ರೋಣ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.15ರಂದು ತಾಲೂಕಿಗೆ ಭೇಟಿ ನೀಡಲಿದ್ದು, 200 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಅನೇಕ ಕಾಮಗಾರಿ ಉದ್ಘಾಟನೆ ನೆರವೇರಿಸುವರು ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.
ಪಟ್ಟಣದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಮಂಗಳವಾರ ಕರೆದಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂದು ಅನೇಕ ಸಚಿವರೂ ಆಗಮಿಸಲಿದ್ದಾರೆ. ಕಾರ್ಯಕ್ರಮದ ಯಶಸ್ಸಿಗೆ ಕಾರ್ಯಕರ್ತರು ಶ್ರಮಿಸಬೇಕು. ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ 200 ಕೋಟಿ ರೂ. ಅನುದಾನ ತರಲಾಗಿದೆ ಎಂದರು.
ಪುರಸಭೆ ಸದಸ್ಯ ಸಂಗನಗೌಡ ಪಾಟೀಲ ಮಾತನಾಡಿ, ರಾಜ್ಯ ಸರ್ಕಾರ ರಾಜ್ಯದ 1.20 ಕೋಟಿಗೂ ಅಧಿಕ ಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳನ್ನು ತಲುಪಿಸಿದೆ. ಇದರಿಂದ ಬಡ ಕುಟುಂಬಗಳಿಗೆ ತಿಂಗಳಿಗೆ ಐದು ಸಾವಿರ ರೂ.ವರೆಗೆ ಉಳಿತಾಯವಾಗುತ್ತಿದೆ. ಇದನ್ನರಿತ ನಾಡಿನ ಜನರು ಕಾಂಗ್ರೆಸ್ ಪಕ್ಷದ ಪರವಾಗಿ ನಿಂತಿದ್ದಾರೆ ಎಂದರು.
ವಿ.ಆರ್. ಗುಡಿಸಾಗರ ಮಾತನಾಡಿ, ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ 50 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ. ಮತಕ್ಷೇತ್ರದಲ್ಲಿ ಗ್ಯಾರಂಟಿ ಯೋಜನೆಗಳ ಲಾಭವನ್ನು ಎಲ್ಲ ಕುಟುಂಬಗಳು ಪಡೆಯುತ್ತಿವೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಆಡಳಿತವನ್ನು ಮೆಚ್ಚಿಕೊಂಡು ಸ್ವಯಂ ಪ್ರೇರಿತರಾಗಿ ಜನ ಆಗಮಿಸುತ್ತಾರೆ ಎಂದರು.
ಯುಸೂಫ್ ಇಟಗಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಹರಡುತ್ತಿರುವ ಸುಳ್ಳು ಪ್ರಚಾರಗಳಿಗೆ ಜನ ಕಿವಿಗೊಡುತ್ತಿಲ್ಲ. ಇದಕ್ಕೆ ಸಾಕ್ಷಿ ಎನ್ನುವಂತೆ ರಾಜ್ಯದ ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದರು.
ವೀರಣ್ಣ ಶೆಟ್ಟರ, ಸಂಗನಗೌಡ ಪಾಟೀಲ, ಪ್ರಭು ಮೇಟಿ, ಪರಶುರಾಮ ಅಳಗವಾಡಿ, ವಿ.ಬಿ. ಸೋಮನಕಟ್ಟಿಮಠ, ಆನಂದ ಚಂಗಳಿ, ಸಂಗು ನವಲಗುಂದ, ಸೋಮು ನಾಗರಾಜ, ಇಸ್ಮಾಯಿಲ್ ಹೊರಪೇಟಿ, ನಾಜಬೇಗಂ ಯಲಿಗಾರ, ಎಸ್.ಎಚ್. ಸೋಂಪುರ, ಗೀತಾ ಮಾಡಲಗೇರಿ, ದುರ್ಗಪ್ಪ ಹಿರೇಮನಿ ಇತರರಿದ್ದರು.
ನಾಡಿನ ಏಕೀಕರಣಕ್ಕಾಗಿ ಹೋರಾಡಿದ ದಿ. ಅಂದಾನಪ್ಪ ದೊಡ್ಡಮೇಟಿ ಅವರ ಸ್ಮಾರಕ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಚಾಲನೆ ನೀಡುವರು. ಎರಡು ಎಕರೆ ಪ್ರದೇಶದಲ್ಲಿ ಮ್ಯೂಜಿಯಂ ಹಾಗೂ ಲೇಜರ್ ಶೋ ಮೂಲಕ ಮಹನೀಯರ ಹೋರಾಟದ ಇತಿಹಾಸವನ್ನು ಇಂದಿನ ಪಿಳಿಗೆಗೆ ತಿಳಿಸಲಾಗುವುದು. ಜಿ. ಎಸ್. ಪಾಟೀಲ, ಶಾಸಕ