ಮಡಿಕೇರಿ: ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ನೀಡಬೇಕು ಮತ್ತು ಕೊಡವರ ಹಕ್ಕುಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸಿ ಧರಣಿ ಸತ್ಯಾಗ್ರಹ ನಡೆಸಿದ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ, ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ನೂತನ ಸರ್ಕಾರಕ್ಕೆ ಸಲ್ಲಿಸಿದೆ.
ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪರವರ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದ ಪ್ರಮುಖರು ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ಪರ ಘೋಷಣೆಗಳನ್ನು ಕೂಗಿದರು.
ಕೊಡವರ ನ್ಯಾಯ ಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಕಳೆದ ೩೩ ವರ್ಷಗಳಿಂದ ಸಿಎನ್‌ಸಿ ಸಂಘಟನೆ ಶಾಂತಿಯುತ ಹೋರಾಟಗಳನ್ನು ನಡೆಸಿಕೊಂಡು ಬಂದಿದೆ. ಆದರೆ ನಮ್ಮ ನೋವಿಗೆ ಸೂಕ್ತ ಸ್ಪಂದನೆ ನೀಡುವ ಕಾರ್ಯವನ್ನು ಯಾವ ಆಡಳಿತ ವ್ಯವಸ್ಥೆಯೂ ಮಾಡಿಲ್ಲ. ಇದೀಗ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ನೂತನ ಸರ್ಕಾರ ಹಾಗೂ ಜಿಲ್ಲೆಯ ಇಬ್ಬರು ಶಾಸಕರು ಬೇಡಿಕೆಗಳಿಗೆ ಸ್ಪಂದಿಸಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ನಾಚಪ್ಪ ತಿಳಿಸಿದರು.
ಈಶಾನ್ಯ ಭಾರತದಲ್ಲಿ ಅಸ್ತಿತ್ವದಲ್ಲಿರುವ ೧೦ ಸ್ವಾಯತ್ತ ಪ್ರದೇಶಗಳು/ಪ್ರಾದೇಶಿಕ ಕೌನ್ಸಿಲ್‌ಗಳ ಮತ್ತು ಲೇಹ್ ಹಾಗೂ ಲಡಾಖ್ ಸ್ವಾಯತ್ತ ಪ್ರದೇಶಗಳ ಸಾಲಿನಲ್ಲಿ ಕರ್ನಾಟಕದ ಸ್ವಾಯತ್ತತೆಯೊಳಗೆ ಸಂವಿಧಾನದಡಿಯಲ್ಲಿ ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಆಂತರಿಕ ರಾಜಕೀಯ ಸ್ವಯಂ ನಿರ್ಣಯದ ಹಕ್ಕುಗಳನ್ನು ಭಾರತದ ಸಂವಿಧಾನ ಪರಮಾರ್ಶೆ ಆಯೋಗದ ಶಿಫಾರಸ್ಸಿನಂತೆ ಜಾರಿ ಮಾಡಲು ಕ್ರಮ ಕೈಗೊಳ್ಳಬೇಕು. ಕೊಡಗಿನ ಆದಿಮ ಸಂಜಾತ ಮೂಲನಿವಾಸಿ ಕೊಡವ ಜನಾಂಗವನ್ನು ಸಂವಿಧಾನದ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಬೇಕು. ಕೊಡವರನ್ನು ಬುಡಕಟ್ಟು ಪಟ್ಟಿಗೆ ಸೇರಿಸಲು ನ್ಯಾಯಾಲಯದ ಆದೇಶದಂತೆ ಕೊಡವ ಜನಾಂಗದ ಸಮಗ್ರ ಕುಲಶಾಸ್ತ್ರ ಅಧ್ಯಯನವನ್ನು ನ್ಯಾಯಯುತ ಮತ್ತು ಸಮಗ್ರ ರೀತಿಯಲ್ಲಿ ಪುನರಾಂಭಿಸಬೇಕು ಎಂದು ಆಗ್ರಹಿಸಿದರು.
