ಜಿಲ್ಲೆ

ಮಾತೃಭಾಷಾ ದಿನಾಚರಣೆಯಂದು ಸಿಎನ್‌ಸಿ ಸತ್ಯಾಗ್ರಹ

reportermys

ಮಡಿಕೇರಿ: ಸಂವಿಧಾನದ ೮ನೇ ಶೆಡ್ಯೂಲ್‌ಗೆ ಕೊಡವ ತಕ್(ಕೊಡವ ಭಾಷೆ)ನ್ನು ಸೇರಿಸಬೇಕೆಂದು ಒತ್ತಾಯಿಸಿ ಅಂತರರಾಷ್ಟ್ರೀಯ ಮಾತೃಭಾಷಾ ದಿನವಾದ ಫೆ.೨೧ ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಸತ್ಯಾಗ್ರಹ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.


ಅಂದು ಬೆಳಗ್ಗೆ ೧೦.೩೦ ಗಂಟೆಯಿಂದ ೧೧.೩೦ ರವರೆಗೆ ಸತ್ಯಾಗ್ರಹ ನಡೆಯಲಿದ್ದು, ಅತ್ಯಂತ ಸೂಕ್ಷ್ಮ ಜನಾಂಗವಾಗಿರುವ ಕೊಡವರ ಮಾತೃಭಾಷೆ ಕೊಡವ ತಕ್‌ಗೆ ಸಂವಿಧಾನದ ಭದ್ರತೆ ನೀಡಬೇಕೆಂದು ಒತ್ತಾಯಿಸಿ ಸರ್ಕಾರದ ಗಮನ ಸೆಳೆಯಲಾಗುವುದೆಂದು ತಿಳಿಸಿದ್ದಾರೆ.


ಕೊಡವ ಭಾಷೆಯನ್ನು ಅಧಿಕೃತವೆಂದು ಘೋಷಿಸಿ ಕೊಂಕಣಿ ಭಾಷೆಯ ಮಾದರಿಯಲ್ಲಿ ರಾಜ್ಯದ ೩ನೇ ಆಡಳಿತ ಭಾಷೆಯನ್ನಾಗಿ ಮಾಡಬೇಕು. ಸಂವಿಧಾನದ ೩೪೫, ೩೫೦, ೩೫೦ ಎ, ೩೫೦ ಬಿ ವಿಧಿಯಡಿ ೧ನೇ ತರಗತಿಯಿಂದಲೇ ಪಠ್ಯಕ್ರಮದಲ್ಲಿ ಕೊಡವ ತಕ್‌ನ್ನು ಕಡ್ಡಾಯಗೊಳಿಸಬೇಕು. ವಿಶ್ವಸಂಸ್ಥೆಯ ಅಧಿಕೃತ ಭಾಷೆ ಎಂದು ಘೋಷಿಸಬೇಕು, ಪ್ರಾಚೀನ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಕೊಡವ ತಕ್ ಅಧ್ಯಯನ ಪೀಠ ಸ್ಥಾಪಿಸಬೇಕು. ಮಡಿಕೇರಿಯಲ್ಲಿ ವಿಶ್ವ ಕೊಡವಾಲಜಿ ಅಧ್ಯಯನ ಕೇಂದ್ರ ಸ್ಥಾಪಿಸಬೇಕು. ಎಸ್‌ಟಿ ಟ್ಯಾಗ್‌ನೊಂದಿಗೆ ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕುಗಳನ್ನು ನೀಡಬೇಕೆಂದು ಸತ್ಯಾಗ್ರಹದಲ್ಲಿ ಒತ್ತಾಯಿಸುವುದಾಗಿ ನಾಚಪ್ಪ ತಿಳಿಸಿದ್ದಾರೆ.