ಜಿಲ್ಲೆ

ಕೊಡವರ ಪಾದಯಾತ್ರೆಗೆ ಸಿಎನ್‌ಸಿ ಬೆಂಬಲ

ಆದರ್ಶ್. ಎಂ.ಕೆ.

ಮಡಿಕೇರಿ: ಮಡಿಕೇರಿಯಲ್ಲಿ ಫೆ.೭ ರಂದು ನಡೆಯುವ ಕೊಡವರ ಒಮ್ಮತದ ಬೃಹತ್ ರ‌್ಯಾಲಿಗೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಬೆಂಬಲವನ್ನು ನೀಡಲಿದೆ ಮತ್ತು ಒಗ್ಗಟ್ಟು ವ್ಯಕ್ತಪಡಿಸಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಿಎನ್‌ಸಿ ಸಂಘಟನೆ ಕಳೆದ ೩೫ ವರ್ಷಗಳಿಂದ ಆದಿಮಸಂಜಾತ ಕೊಡವ ಸಮುದಾಯದ ಸಂವಿಧಾನಿಕ ಹಕ್ಕುಗಳು ಮತ್ತು ಹಿತಾಸಕ್ತಿಗಳಿಗಾಗಿ ಪ್ರತಿಪಾದಿಸುತ್ತಾ ಬಂದಿದೆ. ೧೯೫೬ ರಲ್ಲಿ ಕೊಡವ ತಾಯ್ನಡಿನ ವಿಲೀನದ ನಂತರ ನಗಣ್ಯ ಸಂಖ್ಯೆಯಾಗಿ ಉಳಿದಿರುವ ಕೊಡವರು ಆಪತ್ತಿನ ಅಂಚಿನಲ್ಲಿದ್ದು, ತಾರತಮ್ಯವನ್ನು ಎದುರಿಸುತ್ತಿದ್ದಾರೆ. ರಾಜ್ಯದ ಪ್ರಬಲ ಸಮುದಾಯ ತಮ್ಮ ಜನಸಂಖ್ಯಾ ತೂಕದ ಮೂಲಕ ಕೊಡವರನ್ನು ಹತೋಟಿಯಲ್ಲಿಟ್ಟುಕೊಳ್ಳಲು, ಮೇಲುಗೈ ಸಾಧಿಸಲು, ನಮ್ಮ ಪೂರ್ವಜರ ತಾಯ್ನಡು ಕೊಡವಲ್ಯಾಂಡ್‌ನ ಮೇಲೆ ಪ್ರಾಬಲ್ಯ ಪ್ರತಿಪಾದಿಸಲು, ಜನಾಂಗೀಯ ಪ್ರಭಾವವನ್ನು ಆದಿಮಸಂಜಾತ ಕೊಡವ ಜನರ ಮೇಲೆ ಹೇರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಅತಿಸೂಕ್ಷ್ಮ, ಆದಿಮಸಂಜಾತ ಮತ್ತು ಅಳಿವಿನಂಚಿನಲ್ಲಿರುವ ಕೊಡವರು ಸ್ವಂತ ತಾಯ್ನಡಿನಲ್ಲಿ ರಾಜ್ಯಾಂಗದತ್ತ ಹಕ್ಕನ್ನು ಮರು ಸ್ಥಿರೀಕರಿಸಲು ಸಿಎನ್‌ಸಿ ಸಂಘಟನೆಯು ಶಾಂತಿಯುತ ಮತ್ತು ಅವಿಶ್ರಾಂತವಾಗಿ ಪ್ರಯತ್ನಿಸುತ್ತಿದೆ. ಕೊಡವಲ್ಯಾಂಡ್‌ಗೆ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡಬೇಕು. ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕು ಕಲ್ಪಿಸಬೇಕು. ಕೊಡವರ ಸಾಂವಿಧಾನಿಕ ಹಕ್ಕು, ಭೂಮಿಯ ಹಕ್ಕುಗಳು ಮತ್ತು ಭಾಷೆ-ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಬೇಕು ಎಂದು ಸಿಎನ್‌ಸಿ ಒತ್ತಾಯಿಸುವುದಾಗಿ ತಿಳಿಸಿದ್ದಾರೆ.