ಮಾರಕ ಸ್ಥಳದಲ್ಲಿ ಗೌರವಪೂರ್ವಕವಾಗಿ ಹಸಿರು ಎಲೆಗಳನ್ನು ಅರ್ಪಿಸುತ್ತಾರೆ. ಕೊಡವ ಜನಾಂಗೀಯ ಬುಡಕಟ್ಟು ಜನರು ಈ ಸ್ಥಳವನ್ನು ಅತ್ಯಂತ ಪವಿತ್ರವಾದ ಗರ್ಭಗುಡಿ ಎಂದು ಪರಿಗಣಿಸುತ್ತಾರೆ ಎಂದು ತಿಳಿಸಿದರು.
ದೇವಟ್ ಪರಂಬು ದುರಂತ ನರಮೇಧ ಸ್ಮಾರಕ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಂತರ ಸ್ಥಳದಲ್ಲೇ ಕಾವೇರಿಯ ಪವಿತ್ರ ತೀರ್ಥವನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಪಟ್ಟಮಾಡ ಕುಶ, ಮಂದಪಂಡ ಮನೋಜ್, ಬೊಳ್ಳಾರ್ಪಂಡ ಚೆಂಗಪ್ಪ, ಮಂದಪಂಡ ಸೂರಜ್, ಮಣವಟ್ಟೀರ ಚಿಣ್ಣಪ್ಪ, ಚೀಯಬೇರ ಸತೀಶ್, ಪುಟ್ಟಿಚಂಡ ದೇವಯ್ಯ, ಬೊಳ್ಳಾರ್ಪಂಡ ಮಾಚಯ್ಯ ಭಾಗವಹಿಸಿದ್ದರು.