ಮಾತೃಭಾಷೆ ಕೊಡವ ತಕ್ಕ್ ಅನ್ನು ಸಂವಿಧಾನದ ೮ನೇ ಶೆಡ್ಯೂಲ್‌ಗೆ ಸೇರಿಸಬೇಕು. ಸಂವಿಧಾನದ ೩೪೭, ೩೫೦, ೩೫೦ಂ ಮತ್ತು ೩೫೦ಬಿ ವಿಧಿಗಳಡಿಯಲ್ಲಿ ಪಠ್ಯಕ್ರಮ ಮತ್ತು ಆಡಳಿತದಲ್ಲಿ ಕೊಡವ ತಕ್ ಅನ್ನು ಪರಿಚಯಿಸಬೇಕು. ನಯನ ಮನೋಹರವಾದ ಕೊಡವ ಜಾನಪದ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಬೇಕು. ಕೊಡವ ಜಾನಪದ ಪರಂಪರೆಯನ್ನು ಜೀವಂತಗೊಳಿಸಲು, ವಿಶ್ವ ಕೊಡವಾಲಜಿ/ಕೊಡವ ಶಾಸ್ತ್ರದ ಜಾಗತಿಕ ಸಂಶೋಧನಾ ಕೇಂದ್ರ ಮತ್ತು ಕೊಡವ ಸುಧಾರಿತ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲು ಸರ್ಕಾರ ಭೂಮಿ ನೀಡಬೇಕು ಎಂದು ಒತ್ತಾಯಿಸಿದರು.
ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆಯಲ್ಲಿನ ಅರಮನೆಯ ಸಂಚಿನಲ್ಲಿನ ಮುಗ್ಧ ಕೊಡವರ ರಾಜಕೀಯ ಹತ್ಯೆಗಳ ಸ್ಮಾರಕಗಳು ನಿರ್ಮಾಣವಾಗಬೇಕು. ೩೨ ಬಾರಿ ಹೈದರ್ ಮತ್ತು ಟಿಪ್ಪುವನ್ನು ಹಿಮ್ಮೆಟ್ಟಿಸಿದ ಕೊಡವ ಶೌರ್ಯವನ್ನು ಪ್ರತಿಬಿಂಬಿಸುವ ಉಲುಗುಲಿ/ಸುಂಟಿಕೊಪ್ಪ ಮತ್ತು ಮುಳ್ಳುಸೋಗೆಯಲ್ಲಿ ಯುದ್ಧ ಸ್ಮಾರಕಗಳನ್ನು ಸ್ಥಾಪಿಸಬೇಕು. ನಮ್ಮ ಸಂವಿಧಾನದ ೪೯ ವಿಧಿ ಮತ್ತು ವೆನಿಸ್ ಘೋಷಣೆ ೧೯೬೪ ರಂತೆ ದೇವಾಟ್ ಪರಂನಲ್ಲಿ ಅಂತರರಾಷ್ಟ್ರೀಯ ಕೊಡವ ನರಮೇಧ ದುರಂತ ಸ್ಮಾರಕಗಳನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಒಟ್ಟು ೯ ಬೇಡಿಕೆಗಳ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇ ಗೌಡರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು. ಸಿಎನ್‌ಸಿ ಪ್ರಮುಖರಾದ ಪಟ್ಟಮಾಡ ಲಲಿತ ಗಣಪತಿ, ಕಲಿಯಂಡ ಮೀನಾ ಪ್ರಕಾಶ್, ಡಾ.ನೆರವಂಡ ವೀಣಾ ಪೂಣಚ್ಚ, ಬೊಪ್ಪಂಡ ಬೊಳ್ಳಮ್ಮ, ಕೂಪದಿರ ಪುಷ್ಪ ಮುತ್ತಣ್ಣ, ಅಪ್ಪಚ್ಚಿರ ರೀನ ನಾಣಯ್ಯ, ಕಲಿಯಂಡ ಪ್ರಕಾಶ್, ಅಪ್ಪಚ್ಚಿರ ರಮ್ಮಿ ನಾಣಯ್ಯ, ಪಟ್ಟಮಾಡ ಕುಶ, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್ ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.
೨೬ಆದರ್ಶ್‌ಕೆಡಿಜಿಎ೧: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಿಎನ್‌ಸಿ ಪ್ರಮುಖರು ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇ ಗೌಡರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು