ಜಿಲ್ಲೆ

ಸಿಎನ್‌ಸಿಯಿಂದ ಧರಣಿ: ಹಕ್ಕೊತ್ತಾಯ ಮಂಡನೆ

ಮಡಿಕೇರಿ: ವಿಶ್ವ ರಾಷ್ಟ್ರ ಸಂಸ್ಥೆಯ ಜಾಗತಿಕ ಆದಿಮ ಸಂಜಾತ ಜನಾಂಗಗಳ ಹಕ್ಕುಗಳ ದಿನಾಚರಣೆಯ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಜಿಲ್ಲಾಧಿಕಾರಿಗಳ ಕಚೇರಿ ಭವನದ ಎದುರು ಶನಿವಾರ ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸಿ ಕೊಡವರ ಪರವಾದ ವಿವಿಧ ಹಕ್ಕುಗಳನ್ನು ಮಂಡಿಸಿತು.

ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, ಸಾಂವಿಧಾನಿಕ ಹಕ್ಕುಗಳಿಂದ ವಂಚಿತವಾಗಿರುವ ಆದಿಮಸಂಜಾತ ಕೊಡವ ಬುಡಕಟ್ಟು ಜನರ ಬೇಡಿಕೆಗಳ ಬಗ್ಗೆ ದೇಶದ ಆಡಳಿತ ವ್ಯವಸ್ಥೆ ಮತ್ತು ವಿಶ್ವದ ಗಮನ ಸೆಳೆಯವ ಸಲುವಾಗಿ ನಿರಂತರವಾಗಿ ಶಾಂತಿಯುತ ಧರಣಿ ಸತ್ಯಾಗ್ರಹಗಳನ್ನು ನಡೆಸಲಾಗುತ್ತಿದೆ. ಕೊಡವರು ಈ ಪವಿತ್ರ ಕೊಡವ ನೆಲದ ಮೂಲನಿವಾಸಿ ಆದಿಮಸಂಜಾತ ಬುಡಕಟ್ಟು ಸಮುದಾಯದವರಾಗಿದ್ದಾರೆ. ಕೊಡವರಿಗಿರುವ ಏಕೈಕ ನೆಲೆ ಕೊಡವ ಲ್ಯಾಂಡ್ ಕೊಡವರ ಸಾಂಪ್ರದಾಯಿಕ ಹಾಗೂ ಅವಿಭಾಜ್ಯ ಮಾತೃಭೂಮಿಯಾಗಿದೆ. ಕೊಡವರ ಜನ್ಮಭೂಮಿ ಈ ಭೂಮಂಡಲದಷ್ಟೇ ಪ್ರಾಚೀನವಾಗಿದೆ. ಕೊಡವ ಬುಡಕಟ್ಟು ಜನಾಂಗವು ಮಾನವ ಜನಾಂಗದಷ್ಟೇ ಹಳೆಯದಾಗಿದೆ. ಈ ಕೊಡವ ಮಣ್ಣಿನಲ್ಲಿ ನಮ್ಮ ಐತಿಹಾಸಿಕ ನಿರಂತರತೆಯನ್ನು ಶಾಸನಬದ್ಧವಾಗಿ ಅನುಮೋದಿಸಬೇಕು ಎಂದು ಆಗ್ರಹಿಸಿದರು.

ದೇವಟ್ ಪರಂಬು ಕೊಡವ ನರಮೇಧದ ಸ್ಮಾರಕ ಸ್ಥಳ ಮತ್ತು ಕೊಡವರ ಪವಿತ್ರ ತೀರ್ಥಕ್ಷೇತ್ರ ತಲಕಾವೇರಿಯನ್ನು ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ವಿಶ್ವ ರಾಷ್ಟ್ರ ಸಂಸ್ಥೆ ಆದಿಮಸಂಜಾತರ ಹಕ್ಕುಗಳಡಿಯಲ್ಲಿ ಸಾಂವಿಧಾನಿಕವಾಗಿ ರಕ್ಷಿಸಬೇಕು. ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕುಗಳನ್ನು ಒಳಗೊಂಡಂತೆ ಕೊಡವಲ್ಯಾಂಡ್‌ನ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಸ್ವ-ಆಡಳಿತವನ್ನು ನೀಡಬೇಕೆಂದು ಒತ್ತಾಯಿಸಿದರು.

ನಮ್ಮ ಭಾಷೆ ಕೊಡವ ತಕ್ ಅನ್ನು ೮ನೇ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಬೇಕು. ಕೊಂಕಣಿ ಮತ್ತು ತುಳು ಭಾಷೆಗೆ ಸಮಾನವಾಗಿ ರಾಜ್ಯದ ೩ನೇ ಅಧಿಕೃತ ಭಾಷೆಯಾಗಿ ಗುರುತಿಸಬೇಕು. ನಮ್ಮ ಸಂವಿಧಾನದ ೩೪೭, ೩೫೦ಂ ಮತ್ತು ೩೫೦ಃ ವಿಧಿಗಳ ಅಡಿಯಲ್ಲಿ ಪಠ್ಯಕ್ರಮ ಮತ್ತು ಆಡಳಿತದಲ್ಲಿ ಕೊಡವ ತಕ್ ಅನ್ನು ಪರಿಚಯಿಸಬೇಕು. ಕೊಡವ ಜಾನಪದ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಬೇಕು. ಕೊಡವ ಜಾನಪದ ಪರಂಪರೆಯನ್ನು ಜೀವಂತಗೊಳಿಸಲು, ಸರ್ಕಾರವು ವಿಶ್ವ ಕೊಡವಾಲಜಿ ಸಂಶೋಧನಾ ಕೇಂದ್ರ ಮತ್ತು ಕೊಡವ ಉನ್ನತ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲು ನಮಗೆ ಭೂಮಿಯನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭ ಚೋಳಪಂಡ ಜ್ಯೋತಿ, ಪಟ್ಟಮಾಡ ಲಲಿತ, ನಂದಿನೆರವಂಡ ರೇಖಾ ನಾಚಪ್ಪ, ಕಲಿಯಂಡ ಪ್ರಕಾಶ್, ಬೊಟ್ಟಂಗಡ ಗಿರೀಶ್, ಕಿರಿಯಮಾಡ ಶೆರಿನ್, ಅರೆಯಡ ಗಿರೀಶ್, ಮಂದಪಂಡ ಮನೋಜ್, ಪುದಿಯೊಕ್ಕಡ ಪೃಥ್ವಿ, ಮಣವಟ್ಟಿರ ಚಿಣ್ಣಪ್ಪ, ಪುಟ್ಟಿಚಂಡ ದೇವಯ್ಯ, ಚೋಳಪಂಡ ನಾಣಯ್ಯ, ಚಂಗಂಡ ಚಾಮಿ, ತೋತ್ಯಂಡ ಬೊಳ್ಳಿಯಪ್ಪ, ಕೂಪದಿರ ಸಾಬು, ಅಪ್ಪಾರಂಡ ಪ್ರಸಾದ್, ತೋಲಂಡ ಸೋಮಯ್ಯ, ಕೂಪದಿರ ಉತ್ತಪ್ಪ, ಪಾಲೆಕಂಡ ಪ್ರತಾಪ್ ಹಾಗೂ ಪಟ್ಟಮಾಡ ಪೃಥ್ವಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.