ಚಿಕ್ಕನಾಯಕನಹಳ್ಳಿ: ಕರೊನಾ ಸೇನಾನಿಗಳು ಎಂಬ ಹಣೆಪಟ್ಟಿ ಕೊಟ್ಟು ಕೇವಲ ಹಾರ ತುರಾಯಿಗಳನ್ನು ಹಾಕಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಗುತ್ತದೆ, ಆದರೆ ಅವರಿಗೆ ಬರಬೇಕಾದ ಸೇವಾ ಭತ್ಯೆಗಳು, ಸರ್ಕಾರದ ಸೌಲಭ್ಯಗಳನ್ನು ನೀಡುವಲ್ಲಿ ಸ್ಥಳೀಯ ಪುರಸಭೆ ವಿಲವಾಗಿದೆ.
ಕರೊನಾ ಸಂದರ್ಭದಲ್ಲಿ ಇಡೀ ಪಟ್ಟಣವನ್ನು ಸ್ವಚ್ಛವಾಗಿಟ್ಟುಕೊಂಡಿರುವ ಪೌರ ಕಾರ್ಮಿಕರಿಗೆ ಸೇವಾ ಸವಲತ್ತುಗಳು ಸಿಕ್ಕಿಲ್ಲ. ಪುರಸಭೆಯಲ್ಲಿ ಕಾಯಂ 15, ಹೊರಗುತ್ತಿಗೆಯ 17 ಪೌರ ಕಾರ್ಮಿಕರು ಇದ್ದು, ಬೆಳಗ್ಗೆ 4.30ರಿಂದ ಬೀದಿ ಕಸ ಗುಡಿಸುವುದು, ರಸ್ತೆಬದಿಯಲ್ಲಿ ಸ್ವಚ್ಛತೆ, ಚರಂಡಿ ಸ್ವಚ್ಛತೆ, ಬೀದಿದೀಪಗಳ ಕೆಲಸ, ಕಚೇರಿ ಸ್ವಚ್ಛತೆ, ಕಸ ವಿಲೇವಾರಿ ಘಟಕದಲ್ಲಿ, ಕಸದ ವಾಹನಗಳಲ್ಲಿ ಡ್ರೈವರ್‌ಗಳಾಗಿ ಕೆಲಸ ನಿರ್ವಹಿಸುತ್ತಾರೆ. ಆದರೆ ಇವರಿಗೆ ಸಕಾಲಕ್ಕೆ ಸಂಬಳವೇ ಸಿಗುತ್ತಿಲ್ಲ.
2011ರಿಂದ 2018ರವರೆಗೆ ಯಾವ ಪೌರಕಾರ್ಮಿಕರಿಗೆ ಎಷ್ಟು ಇಎಸ್‌ಐ, ಪಿಎಫ್ ಜಮೆ ಆಗಿದೆ ಎಂಬುದರ ಬಗ್ಗೆ ಪೌರಕಾರ್ಮಿಕರಿಗೆ ಪುರಸಭೆ ಮಾಹಿತಿ ನೀಡಿಲ್ಲ ಎಂದು ತಿಳಿದುಬಂದಿದೆ. ಇನ್ನು ಪೌರಕಾರ್ಮಿಕರಿಗೆ ಮನೆಗಳನ್ನು ಕಟ್ಟಿಕೊಳ್ಳಲು ಸರ್ಕಾರ ಅನುದಾನ ನೀಡಿದ್ದರೂ ಮೊದಲ ಎರಡು ಬಿಲ್ ನೀಡಿ ಕೊನೆಯ ಒಂದೂವರೆ ಲಕ್ಷ ರೂಪಾಯಿ ಬಿಲ್ ನೀಡದೇ ಇರುವುದರಿಂದ ನಿರ್ಮಾಣ ಹಂತದ ಮನೆಗಳು ಅರ್ಧಕ್ಕೆ ನಿಂತಿವೆ. ಸಕಾಲಕ್ಕೆ ಸಂಬಳ ಪಡೆಯುವ ಮೇಲಧಿಕಾರಿಗಳು, ಪಟ್ಟಣ ಸ್ವಚ್ಛತೆಗೆ ಶ್ರಮಿಸುವ ಪೌರಕಾರ್ಮಿಕರ ಹಿತವನ್ನೂ ಕಾಯಬೇಕಿದೆ. ಕೇವಲ ಸರ್ಕಾರದ ಆದೇಶದಂತೆ ಪೌರಕಾರ್ಮಿಕರ ದಿನ ಆಚರಿಸುವ ಅಧಿಕಾರಿಗಳು ಅವರಿಗೆ ಸಿಗಬೇಕಾಗಿರುವ ಸವಲತ್ತು ನೀಡಿ ಕಾಳಜಿ ತೋರಬೇಕಿದೆ.
