ಜಿಲ್ಲೆ

ಸಿಎನ್‌ಸಿ ನಾಲ್ಕನೇ ಹಂತದ ಪಾದಯಾತ್ರೆ

ಮಡಿಕೇರಿ:

ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ ಸಂವಿಧಾನದತ್ತವಾದ ೯ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಡೆಸುತ್ತಿರುವ ಪಾದಯಾತ್ರೆಯ ನಾಲ್ಕನೇ ಹಂತ ಕುಂದದಿಂದ ಶುಕ್ರವಾರದಿಂದ ಆರಂಭವಾಯಿತು.

ಬೊಟ್ಟಿಯತ್‌ನಾಡ್ (ಕುಂದ), ಕುತ್‌ನಾಡ್ (ಬಿ.ಶೆಟ್ಟಿಗೇರಿ) ಮತ್ತು ಬೆರಳಿನಾಡ್ (ಕಂಡಂಗಾಲ) ನ ಮೂರು ನಾಡುಗಳ ಮಂದ್ ‘‘ಕೈಮುಡಿಕೆ ಮಂದ್" ನಲ್ಲಿ ಕೊಡವ ಜನಜಾಗೃತಿ ಸಭೆ ನಡೆಯಿತು. ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸಭೆ ಆರಂಭಿಸಿದ ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ, ಕೊಡವ ಲ್ಯಾಂಡ್ ಸೇರಿದಂತೆ ೯ ಬೇಡಿಕೆಗಳ ಹಕ್ಕೊತ್ತಾಯಗಳನ್ನು ವಿವರಿಸಿದರು. ಕೊಡವರು ಕೊಡವ ನೆಲದ ಪ್ರಾಚೀನ ಬುಡಕಟ್ಟು ಜನರಾಗಿದ್ದು, ಕೊಡವ ಮಂದ್ ಗಳು, ಜಲದೇವತೆ ಕಾವೇರಿ, ಸೂರ್ಯ, ಚಂದ್ರ, ಭೂಮಿತಾಯಿಯಷ್ಟೇ ಪವಿತ್ರವೂ ಆಗಿದ್ದಾರೆ. ಪ್ರಾಚೀನ ಬುಡಕಟ್ಟು ಕೊಡವ ಜನಾಂಗವನ್ನು ಈ ದೇಶದ ಜನ ಹಾಗೂ ಸರ್ಕಾರ ಸಂವಿಧಾನದ ೫೧ ಎ.ಎಫ್ ವಿಧಿ ಮತ್ತು ವಿಶ್ವ ರಾಷ್ಟ್ರ ಸಂಸ್ಥೆಯ ಸನದ್ ನ ಪ್ರಕಾರ ರಕ್ಷಿಸಿ ಪೋಷಿಸಿ ಕಾಪಾಡಬೇಕಾಗಿದೆ ಎಂದರು.

ಪಾದಯಾತ್ರೆಯಲ್ಲಿ ಕಡೆಮಾಡ ಕುಸುಮ್ ಜೋಯಪ್ಪ, ಅಜ್ಜಿನಿಕಂಡ ಇನಿತಾ ಮಾಚಯ್ಯ, ನಾಡ್ ತಕ್ಕರಾದ ಪಂದಿಮಾಡ ರಮೇಶ್, ನಾಡ್ ತಕ್ಕ ಅಡ್ಡಂಡ ಪ್ರಕಾಶ್, ತೀತಮಾಡ ವಾಸು, ಕೊಲ್ಲಿರ ಬೋಪಣ್ಣ, ಕಡೆಮಾಡ ಅನಿಲ್, ತೀತಮಾಡ ಪೂವಣ್ಣ, ತೀತಮಾಡ ಕರುಂಬಯ್ಯ ಮತ್ತಿತರರು ಇದ್ದರು.