ಮಡಿಕೇರಿ: ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಎಸ್.ಟಿ ಟ್ಯಾಗ್, ಕೊಡವರ ಆಂತರಿಕ ರಾಜಕೀಯ ಸ್ವಯಂ ನಿರ್ಣಯದ ಹಕ್ಕುಗಳನ್ನು ಮಾನ್ಯ ಮಾಡಬೇಕು ಸೇರಿದಂತೆ ಇಡೀ ಕೊಡವ ಜನಾಂಗದ ಯೋಗಕ್ಷೇಮಕ್ಕಾಗಿ ತಲಕಾವೇರಿ ಮತ್ತು ಪಾಡಿ ಶ್ರೀಇಗ್ಗುತ್ತಪ್ಪ ದೇವನೆಲೆಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವಿಶೇಷ ಪ್ರಾರ್ಥನೆ ಸಲ್ಲಿಸಿತು.
ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಆದಿಮಸಂಜಾತ ಕೊಡವರ ಪವಿತ್ರ ತೀರ್ಥಕ್ಷೇತ್ರ ತಲಕಾವೇರಿ ಹಾಗೂ ಶ್ರೀಇಗ್ಗುತ್ತಪ್ಪ ದೇವನೆಲೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಮುಖರು ರಾಜ್ಯಾಂಗದತ್ತವಾಗಿ ಕರ್ನಾಟಕದ ಅಧೀನದಲ್ಲಿ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಎಸ್.ಟಿ ಟ್ಯಾಗ್ ಮತ್ತು ಕೊಡವರ ಆಂತರಿಕ ರಾಜಕೀಯ ಸ್ವಯಂ ನಿರ್ಣಯದ ಹಕ್ಕನ್ನು ಮಾನ್ಯ ಮಾಡುವುದರೊಂದಿಗೆ ಕೊಡವ ಜನಾಂಗದ ಅಭ್ಯುದಯಕ್ಕೆ ಆಶೀರ್ವದಿಸುವಂತೆ ಕೋರಿದರು.
ಭೂಪರಿವರ್ತನೆ ವಿರುದ್ಧ ಜನಜಾಗೃತಿ: ಕೊಡಗು ಜಿಲ್ಲೆಯಾದ್ಯಂತ ನಡೆಯುತ್ತಿರುವ ಭೂಪರಿವರ್ತನೆಗಳ ವಿರುದ್ಧ ಜೂ.೩ ರಿಂದ ಜಿಲ್ಲಾವ್ಯಾಪಿ ಸಿಎನ್‌ಸಿ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಜೂ.೩ರಂದು ಬಿರುನಾಣಿ, ಜೂನ್ ೧೦ ರಂದು ಬಾಳೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಭೂಪರಿವರ್ತನೆಯ ಮೂಲಕ ದೈತ್ಯಾಕಾರದ ವಿಲ್ಲಾಗಳು, ಮೆಗಾ ಟೌನ್‌ಶಿಪ್‌ಗಳು ಮತ್ತು ಮನೆ ನಿವೇಶನಗಳನ್ನು ನಿರ್ಮಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಕೊಡಗಿನಾದ್ಯಂತ ಎಲ್ಲಾ ಕುಗ್ರಾಮಗಳು ಮತ್ತು ಹಳ್ಳಿಗಳು ನಾಶವಾಗುತ್ತಿವೆ. ಇದು ನಮ್ಮ ಪವಿತ್ರ ಭೂದೃಶ್ಯವನ್ನು ನಾಶಪಡಿಸುತ್ತಿದೆ. ಮಣ್ಣು ಅಗೆಯುವ ಕೆಲಸದಿಂದ ನಮ್ಮ ಬಹುವಾರ್ಷಿಕ ಜಲಮೂಲಗಳ ನರ ಕೇಂದ್ರಗಳು ಈಗಾಗಲೇ ಮುಚ್ಚಿವೆ ಎಂದು ನಾಚಪ್ಪ ಆರೋಪಿಸಿದರು.
ಇದಕ್ಕಾಗಿ ಕೊಡವ ಸೀಮೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜಾಗೃತಿ ಯಾತ್ರೆ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ನಾವು ಕಾವೇರಿ ಮತ್ತು ಇಗ್ಗತ್ತಪ್ಪ ದೇವರ ಸನ್ನಿಧಿಯಲ್ಲಿ ಪವಿತ್ರ ಪ್ರತಿಜ್ಞೆ ಮಾಡಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭ ಪಟ್ಟಮಾಡ ಕುಶ, ಚಂಬಂಡ ಜನತ್, ಮಂದಪಂಡ ಮನೋಜ್, ಕಾಂಡೇರ ಸುರೇಶ್, ಬೇಪಡಿಯಂಡ ಬಿದ್ದಪ್ಪ, ಬಾಚಮಂಡ ರಾಜ ಪೂವಣ್ಣ, ಬೇಪಡಿಯಂಡ ದಿನು, ಪಾರ್ವಂಗಡ ನವೀನ್, ನಂದೇಟಿರ ರವಿ, ಶ್ರೀಮತಿ ನಂದೇಟಿರ ಕವಿತಾ ಸುಬ್ಬಯ್ಯ, ಪುಟ್ಟಿಚಂಡ ದೇವಯ್ಯ, ಅಪ್ಪಾರಂಡ ವಿಜು, ಅಪ್ಪಾರಂಡ ಪ್ರಸಾದ್, ಅಪ್ಪಾರಂಡ ಪ್ರಕಾಶ್, ನಾಟೋಳಂಡ ಶಂಭು ಉಪಸ್ಥಿತರಿದ್ದರು.