ರಜೆ ಭತ್ಯೆಗಳನ್ನು ನೀಡಿಲ್ಲ, ಏನಾದರೂ ಕೇಳಿದರೆ ದೌರ್ಜನ್ಯ ಮಾಡುತ್ತಾರೆ. ನಮ್ಮ ಕಷ್ಟಗಳನ್ನು ನಾವು ಎಲ್ಲೂ ಹೇಳಿಕೊಳ್ಳುವಂತಿಲ್ಲ. ಮನೆಗೆ ಗ್ರಾೃಂಟ್ ನೀಡಿದ್ದು, ಅದನ್ನು ಇನ್ನೂ ಸರಿಯಾಗಿ ನೀಡಿಲ್ಲ. ಪೌರ ಕಾರ್ಮಿಕರು ಸಮಸ್ಯೆ ಬಗೆಹರಿಸಬೇಕು. ಆದರೆ ಯಾವ ಉದ್ದೇಶಕ್ಕೆ ಪೌರಕಾರ್ಮಿಕರ ದಿನ ಆಚರಿಸುತ್ತಾರೋ ಗೊತ್ತಿಲ್ಲ. ಹೆಸರು ಹೇಳಲು ಇಚ್ಛಿಸದ ಪೌರ ಕಾರ್ಮಿಕ ಪೌರಕಾರ್ಮಿಕರ ಕರ್ತವ್ಯಗಳ ಬಗ್ಗೆ ಅರಿವಿದ್ದು, ಅವರ ಸಮಸ್ಯೆಗಳ ಬಗ್ಗೆ ಹಂತಹಂತವಾಗಿ ಮಾಹಿತಿ ಪಡೆದು ಎಲ್ಲ ಸದಸ್ಯರೊಂದಿಗೆ ಚರ್ಚೆ ಮಾಡಿ ಬಗೆಹರಿಸುತ್ತೇನೆ. ಇಎಸ್‌ಐ, ಪಿಎಫ್ ಬಗ್ಗೆ ಮಾಹಿತಿ ಪಡೆಯುತ್ತೇನೆ. ಮನೆ ಗ್ರಾೃಂಟ್ ವಿಚಾರದಲ್ಲಿ ಅವರಿಗೆ ರಾಜ್ಯಸರ್ಕಾರದಿಂದ ಬರುವ ಹಣವನ್ನು ಜಮೆ ಮಾಡಲಾಗಿದ್ದು ಕೇಂದ್ರದಿಂದ ಹಣ ಬರಬೇಕಾಗಿದೆ. ರೇಣುಕಮ್ಮ, ಪುರಸಭೆ ಉಪಾಧ್ಯಕ್ಷೆ ಪೌರ ಕಾರ್ಮಿಕರಿಗೆ ಸಿಗಬೇಕಾದ ಎಲ್ಲ ಸವಲತ್ತುಗಳನ್ನು ನೀಡುತ್ತಿದ್ದೇವೆ. ಆದರೆ ಅವರು ಸರಿಯಾಗಿ ಕೆಲಸ ಮಾಡ್ತಿಲ್ಲ. ಸರಿಯಾಗಿ ಕರ್ತವ್ಯ ನಿರ್ವಹಿಸಿದರೆ ಸರಿಯಾಗಿ ಸಂಬಳ, ಭತ್ಯೆ ನೀಡುತ್ತೇವೆ. ಇಎಸ್‌ಐ, ಪಿಎಫ್ ಬಗ್ಗೆ ನಾವು ಸರಿಯಾಗಿ ದಾಖಲೆ ನಿರ್ವಹಿಸಿದ್ದೇವೆ. ಶ್ರೀನಿವಾಸ್, ಪುರಸಭಾ ಮುಖ್ಯಾಧಿಕಾರಿ